ಮಡಿಕೇರಿ ಅ.27 NEWS DESK : ಪಾಟ್ನಾದ ಕಾರ್ಯಕ್ರಮವೊಂದರಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಮಾಡಿರುವ ವಿವಾದಾತ್ಮಕ ಹೇಳಿಕೆ ಖಂಡಿಸಿ ಕೊಡಗು ಜಿಲ್ಲಾ ಬಿಜೆಪಿ ಸೋಮವಾರದಂದು ನಗರದ ಕೊಡಗು ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಿ ಅಸಮದಾನ ವ್ಯಕ್ತಪಡಿಸಿತು. ಕೊಡಗು ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ, ಮಾಜಿ ವಿಧಾನ ಸಭಾಧ್ಯಕ್ಷರಾದ ಕೆ.ಜಿ.ಬೋಪಯ್ಯ, ಮಾಜಿ ಎಂಎಲ್ಸಿ ಸುನಿಲ್ ಸುಬ್ರಮಣಿ ಅವರ ನೇತೃತ್ವದಲ್ಲಿ ನಗರದ ಇಂದಿರಾಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಯಿತು. ಬಳಿಕ ಹಠಾತ್ತ್ತನೆ ಅಲ್ಲೆ ಸಮೀಪದ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ತೆರಳಿ ಮುತ್ತಿಗೆ ಹಾಕಿದ ಬಿಜೆಪಿ ಪ್ರಮುಖರು ಮತ್ತು ಕಾರ್ಯಕರ್ತರು, ಖರ್ಗೆಯವರು ಪ್ರಧಾನಿ ಮೋದಿಯವರಿಗೆ ಭೇಷರತ್ ಕ್ಷಮೆ ಯಾಚನೆ ಮಾಡಬೇಕೆಂದು ಆಗ್ರಹಿಸಿದರು. ಬಾಯಿಗೆ ಬಂದಂತೆ ಮಾತನಾಡದಿರಿ- ಇಂದಿರಾ ಗಾಂಧಿ ವೃತ್ತದಲ್ಲಿ ಘೋಷಣೆಗಳ ಸಹಿತ ನಡೆದ ಪ್ರತಿಭಟನೆ ಸಂದರ್ಭ ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ ಮಾತನಾಡಿ, ಪ್ರಧಾನ ಮಂತ್ರಿ ಎನ್ನುವುದು ಕೇವಲ ಬಿಜೆಪಿಯರಿಗೆ ಸೀಮಿತವಲ್ಲ. ಪ್ರಧಾನ ಮಂತ್ರಿ ಎನ್ನುವವರು ಇಡೀ ದೇಶಕ್ಕೆ ಅನ್ವಯವಾಗುತ್ತಾರೆ. ಇಂತಹ ಪ್ರಧಾನಿಗಳ ವಿರುದ್ಧ ಟೀಕಿಸುವ ಭರದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರ ಪದಬಳಕೆ ಒಪ್ಪತಕ್ಕದ್ದಲ್ಲವೆಂದು ಸ್ಪಷ್ಟಪಡಿಸಿದರು. ಬಾಯಿಗೆ ಬಂದಂತೆ ಪ್ರಧಾನ ಮಂತ್ರಿ ಮೋದಿ ಅವರನ್ನು ನಿಂದಿಸಿರುವ ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯ ಸಭಾ ವಿರೋಧ ಪಕ್ಷದ ಸ್ಥಾನದಿಂದ ಕೆಳಕ್ಕಿಳಿಯಬೇಕು ಮತ್ತು ಮೋದಿ ಅವರಿಗೆ ಕ್ಷಮೆ ಕೇಳಬೇಕೆಂದು ಒತ್ತಾಯಿಸಿದರು. ರಾಷ್ಟ್ರವ್ಯಾಪಿ ಕಾಂಗ್ರೆಸ್ ಪಕ್ಷ ತನ್ನ ಅಸ್ತಿತ್ವಕ್ಕಾಗಿ ಪರದಾಡುತ್ತಿದೆ. ಇಂತಹ ಅಭದ್ರತೆಯ ಹಿನ್ನೆಲೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನ ಮಂತ್ರಿಗಳ ವಿರುದ್ಧ ಮನ ಬಂದಂತೆ ಮಾತನಾಡುತ್ತಿದ್ದಾರೆ. ಪ್ರಧಾನಿ ಮೋದಿ ಅವರ ತಂದೆಯ ಬಗ್ಗೆ ಮಾತನಾಡಿರುವ ಖರ್ಗೆ ಅವರನ್ನು ಬಂಧಿಸಬೇಕೆಂದು ಆಗ್ರಹಿಸಿದರು. ಪ್ರಸ್ತುತ ದೇಶವನ್ನು ಅಭದ್ರಗೊಳಿಸುವ ಹೋರಾಟಗಳಿಗೆ ಕಾಂಗ್ರೆಸ್ ಪಕ್ಷ ತನ್ನ ಬೆಂಬಲವನ್ನು ನೀಡುತ್ತಾ ಬರುತ್ತಿದೆ. ರಾಷ್ಟ್ರೀಯ ಚುನಾವಣಾ ಆಯೋಗ ನಡೆಸುತ್ತಿರುವ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ(ಎಸ್ಐಆರ್) ಬಗ್ಗೆಯೂ ಕಾಂಗ್ರೆಸ್ ಯಾವುದೇ ಸಮರ್ಥವಾದ ಆಧಾರಗಳಿಲ್ಲದೆ ವಿರೋಧವನ್ನು ವ್ಯಕ್ತಪಡಿಸುತ್ತಿರುವುದಾಗಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಜನ ತಿರುಗಿ ಬೀಳುವ ದಿನ ದೂರವಿಲ್ಲ-ಮಾಜಿ ವಿಧಾನ ಸಭಾಧ್ಯಕ್ಷರಾದ ಕೆ.ಜಿ.ಬೋಪಯ್ಯ ಅವರು ಮಾತನಾಡಿ, ಪ್ರಸ್ತುತ ಕೆಪಿಸಿಸಿ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಅತ್ಯಂತ ಕೀಳು ಮಟ್ಟದ ಪದ ಬಳಕೆಯ ಮೂಲಕ ಟೀಕಿಸಿದ್ದಾರೆ. ಇಂತಹ ವರ್ತನೆಗಳ ಹಿನ್ನೆಲೆಯಲ್ಲಿ ಇಡೀ ರಾಷ್ಟ್ರದ ಜನತೆ ಕಾಂಗ್ರೆಸ್ ವಿರುದ್ಧ ತಿರುಗಿ ಬೀಳುವ ದಿನ ದೂರವಿಲ್ಲವೆಂದು ಕಟುವಾಗಿ ನುಡಿದರು. ಕರ್ನಾಟಕ ಎಂದರೆ ನಾನೆ – ಎಐಸಿಸಿ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರು ದೆಹಲಿಯಲ್ಲಿ ಕುಳಿತÀು, ದೇಶವನ್ನು ಆಳುತ್ತೇನೆಂದು ಹೊರಟಿದ್ದರೆ, ರಾಜ್ಯದಲ್ಲಿರುವ “ಮರಿ” ಖರ್ಗೆಯಾದ ಪ್ರ್ರಿಯಾಂಕ ಖರ್ಗೆ, ಕರ್ನಾಟಕವೆಂದರೆ ನಾನೇ ಎಂಬಂತೆ, ಮುಖ್ಯ ಮಂತ್ರಿಗಳೆ ಲೆಕ್ಕಕ್ಕಿಲ್ಲ ಎಂಬಂತೆ ವರ್ತಿಸುತ್ತಿದ್ದಾರೆ. ಇವರಿಬ್ಬರು