ಮಡಿಕೇರಿ ಅ.27 NEWS DESK : ನಾಗರಿಕತೆ ಮತ್ತು ಸಂಸ್ಕೃತಿಯ ಉಗಮ ಸ್ಥಾನಗಳಾದ ನದಿ ತೀರಗಳು ತ್ಯಾಜ್ಯಗಳಿಂದ ಕಲುಷಿತಗೊಳ್ಳುತ್ತಿದ್ದು, ಜಲಮೂಲಗಳು ಬರಡಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ವಿರಾಜಪೇಟೆಯ ಅರಮೇರಿ ಕಳಂಚೇರಿ ಮಠದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಅಭಿಪ್ರಾಯಪಟ್ಟರು. ಕಾವೇರಿ ನದಿ ಸ್ವಚ್ಛತಾ ಆಂದೋಲನ ಹಾಗೂ ಅಖಿಲ ಭಾರತೀಯ ಸನ್ಯಾಸಿ ಸಂಘದ ಆಶ್ರಯದಲ್ಲಿ, ಕಾವೇರಿ ರಿವರ್ ವಾಟರ್ ಪ್ರೊಟೆಕ್ಷನ್ ಟ್ರಸ್ಟ್, ಕಾವೇರಿ ರಿವರ್ ಸೇವಾ ಟ್ರಸ್ಟ್ ಮತ್ತು ನಮಾಮಿ ಕಾವೇರಿ ಸಹಯೋಗದೊಂದಿಗೆ ಆಯೋಜಿಸಿರುವ 16ನೇ ವರ್ಷದ ತಲಕಾವೇರಿ–ಪೂಂಪುಹಾರ್ ಕಾವೇರಿ ಜಾಗೃತಿ ರಥಯಾತ್ರೆಗೆ ತಲಕಾವೇರಿಯಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು. ಪ್ರಕೃತಿಯ ನಾಶದಿಂದಾಗಿ ಪ್ರಾಣಿ, ಪಕ್ಷಿಗಳು ಬದುಕಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ಮಾನವನೇ ಪರಿಸರ ನಾಶಕ್ಕೆ ನೇರ ಕಾರಣನಾಗುತ್ತಿದ್ದಾನೆ. ಪ್ರಕೃತಿಯ ಮೇಲೆ ಸವಾರಿ ಮಾಡುವ ಬದಲು ಪ್ರಕೃತಿಯೊಂದಿಗೆ ಹೊಂದಿಕೊಂಡು ಬದುಕಬೇಕು. ಪ್ರತಿಯೊಬ್ಬರೂ ತಮ್ಮ ಅಂತರಾತ್ಮವನ್ನು ಜಾಗೃತಗೊಳಿಸುವುದರೊಂದಿಗೆ ಪ್ರಕೃತಿಯನ್ನು ಆರಾಧಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಸ್ವಾಮೀಜಿ ಕರೆ ನೀಡಿದರು. ಮುಂದಿನ ತಲೆಮಾರಿಗೆ ಬರಡು ಭೂಮಿಯನ್ನು ಹಸ್ತಾಂತರಿಸುವ ಪರಿಸ್ಥಿತಿ ಎದುರಾಗುವ ಆತಂಕವಿದೆ. ಒಂದು ಕಾಲದಲ್ಲಿ ಬೊಗಸೆಯಲ್ಲಿ ನೀರು ಕುಡಿಯುತ್ತಿದ್ದ ಜಲಮೂಲಗಳನ್ನು ಕಲುಷಿತಗೊಳಿಸಿ, ಇಂದು ಬಾಟಲಿ ನೀರನ್ನು ಅವಲಂಬಿಸುವಂತಾಗಿದೆ. ನಾಗರಿಕರೆಂದು ಕರೆಸಿಕೊಳ್ಳುವವರು ಅನಾಗರಿಕರಂತೆ ವರ್ತಿಸುತ್ತಿರುವುದೇ ಇಂತಹ ಪರಿಸ್ಥಿತಿಗೆ ಕಾರಣವಾಗಿದೆ ಎಂದು ಅವರು ವಿಷಾದಿಸಿದರು. ಪರಿಸರ ವ್ಯವಸ್ಥೆಯಲ್ಲಿ ಏರುಪೇರಾಗುತ್ತಿದ್ದು, ಮಳೆಯ ಪ್ರಮಾಣ ಕಡಿಮೆಯಾಗುತ್ತಿದೆ. ಇದರಿಂದ ಜನಜೀವನದ ಮೇಲೆಯೂ ಗಂಭೀರ ಪರಿಣಾಮ ಉಂಟಾಗುವ ಸಾಧ್ಯತೆಯಿದೆ. ಆದ್ದರಿಂದ ಪ್ರತಿಯೊಬ್ಬರೂ ಸ್ವಚ್ಛ ಕಾವೇರಿ, ಸ್ವಚ್ಛ ಪಟ್ಟಣ ಹಾಗೂ ಪರಿಸರ ಸಂರಕ್ಷಣೆಗೆ ಸಂಕಲ್ಪ ಮಾಡಬೇಕು. ಜಾಗೃತಿ ಯಾತ್ರೆಗಳು ಕೇವಲ ಪ್ರವಾಸಕ್ಕೆ ಸೀಮಿತವಾಗದೆ, ಜನರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳಾಗಬೇಕು ಎಂದರು. ದಕ್ಷಿಣ ಭಾರತದ ಸಾಧುಸಂತರ ಸಹಯೋಗದೊಂದಿಗೆ ಕಳೆದ 16 ವರ್ಷಗಳಿಂದ ನಿರಂತರವಾಗಿ ಕಾವೇರಿ ನದಿ ಸ್ವಚ್ಛತೆ ಮತ್ತು ಸಂರಕ್ಷಣೆಯ ಕುರಿತು ಜನಜಾಗೃತಿ ಮೂಡಿಸುತ್ತಿರುವ ಕಾವೇರಿ ನದಿ ಸ್ವಚ್ಛತಾ ಆಂದೋಲನದ ಕಾರ್ಯವನ್ನು ಶ್ಲಾಘಿಸಿದ ಶ್ರೀಗಳು, ರಥಯಾತ್ರೆಗೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಹರಿದ್ವಾರದ ಅಖಂಡ ಪುರಂಧಾಮದ ಸ್ವಾಮಿ ಅನಂತಾನಂದ ಗಿರಿ ಮಹಾರಾಜ್, ನದಿಗಳು, ಜಲಮೂಲಗಳು ಹಾಗೂ ಪ್ರಕೃತಿಯನ್ನು ಆರಾಧಿಸುವ ಮೂಲಕ ಅವುಗಳ ಸಂರಕ್ಷಣೆಗೆ ಕೊಡುಗೆ ನೀಡಲು ಸಾಧ್ಯವಿದೆ ಎಂದರು. ಅಖಿಲ ಭಾರತೀಯ ಸನ್ಯಾಸಿ ಸಂಘದ ಸ್ಥಾಪಕರಾದ ಶ್ರೀ ರಮಾನಂದ ಮಹಾರಾಜ್ ಅವರ ನೇತೃತ್ವದಲ್ಲಿ ಆಗಮಿಸಿದ್ದ 30ಕ್ಕೂ ಅಧಿಕ ಸಾಧುಸಂತರು ಕಾವೇರಿ ದೇವಿಯ ಮೂರ್ತಿಗೆ ಪೂಜೆ ಸಲ್ಲಿಸಿ, ಕುಂಡಿಕೆಯಲ್ಲಿ ವಿಶೇಷ ಪ್ರಾರ್ಥನೆ ನೆರವೇರಿಸಿದರು. ಇದೇ ಸಂದರ್ಭದಲ್ಲಿ 2028ರಲ್ಲಿ ಕುಂಭಕೋಣಂ ಕ್ಷೇತ್ರದಲ್ಲಿ ನಡೆಯಲಿರುವ ಕುಂಭಮೇಳದ ಪ್ರಚಾರದ ಬಿತ್ತಿಪತ್ರಗಳಿಗೆ ಚಾಲನೆ ನೀಡಲಾಯಿತು. ತಲಕಾವೇರಿ ಕ್ಷೇತ್ರದ ತಕ್ಕರಾದ ಕೋಡಿ ಮೋಟಯ್ಯ ಅವರು ಯಾತ್ರೆಗೆ ಶುಭ ಹಾರೈಸಿ, ಕಾವೇರಿ ನದಿ ಸ್ವಚ್ಛತೆ ಮತ್ತು ಸಂರಕ್ಷಣೆಯ ಕಾರ್ಯದಲ್ಲಿ ಪ್ರತಿಯೊಬ್ಬರೂ ಕೈಜೋಡಿಸಬೇಕೆಂದು ಕರೆ ನೀಡಿದರು. ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿಯ ರಾಜ್ಯ ಸಂಚಾಲಕ ಎಂ.ಎನ್. ಚಂದ್ರಮೋಹನ್ ಪ್ರಾಸ್ತಾವಿಕವಾಗಿ ಮಾತನಾಡಿ, 16ನೇ ವರ್ಷದ ಕಾವೇರಿ ಜಾಗೃತಿ ರಥಯಾತ್ರೆಯ ಉದ್ದೇಶ ಹಾಗೂ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು. ತಲಕಾವೇರಿಯಿಂದ ಆರಂಭಗೊಂಡಿರುವ ರಥಯಾತ್ರೆಯಲ್ಲಿ 50ಕ್ಕೂ ಅಧಿಕ ಸಾಧುಸಂತರು ಮತ್ತು ಕಾರ್ಯಕರ್ತರು ಪಾಲ್ಗೊಂಡಿದ್ದಾರೆ. ಕೊಡಗು ಜಿಲ್ಲೆಯ ಭಾಗಮಂಡಲ, ಕುಶಾಲನಗರ ಹಾಗೂ ಕಣಿವೆ ವ್ಯಾಪ್ತಿಯಲ್ಲಿ ಕಾವೇರಿ ನದಿಗೆ ಆರತಿ, ಧಾರ್ಮಿಕ ಕಾರ್ಯಕ್ರಮಗಳು ಮತ್ತು ವಿದ್ಯಾರ್ಥಿಗಳಲ್ಲಿ ಸ್ವಚ್ಛತೆ ಹಾಗೂ ಪರಿಸರ ಸಂರಕ್ಷಣೆಯ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು. ಕೊಡಗು ಜಿಲ್ಲೆಯೊಂದಿಗೆ ಹಾಸನ, ಮಂಡ್ಯ, ಮೈಸೂರು, ಚಾಮರಾಜನಗರ ಹಾಗೂ ಬೆಂಗಳೂರು ವ್ಯಾಪ್ತಿಯಲ್ಲಿಯೂ ಯಾತ್ರೆ ಸಂಚರಿಸಿ ಜಲಮೂಲಗಳ ಸಂರಕ್ಷಣೆಯ ಕುರಿತು ಜನಜಾಗೃತಿ ಮೂಡಿಸಲಿದೆ. ನವೆಂಬರ್ 17ರಂದು ತಮಿಳುನಾಡಿನ ಪೂಂಪುಹಾರ್ನಲ್ಲಿ ಕಾವೇರಿ ನದಿ ಬಂಗಾಳ ಕೊಲ್ಲಿಯನ್ನು ಸೇರುವ ಸಂಗಮ ಸ್ಥಳದಲ್ಲಿ ವಿಶೇಷ ಕಾರ್ಯಕ್ರಮದೊಂದಿಗೆ ಯಾತ್ರೆ ಸಮಾರೋಪಗೊಳ್ಳಲಿದ್ದು, ಕಾವೇರಿ ತೀರ್ಥ ವಿಸರ್ಜನೆ ನೆರವೇರಿಸಲಾಗುವುದು ಎಂದು ಹೇಳಿದರು. ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿಯ ಕೊಡಗು ಜಿಲ್ಲಾ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಕುಶಾಲನಗರದ ಕೊಡಗನ ಹರ್ಷ ಅವರನ್ನು ಸ್ವಾಮೀಜಿಗಳು ಸನ್ಮಾನಿಸಿ ಗೌರವಿಸಿದರು. ಕಾರ್ಯಕ್ರಮದಲ್ಲಿ ಅಖಿಲ ಭಾರತೀಯ ಸನ್ಯಾಸಿ ಸಂಘದ ಪ್ರಮುಖರಾದ ಸ್ವಾಮಿ ವೇದಾನಂದ, ಸ್ವಾಮಿ ಆತ್ಮಾನಂದ ಸರಸ್ವತಿ, ಸ್ವಾಮಿ ಶಿವರಾಮಾನಂದ, ಕಾರ್ಯಕ್ರಮ ಸಂಯೋಜಕ ಸ್ವಾಮಿ ಬಾಲ ರಘುನಾಥಾನಂದ, ಕಾವೇರಿ ನದಿ ಸ್ವಚ್ಛತಾ ಆಂದೋಲನದ ತಮಿಳುನಾಡು ಪ್ರಾಂತ್ಯದ ಸಂಚಾಲಕ ವಾಸು ರಾಮಚಂದ್ರನ್, ನಮಾಮಿ ಕಾವೇರಿಯ ಜಿಲ್ಲಾ ಪ್ರಮುಖರಾದ ವಿಠಲ ಸಾಲಿಯಾನ್, ವನಿತಾ ಚಂದ್ರಮೋಹನ್, ಸುಮನಾ ಮಳಲಗದ್ದೆ, ಧರಣಿ, ಚೈತನ್ಯ ಸೇರಿದಂತೆ ಸನ್ಯಾಸಿ ಸಂಘದ ಸದಸ್ಯರು ಹಾಗೂ ಸ್ವಚ್ಛತಾ ಆಂದೋಲನ ಸಮಿತಿಯ ಪ್ರಮುಖರು ಉಪಸ್ಥಿತರಿದ್ದರು. ತಲಕಾವೇರಿಯಲ್ಲಿ ಚಾಲನೆಗೊಂಡ ರಥಯಾತ್ರೆ ಬಳಿಕ ಭಾಗಮಂಡಲದ ತ್ರಿವೇಣಿ ಸಂಗಮಕ್ಕೆ ತಲುಪಿತು. ಅಲ್ಲಿ ಕಾವೇರಿ ಹಾಗೂ ಗಣಪತಿ ಮೂರ್ತಿಗಳಿಗೆ ಅಷ್ಟಾಭಿಷೇಕ ಮತ್ತು ವಿಶೇಷ ಪೂಜೆ ಸಲ್ಲಿಸಿ ಆರತಿ ಬೆಳಗಲಾಯಿತು. ನಂತರ ಕುಶಾಲನಗರದತ್ತ ಪ್ರಯಾಣ ಬೆಳೆಸಿದ ರಥಯಾತ್ರೆಯ ತಂಡ, ಸಂಜೆ ನಡೆದ 191ನೇ ಮಹಾ ಆರತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿತು.


















