ಮಡಿಕೇರಿ, NEWS DESK ನ.13: ಮಡಿಕೇರಿ ವಿಧಾನಸಭಾ ಕ್ಷೇತ್ರದ ಹೊದ್ದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂಬಳದಾಳು ಹಾಗೂ ಬಿಳಿಗೇರಿ ಗ್ರಾಮದ ಮೂಲಕ ವಿರಾಜಪೇಟೆ ಮುಖ್ಯರಸ್ತೆಯನ್ನು ಮೇಕೇರಿ ಭಾಗದಲ್ಲಿ ಸಂಪರ್ಕಿಸುವ ಲೋಕೋಪಯೋಗಿ ಇಲಾಖೆಯ ರಸ್ತೆಯ ಅಭಿವೃದ್ಧಿಗೆ ಶಾಸಕ ಡಾ. ಮಂತರ್ ಗೌಡ ಅವರು 3 ಕೋಟಿ ರೂ. ಅನುದಾನ ಒದಗಿಸಿದ್ದಾರೆ.
ಈ ಕುರಿತು ಕುಂಬಳದಾಳು ಗ್ರಾಮದ ಪ್ರಮುಖರಾದ ಹೆಚ್.ಎ. ಹಂಸ, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷ ತೆನ್ನಿರ ಮೈನಾ ಹಾಗೂ ಮುಖಂಡ ಬಾಳಾಡಿ ಪ್ರತಾಪ್ ಕುಮಾರ್ ಅವರು ಶಾಸಕರ ಮಡಿಕೇರಿ ಕಚೇರಿಯಲ್ಲಿ ಭೇಟಿಯಾಗಿ ಮನವಿ ಸಲ್ಲಿಸಿದರು.
ಕುಂಬಳದಾಳು, ಬಿಳಿಗೇರಿ ಹಾಗೂ ಹೊದವಾಡ ಗ್ರಾಮದ ಜನರು ಮೂರ್ನಾಡು ಮತ್ತು ಮಡಿಕೇರಿ ರಸ್ತೆಗಳನ್ನು ತಲುಪಲು ಈ ಮಾರ್ಗ ಅತ್ಯಂತ ಸಮೀಪದ ಸಂಪರ್ಕ ರಸ್ತೆಯಾಗಿದೆ. ರಸ್ತೆ ಅಭಿವೃದ್ಧಿಯಿಂದ ಸುತ್ತಮುತ್ತಲಿನ ಹಲವು ಗ್ರಾಮಗಳ ಜನರಿಗೆ ಅನುಕೂಲವಾಗಲಿದೆ ಎಂದು ಶಾಸಕರ ಗಮನಕ್ಕೆ ತಂದರು.
ಈ ಹಿಂದೆ ತಾವು ಕೂಡ ಈ ರಸ್ತೆಯನ್ನು ವೀಕ್ಷಿಸಿದ್ದು, ಇದರ ಅಭಿವೃದ್ಧಿಯಿಂದ ಅನೇಕ ಗ್ರಾಮಗಳ ಜನರಿಗೆ ಅನುಕೂಲವಾಗಲಿದೆ ಎಂಬ ಅರಿವಿದೆ ಎಂದು ಶಾಸಕ ಡಾ. ಮಂತರ್ ಗೌಡ ತಿಳಿಸಿದರು.
ನಂತರ ಲೋಕೋಪಯೋಗಿ ಇಲಾಖೆಯ ಎಇಇ ಗಿರೀಶ್ ಅವರೊಂದಿಗೆ ಚರ್ಚಿಸಿದ ಶಾಸಕರು, ಮುಖ್ಯಮಂತ್ರಿಗಳ ಮೂಲಸೌಕರ್ಯ ಅಭಿವೃದ್ಧಿ ಅನುದಾನದಡಿ 3 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಕಾಂಕ್ರೀಟ್ ರಸ್ತೆ ನಿರ್ಮಿಸಲು ಕೂಡಲೇ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಶಾಸಕರ ಸಕಾರಾತ್ಮಕ ಸ್ಪಂದನೆಗೆ ಗ್ರಾಮದ ಪ್ರಮುಖರು ಹರ್ಷ ವ್ಯಕ್ತಪಡಿಸಿ ಕೃತಜ್ಞತೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕುಲ್ಲಚನ ದಿನೇಶ್, ಬಬ್ಬಿರ ಗಿರೀಶ್, ಬಬ್ಬಿರ ಮನು, ಬಾಳಾಡಿ ಪ್ರವೀಣ್, ದೇವಜನ ವಿಖ್ಯಾತ್, ಪಾರೆಮಜಲು ಹರೀಶ್ ಹಾಗೂ ಚೆರಿಯಮನೆ ಸೂರಿ ಉಪಸ್ಥಿತರಿದ್ದರು.
