ದೇಶವನ್ನು ಯಾವುದೋ ದಿಕ್ಕಿಗೆ ಕೊಂಡೊಯ್ಯುವ ಕನಸು ಕಾಣುತ್ತಿರುವುದಾಗಿ ಲೇವಡಿ ಮಾಡಿದರು. ಇಡೀ ವಿಶ್ವವೇ ಗೌರವಿಸುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಮಲ್ಲಿಕಾರ್ಜು ಖರ್ಗೆ ಅವರು ನಿಂದಿಸುವ ಮೂಲಕ ಇಡೀ ರಾಷ್ಟ್ರಕ್ಕೆ ಅವಮಾನ ಮಾಡಿದ್ದಾರೆ. ಇವರ ಇಂತಹ ವರ್ತನೆಗಳಿಗೆ ತಕ್ಕ ಉತ್ತರವನ್ನು ಮುಂಬರುವ ದಿನಗಳಲ್ಲಿ ಜನತಾ ನ್ಯಾಯಾಲಯ ನೀಡಲಿದೆ ಎಂದರು. ಹಠಾತ್ ಮುತ್ತಿಗೆ- ಪ್ರತಿಭಟನೆಯ ಬಳಿಕ ಹಠಾತ್ತನೆ ಪಕ್ಷದ ಪ್ರಮುಖರು ಮತ್ತು ಕಾರ್ಯಕರ್ತರು ಅಲ್ಲೇ ಸಮೀಪದಲ್ಲಿರುವ ಕಾಂಗ್ರೆಸ್ ಕಚೇರಿಗೆ ತೆರಳಿ ಮುತ್ತಿಗೆ ಹಾಕಿದರು. ಈ ಸಂದರ್ಭ ಪೊಲೀಸರು ಕಾಂಗ್ರೆಸ್ ಕಚೇರಿಗೆ ಬಿಜೆಪಿ ಮಂದಿ ನುಗ್ಗದಂತೆ ತಡೆದರು.ಕೆಲ ಕಾಲ ಕಾಂಗ್ರೆಸ್ ವಿರುದ್ಧ ಘೋಷಣೆಗಳನ್ನು ಕೂಗಿದ ಬಿಜೆಪಿ ಮಂದಿ ಬಳಿಕ ಸ್ಥಳದಿಂದ ತೆರಳಿದರು. ಪ್ರತಿಭಟನೆಯಲ್ಲಿ ಬಿಜೆಪಿ ಪ್ರಮುಖರಾದ ರಾಬಿನ್ ದೇವಯ್ಯ, ಶಾಂತೆಯಂಡ ರವಿ ಕುಶಾಲಪ್ಪ, ತಳೂರು ಕಿಶೋರ್ ಕುಮಾರ್, ಸುವಿನ್ ಗಣಪತಿ, ಮಹೇಶ್ ಜೈನಿ, ಬಿ..ಕೆ. ಜಗದೀಶ್, ಪಿ,ಎಂ. ರವಿ, ಕೆ.ಎಸ್. ರಮೇಶ್, ಸವಿತಾ ರಾಕೇಶ್, ಅಪ್ಪಣ್ಣ, ಜಿ.ಎಂ.ಸತೀಶ್ ಪೈ, ಮನು ಮಂಜುನಾಥ್, ಬೊಳ್ಳಜಿರ ಅಯ್ಯಪ್ಪ ಸೇರಿದಂತೆ ಹಲ ಪ್ರಮುಖರು ಕಾರ್ಯಕರ್ತರು ಪಾಲ್ಗೊಂಡಿದ್ದರು. :: ಮುತ್ತಿಗೆ ವೇಳೆ ಹರಿದ ಬ್ಯಾನರ್ :: ಜಿಲ್ಲಾ ಬಿಜೆಪಿಯಿಂದ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಿ ನಡೆದ ಪ್ರತಿಭಟನೆ ಹಂತದಲ್ಲಿ, ಅಲ್ಲೆ ಸಮೀಪದಲ್ಲಿದ್ದ ಬ್ಯಾನರ್ವೊಂದನ್ನು ಹರಿದು ಹಾಕಿದ ಘಟನೆ ನಡೆಯಿತು. ಕಾಂಗ್ರೆಸ್ ಕಚೇರಿ ಮುಂಬಾಗ ದಸರಾ ಉತ್ಸವಕ್ಕೆ ಶುಭ ಕೋರುವ, ಶಾಸಕ ಡಾ.ಮಂತರ್ ಗೌಡ ಅವರ ಭಾವಚಿತ್ರವಿರುವ ಬ್ಯಾನರ್ ಇದೆ. ಪ್ರತಿಭಟನೆಯ ನಡುವೆ ಈ ಬ್ಯಾನರ್ನ್ನು ಹರಿದು ಹಾಕಿರುವ ಘಟನೆ ನಡೆಯಿತು.








