ಮಡಿಕೇರಿ, NEWS DESK ನ. 9: ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆ, ಭದ್ರತೆ ಹಾಗೂ ಹಕ್ಕುಗಳ ರಕ್ಷಣೆಯೊಂದಿಗೆ ಸಾಮಾಜಿಕ ಮತ್ತು ಆರ್ಥಿಕ ಸಬಲೀಕರಣಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಸರ್ಕಾರ ಜಾರಿಗೊಳಿಸಿರುವ ‘ಮಿಷನ್ ಶಕ್ತಿ ಯೋಜನೆ’ಯಡಿ ಕೊಡಗು ಜಿಲ್ಲೆಯಲ್ಲಿ ವಿವಿಧ ಸೌಲಭ್ಯ ಮತ್ತು ಸೇವೆಗಳನ್ನು ಒದಗಿಸಲಾಗುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಪ್ರಸನ್ನ ಕುಮಾರ್ ತಿಳಿಸಿದ್ದಾರೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಯೋಗದಲ್ಲಿ ಅನುಷ್ಠಾನಗೊಳ್ಳುತ್ತಿರುವ ಈ ಯೋಜನೆಯು ಮಹಿಳೆಯರಲ್ಲಿ ಆತ್ಮವಿಶ್ವಾಸ, ಸ್ವಾವಲಂಬನೆ ಹಾಗೂ ಸುರಕ್ಷಿತ ಬದುಕಿನ ಭರವಸೆ ಮೂಡಿಸುವ ಉದ್ದೇಶ ಹೊಂದಿದೆ. ಮಹಿಳೆಯರ ರಕ್ಷಣೆ, ಸಂಕಷ್ಟದ ಸಂದರ್ಭದಲ್ಲಿ ನೆರವು, ಕಾನೂನು ಸಹಾಯ, ಪುನರ್ವಸತಿ, ಉದ್ಯೋಗಾವಕಾಶ ಹಾಗೂ ಆರ್ಥಿಕ ನೆರವು ಸೇರಿದಂತೆ ವಿವಿಧ ಸೌಲಭ್ಯಗಳನ್ನು ಯೋಜನೆಯಡಿ ಕಲ್ಪಿಸಲಾಗುತ್ತಿದೆ.
ಸಂಕಲ್ಪ ಯೋಜನೆಯಡಿ ಅರಿವು ಕಾರ್ಯಕ್ರಮ:
ಮಹಿಳೆಯರ ಸಬಲೀಕರಣಕ್ಕಾಗಿ ‘ಸಂಕಲ್ಪ’ ಯೋಜನೆಯಡಿ ಜಿಲ್ಲಾ ಮಟ್ಟದ ಮಹಿಳಾ ಸಬಲೀಕರಣ ಘಟಕ ಕಾರ್ಯನಿರ್ವಹಿಸುತ್ತಿದೆ. ಮಹಿಳೆಯರಿಗೆ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ರಾಜಕೀಯ ಹಾಗೂ ಕಾನೂನು ಕ್ಷೇತ್ರಗಳಲ್ಲಿ ಅಗತ್ಯ ಮಾರ್ಗದರ್ಶನ ಮತ್ತು ನೆರವು ನೀಡಲಾಗುತ್ತಿದೆ. ವಿವಿಧ ಇಲಾಖೆಗಳ ಯೋಜನೆಗಳು ಹಾಗೂ ಸೌಲಭ್ಯಗಳ ಕುರಿತು ಮಹಿಳೆಯರು, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸ್ವಸಹಾಯ ಸಂಘಗಳ ಸದಸ್ಯರಿಗೆ ಮಾಹಿತಿ ನೀಡುವ ಉದ್ದೇಶದಿಂದ ಈವರೆಗೆ 72 ಅರಿವು ಕಾರ್ಯಾಗಾರಗಳನ್ನು ಆಯೋಜಿಸಲಾಗಿದೆ.
ಅಲ್ಲದೆ, ಕೊಡಗು ಜಿಲ್ಲೆಯಲ್ಲಿ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ‘ಬೇಟಿ ಬಚಾವೋ, ಬೇಟಿ ಪಢಾವೋ’, ಪೋಕ್ಸೊ ಕಾಯ್ದೆ, ಮಕ್ಕಳ ಸಹಾಯವಾಣಿ 1098, ಮಹಿಳಾ ಸಹಾಯವಾಣಿ 181 ಹಾಗೂ ತುರ್ತು ಸಹಾಯವಾಣಿ 112 ಕುರಿತು ಅರಿವು ಮೂಡಿಸಲಾಗಿದೆ.
ಹೆಣ್ಣು ಮಕ್ಕಳ ಶಿಕ್ಷಣ ಮತ್ತು ಭದ್ರತೆಗೆ ಆದ್ಯತೆ ನೀಡುವುದು, ಹೆಣ್ಣು ಮಕ್ಕಳ ಜನನವನ್ನು ಉತ್ತೇಜಿಸುವುದು, ಗುಣಮಟ್ಟದ ಶಿಕ್ಷಣ ಒದಗಿಸುವುದು, ಲಿಂಗಾನುಪಾತ ಸುಧಾರಿಸುವುದು ಹಾಗೂ ಮಹಿಳೆಯರನ್ನು ಸಬಲೀಕರಣಗೊಳಿಸುವುದು ಯೋಜನೆಯ ಪ್ರಮುಖ ಆಶಯಗಳಾಗಿವೆ. ಈ ನಿಟ್ಟಿನಲ್ಲಿ ಬಾಲ್ಯವಿವಾಹ ತಡೆ, ಹೆಣ್ಣು ಮಕ್ಕಳ ಹಕ್ಕುಗಳ ರಕ್ಷಣೆ ಮತ್ತು ಮಹಿಳೆಯರ ಸುರಕ್ಷತೆಯ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ.
ಸಂಕಷ್ಟದಲ್ಲಿರುವ ಮಹಿಳೆಯರಿಗೆ ಸಖಿ ಒನ್ ಸ್ಟಾಪ್ ಸೆಂಟರ್:
ಮಹಿಳೆಯರ ಮೇಲಿನ ದೌರ್ಜನ್ಯ, ಕೌಟುಂಬಿಕ ಹಿಂಸೆ, ಲೈಂಗಿಕ ಕಿರುಕುಳ ಹಾಗೂ ವಿವಿಧ ರೀತಿಯ ಶೋಷಣೆಗೆ ಒಳಗಾದ ಮಹಿಳೆಯರಿಗೆ ನೆರವು ನೀಡಲು ‘ಸಖಿ ಒನ್ ಸ್ಟಾಪ್ ಸೆಂಟರ್’ ಕಾರ್ಯನಿರ್ವಹಿಸುತ್ತಿದೆ. ಈ ಕೇಂದ್ರದ ಮೂಲಕ ವೈದ್ಯಕೀಯ ನೆರವು, ಕಾನೂನು ಸಲಹೆ, ಪೊಲೀಸ್ ನೆರವು, ತಾತ್ಕಾಲಿಕ ಆಶ್ರಯ ಹಾಗೂ ಆಪ್ತ ಸಮಾಲೋಚನೆ ಸೇವೆಗಳನ್ನು ಒಂದೇ ಸೂರಿನಡಿ ಒದಗಿಸಲಾಗುತ್ತಿದೆ. ಸಂಕಷ್ಟದಲ್ಲಿರುವ ಮಹಿಳೆಯರಿಗೆ ತಕ್ಷಣ ಸ್ಪಂದಿಸಿ ಅಗತ್ಯ ರಕ್ಷಣೆ ಮತ್ತು ನೆರವು ಕಲ್ಪಿಸುವುದು ಇದರ ಉದ್ದೇಶವಾಗಿದೆ.
ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆಯಡಿ ಆರ್ಥಿಕ ನೆರವು:
ಗರ್ಭಿಣಿಯರು ಹಾಗೂ ಬಾಣಂತಿಯರ ಆರೋಗ್ಯ ಮತ್ತು ಪೌಷ್ಟಿಕತೆಗೆ ನೆರವಾಗುವ ಉದ್ದೇಶದಿಂದ ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆ ಜಾರಿಯಲ್ಲಿದೆ. ಈ ಯೋಜನೆಯಡಿ ಮೊದಲ ಮಗುವಿನ ಜನನಕ್ಕೆ ಅರ್ಹ ಮಹಿಳೆಯರಿಗೆ ಎರಡು ಕಂತುಗಳಲ್ಲಿ ಒಟ್ಟು 5 ಸಾವಿರ ರೂ. ಆರ್ಥಿಕ ನೆರವು ನೀಡಲಾಗುತ್ತದೆ. ಎರಡನೇ ಮಗು ಹೆಣ್ಣು ಮಗುವಾಗಿದ್ದಲ್ಲಿ ಅರ್ಹ ಫಲಾನುಭವಿಗಳಿಗೆ ನೇರ ನಗದು ವರ್ಗಾವಣೆ (ಡಿಬಿಟಿ) ಮೂಲಕ ಒಂದೇ ಕಂತಿನಲ್ಲಿ 6 ಸಾವಿರ ರೂ. ನೆರವು ಒದಗಿಸಲಾಗುತ್ತದೆ. ಅರ್ಹ ಮಹಿಳೆಯರು ಹತ್ತಿರದ ಅಂಗನವಾಡಿ ಕೇಂದ್ರದಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.
ಉದ್ಯೋಗಸ್ಥ ಮಹಿಳೆಯರಿಗೆ ಸಖಿ ನಿವಾಸ:
ಉದ್ಯೋಗದ ನಿಮಿತ್ತ ತಮ್ಮ ಊರುಗಳಿಂದ ದೂರವಿದ್ದು ಕಾರ್ಯನಿರ್ವಹಿಸುವ ಮಹಿಳೆಯರಿಗೆ ಸುರಕ್ಷಿತ ವಸತಿ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ‘ಸಖಿ ನಿವಾಸ’ ಯೋಜನೆ ಜಾರಿಯಲ್ಲಿದೆ. ಸುರಕ್ಷಿತ ಹಾಗೂ ಅನುಕೂಲಕರ ವಸತಿ ವ್ಯವಸ್ಥೆ ಒದಗಿಸುವ ಮೂಲಕ ಮಹಿಳೆಯರು ಆತಂಕವಿಲ್ಲದೆ ಉದ್ಯೋಗದಲ್ಲಿ ತೊಡಗಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಕೊಡಗು ಜಿಲ್ಲೆಯಲ್ಲಿ 28 ಉದ್ಯೋಗಸ್ಥ ಮಹಿಳೆಯರು ಈ ಯೋಜನೆಯ ಸೌಲಭ್ಯ ಪಡೆದುಕೊಂಡಿದ್ದಾರೆ.
ಮಕ್ಕಳ ಆರೈಕೆಗಾಗಿ ಪಾಲನಾ ಕೇಂದ್ರಗಳು:
ಉದ್ಯೋಗಸ್ಥ ಮಹಿಳೆಯರ ಮಕ್ಕಳ ಆರೈಕೆಗೂ ವಿಶೇಷ ಆದ್ಯತೆ ನೀಡಲಾಗಿದೆ. ಆರು ತಿಂಗಳಿನಿಂದ ಆರು ವರ್ಷದವರೆಗಿನ ಮಕ್ಕಳಿಗೆ ಪಾಲನಾ ಕೇಂದ್ರಗಳ ಮೂಲಕ ಆರೈಕೆ ಸೌಲಭ್ಯ ಕಲ್ಪಿಸಲಾಗುತ್ತಿದೆ. ಮಕ್ಕಳಿಗೆ ಸುರಕ್ಷತೆ, ಪೋಷಣೆ ಹಾಗೂ ಅಗತ್ಯ ಆರೈಕೆ ಒದಗಿಸುವ ಮೂಲಕ ಉದ್ಯೋಗಸ್ಥ ಮಹಿಳೆಯರು ನಿರಾತಂಕವಾಗಿ ಕೆಲಸ ನಿರ್ವಹಿಸಲು ಈ ಕೇಂದ್ರಗಳು ಸಹಕಾರಿಯಾಗಿವೆ.
