ಮಡಿಕೇರಿ, NEWS DESK ನ.13: ಪಿಸಿಡಿಎ ಬೆಂಗಳೂರು ವತಿಯಿಂದ ನವೆಂಬರ್ 18 ಮತ್ತು 19ರಂದು ಬೆಳಗ್ಗೆ 9.30ರಿಂದ ಸಂಜೆ 5 ಗಂಟೆಯವರೆಗೆ ಬೆಂಗಳೂರಿನ ಪಿಸಿಡಿಎ ಮಲ್ಟಿ ಪರ್ಪಸ್ ಸಭಾಂಗಣದಲ್ಲಿ ಸ್ಪರ್ಶ್ ಪಿಂಚಣಿ ಪಡೆಯುತ್ತಿರುವ ಮಾಜಿ ಸೈನಿಕರು ಹಾಗೂ ಕುಟುಂಬ ಪಿಂಚಣಿದಾರರ ಸಭೆಯನ್ನು ಆಯೋಜಿಸಲಾಗಿದೆ.
ಸ್ಪರ್ಶ್ ಪಿಂಚಣಿದಾರರ ಕುಂದುಕೊರತೆಗಳನ್ನು ಗುರುತಿಸಿ ಶೀಘ್ರವಾಗಿ ಪರಿಹರಿಸುವುದು ಹಾಗೂ ಜೀವಿತ ಪ್ರಮಾಣಪತ್ರ 5.0 ಪ್ರಚಾರ ಅಭಿಯಾನದ ಕುರಿತು ಅರಿವು ಮೂಡಿಸುವುದು ಈ ಸಭೆಯ ಉದ್ದೇಶವಾಗಿದೆ.
ಕಾರ್ಯಕ್ರಮದಲ್ಲಿ ಸ್ಪರ್ಶ್ ಮೂಲಕ ಪಿಂಚಣಿ ಪಡೆಯುತ್ತಿರುವ ಮಾಜಿ ಸೈನಿಕರು ಹಾಗೂ ಅವರ ಅವಲಂಬಿತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸದುಪಯೋಗ ಪಡೆದುಕೊಳ್ಳುವಂತೆ ಕೋರಲಾಗಿದೆ.
ಸಭೆಯಲ್ಲಿ ಭಾಗವಹಿಸಲು ಮುಂಚಿತವಾಗಿ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯವಾಗಿದ್ದು, ನೋಂದಣಿಗಾಗಿ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಮಡಿಕೇರಿಯಿಂದ ಅರ್ಜಿ ನಮೂನೆಯನ್ನು ಪಡೆದು ಭರ್ತಿ ಮಾಡಬೇಕು. ಭರ್ತಿ ಮಾಡಿದ ಅರ್ಜಿಯನ್ನು ವಾಟ್ಸ್ಆ್ಯಪ್ ಸಂಖ್ಯೆ 8147527246 ಅಥವಾ eda-blor@nic.in ಇ-ಮೇಲ್ ವಿಳಾಸಕ್ಕೆ ಕಳುಹಿಸಬೇಕು.
ನೋಂದಣಿಗೆ ನವೆಂಬರ್ 16 ಕೊನೆಯ ದಿನವಾಗಿದ್ದು, ಹೆಚ್ಚಿನ ಮಾಹಿತಿಗೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯನ್ನು ಸಂಪರ್ಕಿಸುವಂತೆ ಇಲಾಖೆಯ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.















