ಮಡಿಕೇರಿ, NEWS DESK ನ.20 : ಮಡಿಕೇರಿ ನಗರದಲ್ಲಿ ಕಾವೇರಿ ಕಲಾ ಕ್ಷೇತ್ರ (ಆರ್ಟ್ ಗ್ಯಾಲರಿ) ನಿರ್ಮಾಣದ ಪಕ್ಕದಲ್ಲಿರುವ ಪುರಾತನ ಮ್ಯಾಗ್ನೋಲಿಯಾ ಚಂಪಕ (ಸಂಪಿಗೆ) ಮರ ಹಾಗೂ ಗಾಂಧಿ ಮೈದಾನ ಮತ್ತು ರಾಜಾಸೀಟ್ ಪ್ರದೇಶಗಳಲ್ಲಿ ರಸ್ತೆ ಅಗಲೀಕರಣದ ವೇಳೆ ತೆರವುಗೊಳಿಸುವ ಅಪಾಯ ಎದುರಿಸುತ್ತಿರುವ ಗುಲರ್ ಅಂಜೂರ (ನಾಟಿ ಅಂಜೂರ/ಅತ್ತಿ) ಮರಗಳನ್ನು ಸಂರಕ್ಷಿಸುವಂತೆ ಕೊಡವ ನ್ಯಾಷನಲ್ ಕೌನ್ಸಿಲ್ ಒತ್ತಾಯಿಸಿದೆ.
ಈ ಸಂಬಂಧ ಸಿಎನ್ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರು ಕರ್ನಾಟಕ ರಾಜ್ಯದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಹಾಗೂ ಮಡಿಕೇರಿ ಅರಣ್ಯ ಇಲಾಖೆಯ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಮಡಿಕೇರಿ ಪಟ್ಟಣದಲ್ಲಿರುವ ದೈತ್ಯಾಕಾರದ ಪುರಾತನ ಮ್ಯಾಗ್ನೋಲಿಯಾ ಚಂಪಕ ಮರವು ನಗರದ ಪರಂಪರೆಯ ಸಂಕೇತವಾಗಿದ್ದು, ಅಸಂಖ್ಯಾತ ಪಕ್ಷಿಗಳಿಗೆ ಆಶ್ರಯ ನೀಡುವುದರ ಜೊತೆಗೆ ಸಾರ್ವಜನಿಕರಿಗೆ ನೆರಳು ಒದಗಿಸುತ್ತಿದೆ. ಆದರೆ ಕಲಾ ಕ್ಷೇತ್ರ ನಿರ್ಮಾಣದ ಹಿನ್ನೆಲೆಯಲ್ಲಿ ಈ ಮರವನ್ನು ಕಡಿಯುವ ಅಪಾಯ ಎದುರಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಅದೇ ರೀತಿ ಗಾಂಧಿ ಮೈದಾನ ಮತ್ತು ರಾಜಾಸೀಟ್ ಪ್ರದೇಶಗಳಲ್ಲಿರುವ ಗುಲರ್ ಅಂಜೂರ ಮರಗಳಿಗೂ ರಸ್ತೆ ಅಗಲೀಕರಣದ ಕಾರಣದಿಂದ ತೆರವುಗೊಳಿಸುವ ಭೀತಿ ಎದುರಾಗಿದೆ. ಚಂಪಕ ಮತ್ತು ಗುಲರ್ ಅಂಜೂರ ಮರಗಳು ಪರಿಸರ ಸಮತೋಲನ ಕಾಪಾಡುವಲ್ಲಿ, ನೀರಿನ ಮೂಲಗಳ ಸಂರಕ್ಷಣೆಯಲ್ಲಿ ಹಾಗೂ ಸ್ಥಳೀಯ ವಾತಾವರಣವನ್ನು ತಂಪಾಗಿಡುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಇಂತಹ ಪುರಾತನ ಮರಗಳನ್ನು ಕಡಿದರೆ ಪರಿಸರದ ಮೇಲೆ ಗಂಭೀರ ಪರಿಣಾಮ ಉಂಟಾಗಲಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಒಂದು ಕಾಲದಲ್ಲಿ ಶ್ರೀಮಂತ ಜೈವಿಕ ವೈವಿಧ್ಯತೆ ಹಾಗೂ ಸಸ್ಯ ಮತ್ತು ಪ್ರಾಣಿ ಸಂಪತ್ತಿಗೆ ಹೆಸರಾಗಿದ್ದ ಕೊಡವಲ್ಯಾಂಡ್ (ಕೊಡಗು) ಕಳೆದ ಕೆಲವು ವರ್ಷಗಳಿಂದ ಭೂ ಪರಿವರ್ತನೆ ಮತ್ತು ಅಭಿವೃದ್ಧಿಯ ಹೆಸರಿನಲ್ಲಿ ತನ್ನ ನೈಸರ್ಗಿಕ ಸಂಪತ್ತನ್ನು ಕಳೆದುಕೊಳ್ಳುತ್ತಿದೆ. ದೇಶದ ವಿವಿಧ ಪುರಸಭೆ ಹಾಗೂ ನಗರ ನಿಗಮಗಳು ಪ್ರತಿವರ್ಷ ಸಸಿಗಳನ್ನು ನೆಟ್ಟು ಹಸಿರು ಪರಿಸರ ಬೆಳೆಸುವ ಕಾರ್ಯದಲ್ಲಿ ತೊಡಗಿದ್ದರೆ, ಕೊಡಗಿನಲ್ಲಿ ಸ್ವಾಭಾವಿಕವಾಗಿ ಬೆಳೆದಿರುವ ಮರಗಳನ್ನೇ ಕಡಿದು ತೆರವುಗೊಳಿಸಲಾಗುತ್ತಿದೆ ಎಂದು ಆಕ್ಷೇಪಿಸಿದೆ.
