ಕುಶಾಲನಗರ, NEWS DESK ನ.7: ಕೊಡಗು ಜಿಲ್ಲೆಗೆ ಹೊರ ರಾಜ್ಯಗಳಿಂದ ಪ್ರವಾಸಕ್ಕೆ ಆಗಮಿಸುವ ಪ್ರವಾಸಿಗರು ಬಸ್‌ಗಳಲ್ಲಿ ಡಿಜೆ ಸೌಂಡ್ ಸಿಸ್ಟಮ್ ಅಳವಡಿಸಿಕೊಂಡು ಕರ್ಕಶ ಶಬ್ದ ಉಂಟುಮಾಡುವ ಮೂಲಕ ಸಾರ್ವಜನಿಕರಿಗೆ ತೊಂದರೆ ನೀಡುತ್ತಿರುವ ಪ್ರಕರಣಗಳ ವಿರುದ್ಧ ಕುಶಾಲನಗರ ಸಂಚಾರ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ.
ಕುಶಾಲನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕರ್ಕಶ ಶಬ್ದದೊಂದಿಗೆ ಸಂಚರಿಸುತ್ತಿದ್ದ ಮೂರು ಪ್ರವಾಸಿ ಬಸ್‌ಗಳನ್ನು ಪತ್ತೆಹಚ್ಚಿದ ಪೊಲೀಸರು, ನಿಯಮ ಉಲ್ಲಂಘನೆಗಾಗಿ ಬಸ್‌ಗಳ ವಿರುದ್ಧ ಕಾನೂನು ಕ್ರಮ ಕೈಗೊಂಡು ಒಟ್ಟು ರೂ. 4,500 ದಂಡ ವಿಧಿಸಿದ್ದಾರೆ.
ಪ್ರವಾಸಕ್ಕೆ ಆಗಮಿಸುವವರು ಸಾರ್ವಜನಿಕರು, ಸ್ಥಳೀಯ ನಿವಾಸಿಗಳು ಹಾಗೂ ಇತರ ವಾಹನ ಸವಾರರಿಗೆ ತೊಂದರೆಯಾಗದಂತೆ ಜವಾಬ್ದಾರಿಯಿಂದ ವರ್ತಿಸಬೇಕು. ವಾಹನಗಳಲ್ಲಿ ನಿಯಮಬಾಹಿರವಾಗಿ ಕರ್ಕಶ ಶಬ್ದ ಉಂಟುಮಾಡುವ ಡಿಜೆ ಸೌಂಡ್ ಸಿಸ್ಟಮ್‌ಗಳನ್ನು ಬಳಸದಂತೆ ಕೊಡಗು ಜಿಲ್ಲಾ ಪೊಲೀಸರು ಸೂಚನೆ ನೀಡಿದ್ದಾರೆ.
ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಇಂತಹ ನಿಯಮ ಉಲ್ಲಂಘನೆಗಳ ವಿರುದ್ಧ ಮುಂದಿನ ದಿನಗಳಲ್ಲಿಯೂ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಇಲಾಖೆ ಎಚ್ಚರಿಕೆ ನೀಡಿದೆ.

















