ವಿರಾಜಪೇಟೆ, NEWS DESK ನ.16: ಕಾವೇರಿ ಶಾಲೆಯಲ್ಲಿ ಮಕ್ಕಳ ದಿನಾಚರಣೆಯನ್ನು ಅತ್ಯಂತ ಸಂಭ್ರಮ ಹಾಗೂ ಉತ್ಸಾಹದಿಂದ ಆಚರಿಸಲಾಯಿತು.
ಕಾರ್ಯಕ್ರಮದ ಅಂಗವಾಗಿ ಶಾಲೆಯ ವಿದ್ಯಾರ್ಥಿಗಳು ರಾಜ್ಯಮಟ್ಟದ ಕ್ರೀಡಾಕೂಟಗಳಲ್ಲಿ ಸಾಧನೆ ಮಾಡಿರುವ ಹಿನ್ನೆಲೆಯಲ್ಲಿ ಕ್ರೀಡಾ ಸಾಧಕರನ್ನು ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.
ರಾಜ್ಯಮಟ್ಟದ ಪಂದ್ಯಾವಳಿಯಲ್ಲಿ ಕಾವೇರಿ ಶಾಲೆಯ 10ನೇ ತರಗತಿಯ ವಿದ್ಯಾರ್ಥಿನಿಯರಾದ ರ್ನಂಡ ಕೃತಿಕಾ ಅಕ್ಕಮ್ಮ, ರ್ನಡ ಶತಕ ಕಾವೇರಮ್ಮ, ಬೊವ್ವೆರಿಯಂಡ ಹನ್ಸಿಕ ಪೊನ್ನಪ್ಪ ಹಾಗೂ ಕುಲ್ಲಚಂಡ ಭೂಮಿಕ ಭೋಜಮ್ಮ ಭಾಗವಹಿಸಿ ಸಾಧನೆ ಮಾಡಿದ್ದಾರೆ. ಅದೇ ರೀತಿ 8ನೇ ತರಗತಿಯ ವಿದ್ಯಾರ್ಥಿನಿಯೊಬ್ಬರು ಅಥ್ಲೆಟಿಕ್ಸ್ ವಿಭಾಗದ ರಾಜ್ಯಮಟ್ಟದ ಪಂದ್ಯಾವಳಿಯಲ್ಲಿ ಕೊಡಗನ್ನು ಪ್ರತಿನಿಧಿಸಿ 7ನೇ ಸ್ಥಾನ ಪಡೆದಿದ್ದಾರೆ.
ಈ ಸಾಧನೆಗೆ ಕೊಡಗಿನ ಖ್ಯಾತ ಕ್ರೀಡಾ ತರಬೇತುದಾರರಾದ ಅಪ್ಪಂಡ ದಿವಿನ್ ಹಾಗೂ ಶಾಲೆಯ ದೈಹಿಕ ಶಿಕ್ಷಕಿಯರಾದ ಮೋನಿಕ ಮತ್ತು ಲಾವಣ್ಯ ಅವರು ನೀಡಿದ ತರಬೇತಿ ಮತ್ತು ಮಾರ್ಗದರ್ಶನ ಪ್ರಮುಖ ಪಾತ್ರ ವಹಿಸಿದೆ. ಸಾಧಕರಿಗೆ ಶಾಲಾ ಆಡಳಿತ ಮಂಡಳಿ, ಮುಖ್ಯ ಶಿಕ್ಷಕಿ ಹಾಗೂ ಸಂಯೋಜಕಿಯರು ಗೌರವ ಸ್ಮರಣಿಕೆ ನೀಡಿ ಸನ್ಮಾನಿಸಿದರು.
