ವಿರಾಜಪೇಟೆ, NEWS DESK ನ.16: ವ್ಯಕ್ತಿ ಕಾಲವಾದರೂ ಆತ ಸೃಷ್ಟಿಸಿದ ಕಲೆಗಳು ಸದಾ ಜೀವಂತವಾಗಿರುತ್ತವೆ. ಚಿತ್ರಕಲೆ ಮತ್ತು ಕಲಾವಿದರನ್ನು ಗೌರವಿಸಿ ಪ್ರೋತ್ಸಾಹಿಸುವ ಮನೋಭಾವ ಸಮಾಜದಲ್ಲಿ ಹೆಚ್ಚಾಗಬೇಕು ಎಂದು ವಿರಾಜಪೇಟೆ ಪುರಸಭೆಯ ಮಾಜಿ ಸದಸ್ಯ ಮೊಹಮ್ಮದ್ ರಾಫಿ ಅಭಿಪ್ರಾಯಪಟ್ಟರು.
ವಿರಾಜಪೇಟೆಯ ಆರ್ಜಿ ಗ್ರಾಮದ ಕೆ.ಎನ್. ಉಪೇಂದ್ರ ಅವರ ಖಾಸಗಿ ಸ್ಥಳದಲ್ಲಿ ಸಾಧಿಕ್ ಆರ್ಟ್ಸ್ ಲಿಂಕ್ ವಿರಾಜಪೇಟೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೊಡಗು ಇವರ ಸಹಯೋಗದಲ್ಲಿ ಆಯೋಜಿಸಿರುವ 10ನೇ ವರ್ಷದ ‘ಕಲಾ ಉತ್ಸವ ಕೊಡಗು-2026’ ರ 51 ದಿನಗಳ ಕಲಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಲಾವಿದರಿಗೆ ಸೂಕ್ತ ಪ್ರೋತ್ಸಾಹ, ಗೌರವ ಹಾಗೂ ಆರ್ಥಿಕ ನೆರವು ದೊರೆತಾಗ ಕಲೆ ಮತ್ತು ಕಲಾವಿದರಿಗೆ ಉತ್ತಮ ವೇದಿಕೆ ಕಲ್ಪಿಸಿದಂತಾಗುತ್ತದೆ. ಕಳೆದ 10 ವರ್ಷಗಳಿಂದ ಕಲಾ ಕ್ಷೇತ್ರದಲ್ಲಿ ನಿರಂತರವಾಗಿ ತೊಡಗಿಸಿಕೊಂಡಿರುವ ಸಾಧಿಕ್ ಅವರ ಕಲಾ ಪಯಣ ಹೀಗೆಯೇ ಮುಂದುವರಿಯಲಿ ಎಂದು ಹಾರೈಸಿದರು.
ಬೈರಂಬಾಡ ಗ್ರಾಮದ ಹಿರಿಯ ವುಡ್ ಆರ್ಟ್ ಕಲಾವಿದ ಮುಕ್ಕಾಟಿರ ವಿಠಲ್ ಸೋಮಯ್ಯ ಮಾತನಾಡಿ, ದೇಹಕ್ಕೆ ವಯಸ್ಸಾದರೂ ಕಲೆಗೆ ಎಂದಿಗೂ ವಯಸ್ಸಾಗುವುದಿಲ್ಲ. ಕಲಾವಿದನ ಸಾಧನೆ ಆತನ ಮರಣದ ನಂತರವೂ ಸಮಾಜದಲ್ಲಿ ನೆನಪಿನಲ್ಲಿ ಉಳಿಯುತ್ತದೆ. ಕಲಾವಿದರಿಗೆ ಸೂಕ್ತ ಮನ್ನಣೆ ದೊರೆಯುವಂತಹ ಶಿಬಿರಗಳು ನಿರಂತರವಾಗಿ ಆಯೋಜನೆಯಾಗಬೇಕು ಎಂದರು.
ಭಾರತೀಯ ವಿದ್ಯಾಭವನದ ಚಿತ್ರಕಲಾ ಶಿಕ್ಷಕ ಪ್ರಸನ್ನ ಕುಮಾರ್ ಶಿಬಿರದ ಲೋಗೋ ಬಿಡುಗಡೆಗೊಳಿಸಿ ಮಾತನಾಡಿ, ಚಿತ್ರಕಲಾವಿದರು ತಮ್ಮ ಕಲಾ ಹವ್ಯಾಸವನ್ನು ಬದಿಗಿಟ್ಟು ಜೀವನೋಪಾಯಕ್ಕಾಗಿ ಬೇರೆ ಮಾರ್ಗಗಳನ್ನು ಕಂಡುಕೊಳ್ಳುತ್ತಿರುವುದು ವಿಷಾದನೀಯ. ಇಂತಹ ಶಿಬಿರಗಳ ಮೂಲಕ ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸಬಹುದು ಎಂದು ತಿಳಿಸಿದರು.
