ಮಡಿಕೇರಿ, NEWS DESK ನ. 26: ರಾಷ್ಟ್ರೀಯ ಸ್ವಯಂಸೇವಕ ಸಂಘದ ಕೊಡಗು ಜಿಲ್ಲಾ ಸಂಘಚಾಲಕರಾಗಿದ್ದ ದಿವಂಗತ ಚಕ್ಕೇರ ಮನು ಕಾವೇರಪ್ಪ ಅವರ ನುಡಿನಮನ ಕಾರ್ಯಕ್ರಮ ಗುರುವಾರ ನಗರದ ಖಾಸಗಿ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಪ್ರಾಂತ ಪ್ರಚಾರಕ್ ಗುರುಪ್ರಸಾದ್ ಮಾತನಾಡಿ, ಸಮಾಜದಲ್ಲಿ ಹೇಗೆ ಆದರ್ಶ ವ್ಯಕ್ತಿಯಾಗಿ ಬದುಕಬಹುದು ಎಂಬುದನ್ನು ಚಕ್ಕೇರ ಮನು ಕಾವೇರಪ್ಪ ಅವರು ತಮ್ಮ ಜೀವನದ ಮೂಲಕ ತೋರಿಸಿಕೊಟ್ಟಿದ್ದಾರೆ ಎಂದು ಸ್ಮರಿಸಿದರು.
ಸಾಮಾನ್ಯ ವ್ಯಕ್ತಿಯನ್ನು ಅಸಾಮಾನ್ಯ ವ್ಯಕ್ತಿಯನ್ನಾಗಿ ರೂಪಿಸುವ ಶಕ್ತಿ ಸಂಘಕ್ಕಿದೆ. ಅದರಂತೆ ಮನು ಕಾವೇರಪ್ಪ ಅವರು ಆದರ್ಶ ಜೀವನ ನಡೆಸಿದ್ದಾರೆ. ಸಮಾಜದ ನಡುವೆ ಬದುಕುತ್ತಾ ಧ್ಯೇಯಪೂರ್ಣ ಜೀವನ ನಡೆಸಿದ ಅವರು, ತಮ್ಮ ಕೊನೆಯ ದಿನದವರೆಗೂ ಸಂಘಕ್ಕಾಗಿ ದುಡಿದಿದ್ದಾರೆ. ಸಮಾಜವನ್ನು ಒಗ್ಗೂಡಿಸಿಕೊಂಡು ಮುನ್ನಡೆಯುವ ಗುಣ ಅವರಲ್ಲಿತ್ತು ಎಂದು ಹೇಳಿದರು.
ಅನೇಕ ಕಾರ್ಯಕರ್ತರಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸವನ್ನು ಮನು ಕಾವೇರಪ್ಪ ಅವರು ಮಾಡಿದ್ದರು. ಎಲ್ಲವನ್ನೂ ಸಮಾನವಾಗಿ ಸ್ವೀಕರಿಸಿ ಕಾರ್ಯನಿರ್ವಹಿಸುತ್ತಿದ್ದ ಅವರು, ಆದರ್ಶ ಕಾರ್ಯಕರ್ತರಾಗಿ ಸಂಘದ ಪ್ರತಿಜ್ಞೆಯ ಪ್ರತಿಯೊಂದು ಶಬ್ದಕ್ಕೂ ಅರ್ಥ ಕಲ್ಪಿಸುವ ರೀತಿಯಲ್ಲಿ ಬದುಕಿದ್ದಾರೆ ಎಂದು ಗುರುಪ್ರಸಾದ್ ತಿಳಿಸಿದರು.
ಕಾರ್ಯಕ್ರಮದಲ್ಲಿ ಹಿಂದೂ ಜಾಗರಣ ವೇದಿಕೆಯ ಪ್ರಾಂತ ಕಾರ್ಯಕಾರಿಣಿ ಸದಸ್ಯ ಉಲ್ಲಾಸ್ ತಿಮ್ಮಯ್ಯ, ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ, ಎ.ಜಿ. ತಮ್ಮಯ್ಯ, ಸೋಮಾನಂದ ಸ್ವಾಮೀಜಿ, ಕರ್ನಲ್ ಮುತ್ತಣ್ಣ, ತಮ್ಮಪ್ಪ ಸೇರಿದಂತೆ ಹಲವರು ನುಡಿನಮನ ಸಲ್ಲಿಸಿದರು.


































