ಬೆಂಗಳೂರು, NEWS DESK ನ.17: ಭಾರತೀಯ ವಾಯುಪಡೆಯಲ್ಲಿನ ಅಗ್ನಿವೀರ್ವಾಯು ಮತ್ತು ಏರ್ಮೆನ್ ವಿಭಾಗಗಳ ಉದ್ಯೋಗಾವಕಾಶಗಳ ಕುರಿತು ಯುವಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಭಾರತೀಯ ವಾಯುಪಡೆಯ ತರಬೇತಿ ಕಮಾಂಡ್ ವತಿಯಿಂದ ಸಂಚಾರಿ ಪ್ರಚಾರ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ.
ಬೆಂಗಳೂರಿನಲ್ಲಿರುವ ವಾಯುಪಡೆಯ ತರಬೇತಿ ಕಮಾಂಡ್ ಪ್ರಧಾನ ಕಚೇರಿಯಲ್ಲಿ ನವೆಂಬರ್ 17ರಂದು ನಡೆದ ಕಾರ್ಯಕ್ರಮದಲ್ಲಿ ಏರ್ ವೈಸ್ ಮಾರ್ಷಲ್ ಜಿ. ಅನಂತ್ ಹಾಗೂ ಹಿರಿಯ ಆಡಳಿತಾಧಿಕಾರಿ ಮತ್ತು ಕೇಂದ್ರ ಏರ್ಮೆನ್ ಆಯ್ಕೆ ಮಂಡಳಿಯ ಅಧ್ಯಕ್ಷ ಏರ್ ಕಮೋಡೋರ್ ಎನ್.ಕೆ. ಚಬ್ಬಾ ಅವರು ಹಸಿರು ನಿಶಾನೆ ತೋರುವ ಮೂಲಕ ಪ್ರಚಾರ ವಾಹನಕ್ಕೆ ಚಾಲನೆ ನೀಡಿದರು.
ಈ ಸಂಚಾರಿ ಪ್ರಚಾರ ವಾಹನವು ಏಳು ದಿನಗಳ ಕಾಲ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಸಂಚರಿಸಲಿದ್ದು, ಪ್ರತಿದಿನ ಸುಮಾರು 60 ಕಿ.ಮೀ. ಪ್ರಯಾಣಿಸಲಿದೆ. ರಾಮನಗರ, ಮಂಡ್ಯ, ಮೈಸೂರು, ಪಿರಿಯಾಪಟ್ಟಣ, ಮಡಿಕೇರಿ ಹಾಗೂ ಸುಳ್ಯ ಮಾರ್ಗವಾಗಿ ಸಂಚರಿಸಿ ನವೆಂಬರ್ 23ರಂದು ಬಂಟ್ವಾಳದಲ್ಲಿ ಅಭಿಯಾನ ಮುಕ್ತಾಯಗೊಳ್ಳಲಿದೆ.
ಅಭಿಯಾನದ ಭಾಗವಾಗಿ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ, ಆಟಗಳು ಹಾಗೂ ಮಾಹಿತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ನವೆಂಬರ್ 17ರಂದು ಬಿಡದಿ, 18ರಂದು ಚನ್ನಪಟ್ಟಣ, 19ರಂದು ಶ್ರೀರಂಗಪಟ್ಟಣ, 20ರಂದು ಪಿರಿಯಾಪಟ್ಟಣ, 21ರಂದು ಕುಶಾಲನಗರ, 22ರಂದು ಸುಳ್ಯ ಹಾಗೂ 23ರಂದು ಪುತ್ತೂರು ಮತ್ತು ಬಂಟ್ವಾಳದಲ್ಲಿ ಕಾರ್ಯಕ್ರಮಗಳು ನಡೆಯಲಿವೆ.
ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಏರ್ ವೈಸ್ ಮಾರ್ಷಲ್ ಜಿ. ಅನಂತ್ ಅವರು, ಭಾರತೀಯ ವಾಯುಪಡೆಯು ಸಾಹಸ, ಶಿಸ್ತು ಮತ್ತು ದೇಶಭಕ್ತಿಯ ಜೀವನಶೈಲಿಯನ್ನು ಒದಗಿಸುವ ಪ್ರತಿಷ್ಠಿತ ಸೇವೆಯಾಗಿದೆ. ಯುವಜನರು ದೇಶಸೇವೆಯ ಸವಾಲನ್ನು ಸ್ವೀಕರಿಸಿ ಭಾರತೀಯ ವಾಯುಪಡೆಯಲ್ಲಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಈ ಅಭಿಯಾನದ ಮೂಲಕ ಕರ್ನಾಟಕದ ಯುವಜನರಿಗೆ ಭಾರತೀಯ ವಾಯುಪಡೆಯ ಉದ್ಯೋಗಾವಕಾಶಗಳು, ನೇಮಕಾತಿ ಪ್ರಕ್ರಿಯೆ ಹಾಗೂ ವೃತ್ತಿಜೀವನದ ಕುರಿತು ಸಮಗ್ರ ಅರಿವು ಮೂಡಿಸುವ ಉದ್ದೇಶ ಹೊಂದಲಾಗಿದೆ.
