ಜೈವಿಕ ವೈವಿಧ್ಯತೆ, ಪರಿಸರ ಮತ್ತು ಪರಂಪರೆಯನ್ನು ರಕ್ಷಿಸುವುದು ಭಾರತೀಯ ಸಂವಿಧಾನದ 51ಎ(ಜಿ) ವಿಧಿಯಡಿ ಪ್ರತಿಯೊಬ್ಬ ನಾಗರಿಕನ ಮೂಲಭೂತ ಕರ್ತವ್ಯವಾಗಿದೆ. ಆದ್ದರಿಂದ ಅಭಿವೃದ್ಧಿ ಕಾರ್ಯಗಳ ಹೆಸರಿನಲ್ಲಿ ಪುರಾತನ ಮರಗಳನ್ನು ಬಲಿಕೊಡದೆ ಅವುಗಳನ್ನು ಸಂರಕ್ಷಿಸುವ ಜವಾಬ್ದಾರಿಯನ್ನು ಸಂಬಂಧಪಟ್ಟ ಇಲಾಖೆಗಳು ನಿರ್ವಹಿಸಬೇಕು ಎಂದು ಎನ್.ಯು.ನಾಚಪ್ಪ ಆಗ್ರಹಿಸಿದ್ದಾರೆ.
ಕೊಡಗು ಹಿಂದಿನ ಪಾರ್ಟ್-ಸಿ ರಾಜ್ಯವಾಗಿದ್ದ ಸಂದರ್ಭದಲ್ಲಿ ವಿಲೀನಗೊಂಡ ನಂತರ ತಾಯ್ನಾಡಿನ ಪರಿಸರ, ಪರಂಪರೆ ಮತ್ತು ಬಾರಮಾಸಿ ಅಂತರ್ಜಲ ಮೂಲಗಳಿಗೆ ವ್ಯವಸ್ಥಿತವಾಗಿ ಹಾಗೂ ಸರಿಪಡಿಸಲಾಗದ ಹಾನಿಯಾಗಿದೆ. ಇಂತಹ ಪರಿಸ್ಥಿತಿ ಮತ್ತೆ ಮರುಕಳಿಸಬಾರದು. ಈ ಮರಗಳನ್ನು ತೆರವುಗೊಳಿಸುವ ಯಾವುದೇ ಕ್ರಮವು ಸಾಂವಿಧಾನಿಕ ಮತ್ತು ಆಡಳಿತಾತ್ಮಕ ಉಲ್ಲಂಘನೆಯಾಗಲಿದೆ ಎಂದು ಎಚ್ಚರಿಸಿದ್ದಾರೆ.
ಕಲಾ ಕ್ಷೇತ್ರದ ಪಕ್ಕದಲ್ಲಿರುವ ಪುರಾತನ ಸಂಪಿಗೆ ಮರ ಹಾಗೂ ಗಾಂಧಿ ಮೈದಾನ ಮತ್ತು ರಾಜಾಸೀಟ್ನ ಅತ್ತಿ ಮರಗಳನ್ನು ಯಾವುದೇ ಕಾರಣಕ್ಕೂ ತೆರವುಗೊಳಿಸದೆ, ಅವುಗಳೊಂದಿಗೆ ಕೊಡಗಿನ ಜೈವಿಕ ವೈವಿಧ್ಯತೆ ಮತ್ತು ನೈಸರ್ಗಿಕ ಪರಂಪರೆಯನ್ನು ಸಂರಕ್ಷಿಸಬೇಕೆಂದು ಎನ್.ಯು.ನಾಚಪ್ಪ ಒತ್ತಾಯಿಸಿದ್ದಾರೆ.
















