ಬೆಳಗಾವಿ, NEWS DESK ನ.17: ಹೊಂಬೆಳಕು ಸಾಂಸ್ಕೃತಿಕ ಸಂಘ (ರಿ.) ವತಿಯಿಂದ ನೀಡಲಾಗುವ ಪ್ರತಿಷ್ಠಿತ ‘ರಾಷ್ಟ್ರಕೂಟ ಸಾಹಿತ್ಯ ಶ್ರೀ’ ಪ್ರಶಸ್ತಿಗೆ ಕೊಡಗು ಜಿಲ್ಲೆಯ ಮಡಿಕೇರಿಯ ಲೇಖಕಿ ಜಯಲಕ್ಷ್ಮಿ ಕೆ. ಅವರ ‘ನಡೆದಷ್ಟೂ ದಾರಿ’ ಕೃತಿ ಆಯ್ಕೆಯಾಗಿದೆ.
ಬೆಳಗಾವಿಯ ಹೊಂಬೆಳಕು ಸಾಂಸ್ಕೃತಿಕ ಸಂಘವು ಕಳೆದ 26 ವರ್ಷಗಳಿಂದ ರಾಜ್ಯದ ಸಾಹಿತಿಗಳ ಸಾಹಿತ್ಯ ಕೃತಿಗಳಿಗೆ ‘ರಾಷ್ಟ್ರಕೂಟ ಸಾಹಿತ್ಯ ಶ್ರೀ’ ಪ್ರಶಸ್ತಿಯನ್ನು ನೀಡಿ ಗೌರವಿಸುತ್ತಾ ಬಂದಿದೆ.
2025ನೇ ಸಾಲಿನಲ್ಲಿ ಪ್ರಕಟಗೊಂಡ ಕೃತಿಗಳನ್ನು ಪ್ರಶಸ್ತಿಗಾಗಿ ರಾಜ್ಯದ ಬರಹಗಾರರಿಂದ ಆಹ್ವಾನಿಸಲಾಗಿತ್ತು. ಈ ಸ್ಪರ್ಧೆಗೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಒಟ್ಟು 96 ಕೃತಿಗಳು ಸಲ್ಲಿಕೆಯಾಗಿದ್ದವು. ಆಯ್ಕೆ ಸಮಿತಿಯು ಅವುಗಳನ್ನು ಪರಿಶೀಲಿಸಿ ಕೆಲವು ಕೃತಿಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ.
ಈ ಪೈಕಿ ಮಡಿಕೇರಿಯ ಜಯಲಕ್ಷ್ಮಿ ಕೆ. ಅವರ ‘ನಡೆದಷ್ಟೂ ದಾರಿ’ ಕೃತಿಯು ಪ್ರಶಸ್ತಿಗೆ ಆಯ್ಕೆಯಾಗಿರುವುದಾಗಿ ಹೊಂಬೆಳಕು ಸಾಂಸ್ಕೃತಿಕ ಸಂಘದ ಆಯ್ಕೆ ಸಮಿತಿ ಪ್ರಕಟಿಸಿದೆ.
ಜಯಲಕ್ಷ್ಮಿ ಕೆ. ಅವರ ಈ ಸಾಹಿತ್ಯ ಸಾಧನೆಗೆ ಆಯ್ಕೆ ಸಮಿತಿಯು ಅಭಿನಂದನೆ ಸಲ್ಲಿಸಿದ್ದು, ಕೊಡಗು ಜಿಲ್ಲೆಯ ಸಾಹಿತ್ಯಾಸಕ್ತರು ಹಾಗೂ ಅಭಿಮಾನಿಗಳಿಂದಲೂ ಅಭಿನಂದನೆಗಳು ವ್ಯಕ್ತವಾಗುತ್ತಿವೆ.
















