ವಿರಾಜಪೇಟೆ, NEWS DESK ನ.10: ಎಸ್.ಐ.ಆರ್. ಕರಡು ಮತದಾರರ ಪಟ್ಟಿ ವಿರೋಧಿಸಿ ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಒತ್ತಾಯಿಸಿ ನವೆಂಬರ್ 9ರಂದು ನೆಲ್ಲಿಹುದಿಕೇರಿಯಿಂದ ಸಿದ್ದಾಪುರದವರೆಗೆ ಬೃಹತ್ ಪಾದಯಾತ್ರೆ, ಮಾನವ ಸರಪಳಿ ಮತ್ತು ಪ್ರತಿಭಟನಾ ಸಭೆ ಆಯೋಜಿಸಲಾಗಿದೆ ಎಂದು ಸಿದ್ದಾಪುರ ಮತ್ತು ನೆಲ್ಲಿಹುದಿಕೇರಿ ಸಮಾನ ಮನಸ್ಕರ ವೇದಿಕೆಯ ಕಾರ್ಯದರ್ಶಿ ಪಿ.ಆರ್. ಭರತ್ ತಿಳಿಸಿದರು.
ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರವು ಚುನಾವಣಾ ಆಯೋಗವನ್ನು ತನ್ನಿಷ್ಟದಂತೆ ಬಳಸಿಕೊಳ್ಳುವ ಮೂಲಕ ಪ್ರಜಾಪ್ರಭುತ್ವದ ಮೂಲ ಆಶಯಗಳಿಗೆ ಧಕ್ಕೆ ತರುತ್ತಿದೆ ಎಂದು ಆರೋಪಿಸಿದರು.
ದೇಶಾದ್ಯಂತ ಜಾರಿಗೊಳಿಸಲಾಗುತ್ತಿರುವ ಎಸ್.ಐ.ಆರ್. ಪ್ರಕ್ರಿಯೆಯಿಂದ ಅರ್ಹ ಮತದಾರರು ತಮ್ಮ ಮತದಾನದ ಹಕ್ಕಿನಿಂದ ವಂಚಿತರಾಗುವ ಆತಂಕ ಎದುರಾಗಿದೆ. ಚುನಾವಣಾ ಆಯೋಗದ ಸ್ವಾಯತ್ತತೆಯನ್ನು ಹತ್ತಿಕ್ಕಿ ಆಡಳಿತಾರೂಢ ಬಿಜೆಪಿ ಪರವಾಗಿ ಕಾರ್ಯನಿರ್ವಹಿಸುವಂತೆ ಮಾಡಲಾಗುತ್ತಿದೆ ಎಂದು ದೂರಿದರು. ಮತದಾರರ ಪಟ್ಟಿಯಿಂದ ಹೊರಗುಳಿದಿರುವ ಪ್ರತಿಯೊಬ್ಬ ಅರ್ಹ ಮತದಾರರ ಹೆಸರನ್ನು ತಕ್ಷಣ ಮರು ಸೇರ್ಪಡೆಗೊಳಿಸಬೇಕು ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ವೇದಿಕೆಯ ಅಧ್ಯಕ್ಷ ಪಿ.ವಿ. ಜಾನ್ಸನ್ ಮಾತನಾಡಿ, ಸಂವಿಧಾನ ನೀಡಿರುವ ಪವಿತ್ರ ಮತದಾನದ ಹಕ್ಕನ್ನು ಕಸಿದುಕೊಳ್ಳುವ ಯಾವುದೇ ಪ್ರಯತ್ನವನ್ನು ಸಹಿಸಲು ಸಾಧ್ಯವಿಲ್ಲ. ಪ್ರಜಾಪ್ರಭುತ್ವದ ಅಡಿಪಾಯವನ್ನು ರಕ್ಷಿಸಲು ಸ್ಥಳೀಯ ಮಟ್ಟದಿಂದಲೇ ಬಲವಾದ ಹೋರಾಟ ರೂಪಿಸುವುದು ಅನಿವಾರ್ಯವಾಗಿದೆ ಎಂದರು.
