ಸೋಮವಾರಪೇಟೆ, NEWS DESK ನ.17: ಪಟ್ಟಣ ವ್ಯಾಪ್ತಿಯಲ್ಲಿ 12 ಮಂದಿಗೆ ಕಚ್ಚಿ ಗಾಯಗೊಳಿಸುವ ಮೂಲಕ ಸಾರ್ವಜನಿಕರಲ್ಲಿ ಭಯದ ವಾತಾವರಣ ಸೃಷ್ಟಿಸಿದ್ದ ಬೀದಿನಾಯಿಯನ್ನು ಪಟ್ಟಣ ಪಂಚಾಯತಿಯ ಪೌರಕಾರ್ಮಿಕರು ಸಾರ್ವಜನಿಕರ ಸಹಕಾರದೊಂದಿಗೆ ಸೆರೆಹಿಡಿದಿದ್ದಾರೆ.
ಪಟ್ಟಣದಲ್ಲಿ ಸಾರ್ವಜನಿಕರು ಹಾಗೂ ಇತರೆ ಪ್ರಾಣಿಗಳ ಮೇಲೆ ಬೀದಿನಾಯಿ ದಾಳಿ ನಡೆಸಿ ಗಾಯಗೊಳಿಸುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ಪಟ್ಟಣ ಪಂಚಾಯತಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಾರ್ಯಪ್ರವೃತ್ತರಾದರು. ಬಳಿಕ ಕಾರ್ಯಾಚರಣೆ ನಡೆಸಿ ಸಾರ್ವಜನಿಕರಿಗೆ ಆತಂಕ ಉಂಟುಮಾಡಿದ್ದ ನಾಯಿಯನ್ನು ಯಶಸ್ವಿಯಾಗಿ ಸೆರೆಹಿಡಿಯಲಾಯಿತು. ಸೆರೆಹಿಡಿದ ನಾಯಿಯನ್ನು ದೂರದ ಅರಣ್ಯ ಪ್ರದೇಶಕ್ಕೆ ಬಿಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಎಂ.ಪಿ. ಮಹೇಶ್ ಕುಮಾರ್ ಹಾಗೂ ಆರೋಗ್ಯ ನಿರೀಕ್ಷಕ ಜಾಸೀಮ್ ಅವರು ಆಸ್ಪತ್ರೆಗೆ ಭೇಟಿ ನೀಡಿ ನಾಯಿ ಕಡಿತದಿಂದ ಗಾಯಗೊಂಡವರ ಆರೋಗ್ಯ ವಿಚಾರಿಸಿದರು. ಈ ವೇಳೆ ಪಟ್ಟಣ ಪಂಚಾಯತಿ ಸಿಬ್ಬಂದಿಗಳು ಉಪಸ್ಥಿತರಿದ್ದರು.
















