ಮಡಿಕೇರಿ NEWS DESK ಅ.27 : ಪ್ರತಿಭಟನೆಯ ನೆಪದಲ್ಲಿ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಲು ಮುಂದಾದ ಬಿಜೆಪಿ ಕಾರ್ಯಕರ್ತರು ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅವರ ಫ್ಲೆಕ್ಸ್ ನ್ನು ಹರಿದು ಹಾನಿಗೊಳಿಸಿರುವುದು ಖಂಡನೀಯವೆoದು ಮಡಿಕೇರಿ ನಗರ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಶಿಕಲಾ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ರಾಜಕೀಯ ಭಿನ್ನಾಭಿಪ್ರಾಯಗಳನ್ನು ಪ್ರಜಾಸತ್ತಾತ್ಮಕ ರೀತಿಯಲ್ಲಿ ವ್ಯಕ್ತಪಡಿಸಬೇಕೇ ಹೊರತು, ಸಾರ್ವಜನಿಕವಾಗಿ ಅಳವಡಿಸಿರುವ ಶಾಸಕರ ಫ್ಲೆಕ್ಸ್ ನ್ನು ಹರಿದು ಹಾನಿಗೊಳಿಸುವುದು ಸರಿಯಾದ ಕ್ರಮವಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಗೆ ವಿರುದ್ಧವಾಗಿರುವ ಬಿಜೆಪಿಯ ಈ ನಡೆ ಹತಾಶ ಮನೋಭಾವಕ್ಕೆ ಸಾಕ್ಷಿಯಾಗಿದೆ ಎಂದು ತಿಳಿಸಿದ್ದಾರೆ. ಪ್ರತಿಭಟನೆ ನಡೆಸುವ ಸಂದರ್ಭ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವುದು ಎಲ್ಲರ ಜವಾಬ್ದಾರಿಯಾಗಿದೆ. ರಾಜಕೀಯ ಪಕ್ಷಗಳ ಕಾರ್ಯಕರ್ತರು ಪರಸ್ಪರ ಗೌರವದಿಂದ ವರ್ತಿಸಬೇಕು. ಫ್ಲೆಕ್ಸ್ ಗಳನ್ನು ಹರಿದು ಹಾನಿಗೊಳಿಸುವುದು ಕೊಡಗಿನ ರಾಜಕೀಯ ಸಂಸ್ಕೃತಿಯಲ್ಲ. ಭಿನ್ನಾಭಿಪ್ರಾಯಗಳಿದ್ದಲ್ಲಿ ಅವುಗಳನ್ನು ಶಾಂತಿಯುತವಾಗಿ ವ್ಯಕ್ತಪಡಿಸಬೇಕು. ಇಂತಹ ಘಟನೆಗಳು ಮರುಕಳಿಸದಂತೆ ಸಂಬoಧಪಟ್ಟವರು ಎಚ್ಚರಿಕೆ ವಹಿಸಬೇಕು. ಬಿಜೆಪಿಯ ಹಿರಿಯ ಮುಖಂಡರು ಆ ಪಕ್ಷದ ಕಾರ್ಯಕರ್ತರಿಗೆ ಉತ್ತಮ ರಾಜಕೀಯ ಮಾರ್ಗದರ್ಶನ ನೀಡಬೇಕೆ ಹೊರತು ಅಶಾಂತಿಗೆ ಪ್ರಚೋದನೆ ನೀಡಬಾರದು ಎಂದು ಒತ್ತಾಯಿಸಿದ್ದಾರೆ. ಘಟನೆಗೆ ಸಂಬoಧಿಸಿದoತೆ ಪೊಲೀಸರು ತಪ್ಪಿತಸ್ಥರನ್ನು ಗುರುತಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಕಚೇರಿಗೆ ಬಿಜೆಪಿ ಮಂದಿ ಮುತ್ತಿಗೆ ಹಾಕುವುದನ್ನು ತಡೆಯಬೇಕು ಎಂದು ಆಗ್ರಹಿಸಿರುವ ಶಶಿಕಲಾ, ಈ ರೀತಿಯ ಕಾನೂನು ಬಾಹಿರ ಪ್ರತಿಭಟನೆಗಳನ್ನು ಮಹಿಳಾ ಕಾಂಗ್ರೆಸ್ ಸಹಿಸುವುದಿಲ್ಲವೆಂದು ಎಚ್ಚರಿಕೆ ನೀಡಿದ್ದಾರೆ.

