ಚಿತ್ರಕಲಾವಿದ ರೂಪೇಶ್ ನಾಣಯ್ಯ ಅವರು, ತಮ್ಮ ಕಲಾಕೃತಿಗಳನ್ನು ಪ್ರದರ್ಶನದಲ್ಲಿ ಇರಿಸಿರುವುದು ಹಾಗೂ ಹಲವು ವರ್ಷಗಳಿಂದ ಉತ್ಸವದಲ್ಲಿ ಭಾಗವಹಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ಕಲಾ ಉತ್ಸವಕ್ಕೆ ಸ್ಥಳಾವಕಾಶ ನೀಡಿರುವ ಆರ್ಜಿ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಕೆ.ಎನ್. ಉಪೇಂದ್ರ ಅವರು ಶಿಬಿರದ ಉದ್ದೇಶ ಮತ್ತು ಆಯೋಜನೆಯನ್ನು ಶ್ಲಾಘಿಸಿದರು. ಸಾಮಾಜಿಕ ಕಾರ್ಯಕರ್ತ ನಯಾಜ್, ರೋಟರಿ ಶಾಲೆಯ ಮುಖ್ಯ ಶಿಕ್ಷಕಿ ವಿಶಾಲಾಕ್ಷಿ, ಶಿಕ್ಷಕ ಸುಲೈಮಾನ್, ಸಾಹಿತಿ ರಜಿತಾ ಕಾರ್ಯಪ್ಪ ಹಾಗೂ ಟಿ.ಜೆ. ಕಿಶೋರ್ ಕುಮಾರ್ ಶೆಟ್ಟಿ ಮಾತನಾಡಿ ಕಲೆಯನ್ನು ಉಳಿಸಿ ಬೆಳೆಸುವಲ್ಲಿ ಇಂತಹ ಕಾರ್ಯಕ್ರಮಗಳ ಮಹತ್ವವನ್ನು ವಿವರಿಸಿದರು.
ಸಾಹಿತಿ ರಜಿತಾ ಕಾರ್ಯಪ್ಪ ಮಾತನಾಡಿ, ಯಾವುದೇ ಫಲಾಪೇಕ್ಷೆಯಿಲ್ಲದೆ ಕಲೆಗೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿರುವ ಸಾಧಿಕ್ ಅವರ ಕಾರ್ಯ ಶ್ಲಾಘನೀಯ. ಕಳೆದ 10 ವರ್ಷಗಳಿಂದ ವಿದ್ಯಾರ್ಥಿಗಳಿಗೆ ಕಲೆಯ ಬಗ್ಗೆ ಅರಿವು ಮೂಡಿಸುತ್ತಿದ್ದು, ಪ್ರಕೃತಿಯ ಮಡಿಲಲ್ಲಿ 51 ದಿನಗಳ ಶಿಬಿರ ಆಯೋಜಿಸಿರುವುದು ಕೊಡಗಿನ ಕಲಾ ಕ್ಷೇತ್ರಕ್ಕೆ ಮಹತ್ವದ ಕೊಡುಗೆಯಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಾಧಿಕ್ ಆರ್ಟ್ಸ್ ಲಿಂಕ್‌ನ ಮಾಲೀಕರು ಹಾಗೂ ಶಿಬಿರದ ಆಯೋಜಕ ಸಾಧಿಕ್ ಹಂಸಾ ಮಾತನಾಡಿ, ಕಲೆ ಮನಸ್ಸಿಗೆ ಮುದ ನೀಡುತ್ತದೆ. ತಮ್ಮ ಹವ್ಯಾಸ ಇಂದು ಇಂತಹ ದೊಡ್ಡ ವೇದಿಕೆಯನ್ನು ಸೃಷ್ಟಿಸಿದ್ದು, ಕೊಡಗಿನಲ್ಲಿ ಕಲಾವಿದರಿಗೆ ಹೆಚ್ಚಿನ ಪ್ರೋತ್ಸಾಹ ದೊರೆಯಬೇಕು ಎಂದು ಆಶಿಸಿದರು.
51 ದಿನಗಳ ಕಲಾ ಶಿಬಿರ ಮತ್ತು ಪ್ರದರ್ಶನ
ಪ್ರಕೃತಿಯ ಮಡಿಲಲ್ಲಿ ಆಯೋಜಿಸಿರುವ ಕಲಾ ಉತ್ಸವದಲ್ಲಿ ಕೊಡಗಿನ ವಿವಿಧ ಕಲಾವಿದರ ಆಕರ್ಷಕ ಕಲಾಕೃತಿಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಮುಂದಿನ 51 ದಿನಗಳ ಕಾಲ ವಿವಿಧ ಕಲಾ ಶಿಬಿರಗಳು ನಡೆಯಲಿದ್ದು, ಆಸಕ್ತ ವಿದ್ಯಾರ್ಥಿಗಳಿಗೆ ಚಿತ್ರಕಲೆ ಸೇರಿದಂತೆ ವಿವಿಧ ಕಲಾ ಪ್ರಕಾರಗಳ ಕುರಿತು ತರಬೇತಿ ಮತ್ತು ಮಾರ್ಗದರ್ಶನ ನೀಡಲಾಗುತ್ತದೆ.
ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ಚಿತ್ರಕಲಾವಿದರು, ಕಲಾಸಕ್ತರು, ಸಾರ್ವಜನಿಕರು ಹಾಗೂ ಕುಟುಂಬಸ್ಥರು ಉಪಸ್ಥಿತರಿದ್ದರು.
