ಇದೇ ಸಂದರ್ಭದಲ್ಲಿ ಚೆಸ್ ವಿಭಾಗದಲ್ಲಿಯೂ ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ಮಾಡಿದ್ದಾರೆ. ಚೆಸ್ ತರಬೇತುದಾರರಾದ ಮಣಿ ಅವರ ಮಾರ್ಗದರ್ಶನದಲ್ಲಿ 6ನೇ ತರಗತಿಯ ಶರ್ಯ ಬಿ.ಎಸ್., 8ನೇ ತರಗತಿಯ ಚಾಲ್ಸಿ ಹಾಗೂ 9ನೇ ತರಗತಿಯ ಸಚಿನ್ ರಾಜ್ಯಮಟ್ಟದ ಪಂದ್ಯಾವಳಿಯಲ್ಲಿ ಕೊಡಗನ್ನು ಪ್ರತಿನಿಧಿಸಿ ಉತ್ತಮ ಆಟಗಾರರೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ವಿದ್ಯಾರ್ಥಿಗಳಿಗೂ ಗೌರವ ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿಯ ಕಾರ್ಯದರ್ಶಿ ವಿನೋದ್ ಪಿ.ಎನ್. ಮಾತನಾಡಿ, ವಿದ್ಯಾರ್ಥಿಗಳನ್ನು ರಾಜ್ಯಮಟ್ಟದ ಕ್ರೀಡಾಪಟುಗಳನ್ನಾಗಿ ರೂಪಿಸಲು ತರಬೇತುದಾರರು ಹಾಗೂ ಶಿಕ್ಷಕರು ಪಡುವ ಕಠಿಣ ಪರಿಶ್ರಮವನ್ನು ಶ್ಲಾಘಿಸಿದರು. ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿಯೂ ಕ್ರೀಡಾ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆ ಮಾಡಲಿ ಎಂದು ಶುಭ ಹಾರೈಸಿದರು.
ಮಕ್ಕಳ ದಿನಾಚರಣೆಯ ಪ್ರಯುಕ್ತ ಶಿಕ್ಷಕರ ವತಿಯಿಂದ ವಿವಿಧ ಸಾಂಸ್ಕೃತಿಕ ಹಾಗೂ ಮನರಂಜನಾ ಕಾರ್ಯಕ್ರಮಗಳು ಮತ್ತು ಕ್ರೀಡಾಕೂಟಗಳನ್ನು ಆಯೋಜಿಸಲಾಗಿತ್ತು. ಶಿಕ್ಷಕಿ ಉಷಾ ಮಾತನಾಡಿ, ಯುವ ಭಾರತದ ನಿರ್ಮಾಣದಲ್ಲಿ ಮಕ್ಕಳ ಪಾತ್ರ ಮಹತ್ವದ್ದಾಗಿದ್ದು, ವಿದ್ಯಾರ್ಥಿಗಳು ಇಂದಿನಿಂದಲೇ ಉತ್ತಮ ಭವಿಷ್ಯಕ್ಕಾಗಿ ಶ್ರಮಿಸಬೇಕು ಎಂದು ಕಿವಿಮಾತು ಹೇಳಿದರು.
ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಲಕ್ಕಿ ಡ್ರಾ ಮೂಲಕ ವಿದ್ಯಾರ್ಥಿಗಳಿಗೆ ಆಕರ್ಷಕ ಬಹುಮಾನಗಳನ್ನು ನೀಡಲಾಯಿತು. ಕಾರ್ಯಕ್ರಮದ ಅಂಗವಾಗಿ ಸಿದ್ಧಪಡಿಸಲಾಗಿದ್ದ ವಿಶೇಷ ಭೋಜನವನ್ನು ವಿದ್ಯಾರ್ಥಿಗಳು ಸಂತೋಷದಿಂದ ಸವಿದರು.
ಕಾರ್ಯಕ್ರಮದ ಕುರಿತು 9ನೇ ತರಗತಿಯ ದಕ್ಷ ಭೋಜಣ್ಣ ಹಾಗೂ ಝಯಾನ್, 10ನೇ ತರಗತಿಯ ಸಾಹಿತ್ಯ ಮತ್ತು ಸನ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡು ಶಿಕ್ಷಕರ ಪರಿಶ್ರಮ ಮತ್ತು ಉತ್ಸಾಹವನ್ನು ಶ್ಲಾಘಿಸಿದರು.
ಕಾರ್ಯಕ್ರಮದ ನಿರೂಪಣೆಯನ್ನು ಶಿಕ್ಷಕಿಯರಾದ ಕಲ್ಪಾ ಮತ್ತು ಹೇಮ ನಿರ್ವಹಿಸಿದರು. ಮುಖ್ಯ ಶಿಕ್ಷಕಿ ಪಾರ್ವತಿ ಪಿ.ಯು. ಸ್ವಾಗತಿಸಿದರು. ಆಡಳಿತ ಮಂಡಳಿಯ ಕಾರ್ಯದರ್ಶಿ ವಿನೋದ್ ಪಿ.ಎನ್. ವಂದನಾರ್ಪಣೆ ಸಲ್ಲಿಸಿದರು.
















