ಪೊನ್ನಂಪೇಟೆ, NEWS DESK ಅ.19: ಪೊನ್ನಂಪೇಟೆ ತಾಲ್ಲೂಕಿನ ಟಿ. ಶೆಟ್ಟಿಗೇರಿ ಭಾಗಕ್ಕೆ ವಿರಾಜಪೇಟೆ ಕ್ಷೇತ್ರದ ಶಾಸಕರು ಹಾಗೂ ಮಾನ್ಯ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅವರು ಇಂದು ಭೇಟಿ ನೀಡಿ, ಶಾಸಕರ ಅನುದಾನದಲ್ಲಿ ₹10 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ನೂತನ ಆಟೋ ತಂಗುದಾಣವನ್ನು ಲೋಕಾರ್ಪಣೆಗೊಳಿಸಿದರು.
ನೂತನ ಆಟೋ ತಂಗುದಾಣವನ್ನು ಉದ್ಘಾಟಿಸಿ ಶುಭ ಹಾರೈಸಿದ ಶಾಸಕರು, ಬಳಿಕ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು.
ಕ್ಷೇತ್ರದಾದ್ಯಂತ ಆಟೋ ಚಾಲಕರು ಹಾಗೂ ಮಾಲೀಕರ ಅನುಕೂಲಕ್ಕಾಗಿ ಮತ್ತು ಸಾರ್ವಜನಿಕರಿಗೆ ಆಟೋ ಸಂಚಾರ ಸೇವೆ ಸುಗಮವಾಗುವ ಉದ್ದೇಶದಿಂದ ಸರ್ಕಾರದ ವತಿಯಿಂದ ಆಟೋ ತಂಗುದಾಣಗಳನ್ನು ನಿರ್ಮಿಸಿಕೊಡಲಾಗುತ್ತಿದೆ ಎಂದು ತಿಳಿಸಿದರು.
ಬಿಸಿಲು ಹಾಗೂ ಮಳೆಯ ಸಂದರ್ಭದಲ್ಲಿ ಆಟೋ ಚಾಲಕರು ಸುರಕ್ಷಿತವಾಗಿ ತಮ್ಮ ವಾಹನಗಳನ್ನು ನಿಲುಗಡೆ ಮಾಡಲು ಈ ತಂಗುದಾಣಗಳು ಸಹಕಾರಿಯಾಗಲಿವೆ. ಅಲ್ಲದೆ, ಸಾರ್ವಜನಿಕರು ಒಂದೇ ಸ್ಥಳದಲ್ಲಿ ಆಟೋ ಸೇವೆಯನ್ನು ಸುಲಭವಾಗಿ ಪಡೆಯಲು ಅನುಕೂಲವಾಗಲಿದೆ ಎಂದರು.
ಸಾರ್ವಜನಿಕರು ಈ ಸೌಲಭ್ಯದ ಸದುಪಯೋಗ ಪಡೆದುಕೊಳ್ಳಬೇಕು. ಆಟೋ ಚಾಲಕರು ಜನಸಾಮಾನ್ಯರಿಗೆ ಹೊರೆಯಾಗದ ರೀತಿಯಲ್ಲಿ ಸೇವೆ ಸಲ್ಲಿಸುವುದರೊಂದಿಗೆ ತಮ್ಮ ಕರ್ತವ್ಯವನ್ನು ಜವಾಬ್ದಾರಿಯಿಂದ ನಿರ್ವಹಿಸಬೇಕು ಎಂದು ಶಾಸಕರು ಕಿವಿಮಾತು ಹೇಳಿದರು.
ಇದೇ ಸಂದರ್ಭದಲ್ಲಿ ಶಾಸಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತಿತೀರ ಧರ್ಮಜ ಉತ್ತಪ್ಪ, ಬ್ಲಾಕ್ ಅಧ್ಯಕ್ಷ ಮಿದೇರಿರ ನವೀನ್, ವಲಯ ಅಧ್ಯಕ್ಷ ತಿತೀರ ಪ್ರಭು, ತಾಲ್ಲೂಕು ಬಗರ್ ಹುಕುಂ ಅಧ್ಯಕ್ಷ ಅಣ್ಣಳ್ಳಮಾಡ ಲಾಲಾ ಅಪ್ಪಣ್ಣ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಕೆ.ಎಂ. ಬಾಲಕೃಷ್ಣ, ಡಿಸಿಸಿ ಸದಸ್ಯರಾದ ಚೊಟ್ಟೆಯಂಡಮಾಡ ವಿಶು, ಪೆಮ್ಮಂಡ ರಾಜ, ಮುಕಟೀರ ಸಂದೀಪ್, ಪಕ್ಷದ ಹಿರಿಯ ಮುಖಂಡರಾದ ತಿತೀರ ಮಂದಣ್ಣ, ಅಪ್ಪಚಂಗಡ ಮೋಟಯ್ಯ, ಅಲೆಮಾಡ ಸೋಮಣ್ಣ, ಚೊಟ್ಟೆಯಂಡಮಾಡ ಉದಯ, ಪಾಲ್ವಿನ್ ಪೂಣಚ್ಚ, ವಿಶ್ವನಾಥ್, ಮಾಣೀರ ವಿಜಯ ನಂಜಪ್ಪ, ಕಟ್ಟೇರ ವಿಶ್ವನಾಥ್, ಪ್ರವೀಣ್ ಪೊನ್ನಪ್ಪ ಸೇರಿದಂತೆ ಪಕ್ಷದ ಕಾರ್ಯಕರ್ತರು ಹಾಗೂ ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು.

