ಸಹಾಯವಾಣಿ ಸಂಖ್ಯೆಗಳು:
ಮಹಿಳೆಯರು ಮತ್ತು ಮಕ್ಕಳು ಸಂಕಷ್ಟಕ್ಕೆ ಸಿಲುಕಿದ ಸಂದರ್ಭದಲ್ಲಿ ತಕ್ಷಣ ನೆರವು ಪಡೆಯಲು ಈ ಕೆಳಗಿನ ಸಹಾಯವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದಾಗಿದೆ.
- 181: ಮಹಿಳಾ ಸಹಾಯವಾಣಿ.
- 1098: ಮಕ್ಕಳ ಸಹಾಯವಾಣಿ.
- 112: ತುರ್ತು ಸಹಾಯವಾಣಿ.
ಮಹಿಳೆಯರ ಸುರಕ್ಷತೆ ಮತ್ತು ಸಬಲೀಕರಣಕ್ಕೆ ಸರ್ಕಾರದ ಯೋಜನೆಗಳ ಜೊತೆಗೆ ಸಮಾಜದ ಪ್ರತಿಯೊಬ್ಬರ ಸಹಕಾರವೂ ಅಗತ್ಯವಾಗಿದೆ. ಮಹಿಳೆಯರ ಮೇಲಿನ ದೌರ್ಜನ್ಯ, ಬಾಲ್ಯವಿವಾಹ, ಲಿಂಗತಾರತಮ್ಯ ಹಾಗೂ ಶೋಷಣೆಯ ವಿರುದ್ಧ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಇಂದಿನ ಅಗತ್ಯವಾಗಿದೆ.
ಸರ್ಕಾರ ಒದಗಿಸುತ್ತಿರುವ ವಿವಿಧ ಯೋಜನೆಗಳ ಕುರಿತು ಮಹಿಳೆಯರಿಗೆ ಸಮರ್ಪಕ ಮಾಹಿತಿ ತಲುಪಿಸುವುದು, ಅರ್ಹ ಫಲಾನುಭವಿಗಳನ್ನು ಗುರುತಿಸಿ ಸೌಲಭ್ಯಗಳನ್ನು ಒದಗಿಸುವುದು ಹಾಗೂ ಮಹಿಳೆಯರು ತಮ್ಮ ಹಕ್ಕುಗಳ ಬಗ್ಗೆ ಅರಿವು ಹೊಂದುವಂತೆ ಮಾಡುವುದು ಮುಖ್ಯವಾಗಿದೆ. ಕೊಡಗು ಜಿಲ್ಲೆಯ ಮಹಿಳೆಯರು ಮತ್ತು ಮಕ್ಕಳು ಮಿಷನ್ ಶಕ್ತಿ ಯೋಜನೆಯಡಿ ದೊರೆಯುವ ಸೌಲಭ್ಯಗಳ ಕುರಿತು ಮಾಹಿತಿ ಪಡೆದು ಸದುಪಯೋಗಪಡಿಸಿಕೊಳ್ಳುವ ಮೂಲಕ ಸುರಕ್ಷಿತ, ಗೌರವಯುತ ಹಾಗೂ ಸ್ವಾವಲಂಬಿ ಬದುಕು ರೂಪಿಸಿಕೊಳ್ಳಬೇಕು ಎಂದು ಪ್ರಸನ್ನ ಕುಮಾರ್ ತಿಳಿಸಿದ್ದಾರೆ.























