ಮಡಿಕೇರಿ NEWS DESK ಅ.27 : ಮಡಿಕೇರಿ ನಗರದಲ್ಲಿ ಬಿಜೆಪಿ ವತಿಯಿಂದ ಇತ್ತೀಚೆಗೆ ನಡೆದ ಪ್ರತಿಭಟನೆಯ ಸಂದರ್ಭ ಶಾಸಕ ಡಾ.ಮಂತರ್ ಗೌಡ ಅವರ ಭಾವಚಿತ್ರವಿದ್ದ ಫ್ಲೆಕ್ಸ್ ಹರಿದು ಹಾನಿಗೊಳಿಸಿರುವ ಘಟನೆ ಖಂಡನೀಯವೆoದು ಮಡಿಕೇರಿ ಬ್ಲಾಕ್ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿ ಹಂಚೆಟ್ಟಿರ ಮನು ಮುದ್ದಪ್ಪ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟನೆ ನಡೆಸುವುದು ಪ್ರತಿಯೊಬ್ಬರ ಹಕ್ಕಾಗಿದ್ದು, ತಮ್ಮ ಅಭಿಪ್ರಾಯ ಹಾಗೂ ಅಸಮಾಧಾನವನ್ನು ಶಾಂತಿಯುತವಾಗಿ ವ್ಯಕ್ತಪಡಿಸಬಹುದು. ಆದರೆ, ಪ್ರತಿಭಟನೆಯ ನೆಪದಲ್ಲಿ ಶಾಸಕರ ಭಾವಚಿತ್ರವಿರುವ ಫ್ಲೆಕ್ಸ್ ಗೆ ಹಾನಿ ಮಾಡುವುದು ಸರಿಯಾದ ಕ್ರಮವಲ್ಲ ಎಂದು ತಿಳಿಸಿದ್ದಾರೆ. ರಾಜಕೀಯ ಭಿನ್ನಾಭಿಪ್ರಾಯಗಳು ಏನೇ ಇದ್ದರೂ, ಸಾರ್ವಜನಿಕ ಜೀವನದಲ್ಲಿರುವ ಜನಪ್ರತಿನಿಧಿಗಳ ಬಗ್ಗೆ ಗೌರವಯುತವಾಗಿ ನಡೆದುಕೊಳ್ಳುವುದು ಅಗತ್ಯವಾಗಿದೆ. ರಾಜಕೀಯ ವಿಚಾರಗಳನ್ನು ಪ್ರತಿಭಟನೆ, ಚರ್ಚೆ ಹಾಗೂ ಪ್ರಜಾಸತ್ತಾತ್ಮಕ ಮಾರ್ಗಗಳ ಮೂಲಕ ವ್ಯಕ್ತಪಡಿಸಬೇಕೇ ಹೊರತು, ಇಂತಹ ಕೃತ್ಯಗಳ ಮೂಲಕ ಅಲ್ಲ ಎಂದು ಹೇಳಿದ್ದಾರೆ. ರಾಜಕೀಯ ಪಕ್ಷಗಳ ಕಾರ್ಯಕರ್ತರು ಸಾರ್ವಜನಿಕವಾಗಿ ಸಂಯಮ ಕಾಯ್ದುಕೊಳ್ಳಬೇಕು. ಪ್ರತಿಭಟನೆಗಳನ್ನು ಶಾಂತಿಯುತವಾಗಿ ನಡೆಸುವ ಮೂಲಕ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿಯಬೇಕು. ರಾಜಕೀಯ ಸಂಘರ್ಷಗಳು ವೈಯಕ್ತಿಕ ದ್ವೇಷಕ್ಕೆ ತಿರುಗದಂತೆ ಎಲ್ಲ ಪಕ್ಷಗಳ ಮುಖಂಡರು ಹಾಗೂ ಕಾರ್ಯಕರ್ತರು ಜವಾಬ್ದಾರಿಯಿಂದ ನಡೆದುಕೊಳ್ಳಬೇಕು ಮನು ಮುದ್ದಪ್ಪ ಒತ್ತಾಯಿಸಿದ್ದಾರೆ. ಒಬ್ಬ ಜನಪರ ಶಾಸಕರ ಫ್ಲೆಕ್ಸ್ ಹರಿದು ಕ್ಷುಲ್ಲಕ ರಾಜಕಾರಣ ಮಾಡುವುದು ಕೊಡಗಿನ ರಾಜಕಾರಣಕ್ಕೆ ಶೋಭೆ ತರುವುದಿಲ್ಲ. ಇದು ಜಿಲ್ಲೆಯ ರಾಜಕೀಯ ಸಂಸ್ಕೃತಿ ಕೂಡ ಅಲ್ಲದೆಂದು ತಿಳಿಸಿರುವ ಮನು ಮುದ್ದಪ್ಪ, ತಪ್ಪಿತಸ್ಥರ ವಿರುದ್ಧ ಪೊಲೀಸ್ ಇಲಾಖೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

