ವೇದಿಕೆಯ ಪ್ರಮುಖ ನಾಯಕ ಎ.ಕೆ. ಹಕ್ಕಿಂ ಮಾತನಾಡಿ, ಆಡಳಿತಾರೂಢ ಸರ್ಕಾರಗಳು ಕಾನೂನು ಮತ್ತು ಆಡಳಿತ ಯಂತ್ರಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಪ್ರಜಾಪ್ರಭುತ್ವಕ್ಕೆ ಆತಂಕಕಾರಿ ಬೆಳವಣಿಗೆಯಾಗಿದೆ. ಬಡವರು, ಕಾರ್ಮಿಕರು ಹಾಗೂ ಗ್ರಾಮೀಣ ಭಾಗದ ಮತದಾರರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲಾಗುತ್ತಿದೆಯೇ ಎಂಬ ಅನುಮಾನಗಳಿದ್ದು, ಪ್ರತಿಯೊಬ್ಬ ನಾಗರಿಕರೂ ಈ ಬಗ್ಗೆ ಜಾಗೃತರಾಗಬೇಕು ಎಂದು ಕರೆ ನೀಡಿದರು.
ವೇದಿಕೆಯ ಮುಖಂಡ ಹೆಚ್.ಬಿ. ರಮೇಶ್ ಮಾತನಾಡಿ, ಎಸ್.ಐ.ಆರ್. ಜಾರಿಯಾದ ಬಳಿಕ ಹಲವು ಪ್ರದೇಶಗಳಲ್ಲಿ ಮತದಾರರಲ್ಲಿ ಗೊಂದಲ ಉಂಟಾಗಿದೆ. ಚುನಾವಣಾ ಆಯೋಗ ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಬೇಕು. ಜನಸಾಮಾನ್ಯರ ಸಾಂವಿಧಾನಿಕ ಹಕ್ಕುಗಳ ರಕ್ಷಣೆಗಾಗಿ ನಡೆಯುವ ಹೋರಾಟಕ್ಕೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.
ನ. 9ರಂದು ಪಾದಯಾತ್ರೆ, ಮಾನವ ಸರಪಳಿ
ನವೆಂಬರ್ 9ರಂದು ಅಪರಾಹ್ನ 3 ಗಂಟೆಗೆ ನೆಲ್ಲಿಹುದಿಕೇರಿ ಪಟ್ಟಣದಿಂದ ಪಾದಯಾತ್ರೆ ಆರಂಭವಾಗಲಿದೆ. ನೂರಾರು ಪ್ರತಿಭಟನಾಕಾರರು ಕಾಲ್ನಡಿಗೆಯಲ್ಲಿ ಸಿದ್ದಾಪುರ ತಲುಪಿದ ಬಳಿಕ ಪಟ್ಟಣದ ಪ್ರಮುಖ ವೃತ್ತ ಹಾಗೂ ಬಸ್ ನಿಲ್ದಾಣದ ಆವರಣದಲ್ಲಿ ಬೃಹತ್ ಮಾನವ ಸರಪಳಿ ನಿರ್ಮಿಸಿ ಎಸ್.ಐ.ಆರ್. ವಿರುದ್ಧ ಪ್ರತಿಭಟನೆ ನಡೆಸಲಿದ್ದಾರೆ.
ಬಳಿಕ ನಡೆಯಲಿರುವ ಬಹಿರಂಗ ಪ್ರತಿಭಟನಾ ಸಭೆಯಲ್ಲಿ ಎಸ್.ಐ.ಆರ್. ವಿರುದ್ಧ ರಾಜ್ಯಮಟ್ಟದಲ್ಲಿ ಹೋರಾಟ ನಡೆಸುತ್ತಿರುವ ಸುಧೀರ್ ಕುಮಾರ್ ಹಾಗೂ ಡಿ.ವೈ.ಎಫ್.ಐ. ಸಂಘಟನೆಯ ರಾಜ್ಯ ಉಪ ಕಾರ್ಯದರ್ಶಿ ಅನುಶ್ರೀ ಸೇರಿದಂತೆ ಹಲವು ಪ್ರಮುಖ ಹೋರಾಟಗಾರರು ಭಾಗವಹಿಸಿ ಮಾತನಾಡಲಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಸಮಾನ ಮನಸ್ಕರ ವೇದಿಕೆಯ ಉಪಾಧ್ಯಕ್ಷ ಸೈದಾಲವಿ ಬಾವ, ಪದಾಧಿಕಾರಿಗಳಾದ ಟಿ.ಟಿ. ಉದಯ್ ಕುಮಾರ್, ಕುಂಜ್ಞನ್, ಅಪ್ಸಲ್, ಕೆ.ಎ. ಅಸ್ಕರ್ ಮತ್ತಿತರರು ಉಪಸ್ಥಿತರಿದ್ದರು.























