ಮಡಿಕೇರಿ, NEWS DESK ನ.27: ಕೊಡಗಿನ ಸಂಸ್ಕೃತಿಯನ್ನು ಮಲಯಾಳಿ ಸಮುದಾಯ ನಾಶ ಮಾಡುತ್ತಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಮಾಜಿ ಸಂಸದ ಪ್ರತಾಪ್ ಸಿಂಹ ಅವರು ನಿರ್ದಿಷ್ಟ ಸಾಕ್ಷ್ಯಗಳಿದ್ದರೆ ಅವುಗಳನ್ನು ಬಹಿರಂಗಪಡಿಸಲಿ ಎಂದು ಕೊಡಗಿನ ವಿವಿಧ ಹಿಂದೂ ಮಲಯಾಳಿ ಸಂಘಟನೆಗಳು ಆಗ್ರಹಿಸಿವೆ.
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹಿಂದೂ ಮಲಯಾಳಿ ಸಮಾಜದ ಕೊಡಗು ಜಿಲ್ಲಾ ಸಮಿತಿ ಅಧ್ಯಕ್ಷ ಟಿ.ಕೆ. ಸುಧೀರ್, ಕೊಡಗು ಜಿಲ್ಲಾ ಹಿಂದೂ ಮಲಯಾಳಿ ಸಮಾಜ ಸೇರಿದಂತೆ ಜಿಲ್ಲೆಯ ವಿವಿಧ ಹಿಂದೂ ಮಲಯಾಳಿ ಸಂಘಟನೆಗಳು, ಕೊಡಗು ಜಿಲ್ಲಾ ಎಸ್ಎನ್ಡಿಪಿ, ವಿಶ್ವಕರ್ಮ ಸಂಘಟನೆ, ಕೆಎನ್ಎಸ್ ಹಾಗೂ ತೀಯನ್ ಮಹಾಸಭಾ ಸಂಘಟನೆಗಳು ಜಂಟಿಯಾಗಿ ಸಭೆ ನಡೆಸಿ ಪ್ರತಾಪ್ ಸಿಂಹ ಅವರ ಹೇಳಿಕೆಯನ್ನು ಖಂಡಿಸಿವೆ ಎಂದು ತಿಳಿಸಿದರು.
ಕೊಡಗು ಮತ್ತು ಕೇರಳದ ನಡುವಿನ ಬಾಂಧವ್ಯ ತಲೆಮಾರುಗಳಿಂದಲೂ ಬೆಳೆದುಬಂದಿದೆ. ವ್ಯಾಪಾರ, ಹಬ್ಬಗಳು ಹಾಗೂ ಧಾರ್ಮಿಕ ಆಚರಣೆಗಳು ಈ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಿವೆ. ಕೊಡಗಿನ ಹಲವು ಕುಟುಂಬಗಳು ಹಾಗೂ ದೇವಾಲಯಗಳ ಪೂಜಾ ಸಂಪ್ರದಾಯಗಳು ಕೇರಳದೊಂದಿಗೆ ನಂಟು ಹೊಂದಿವೆ. ಎರಡೂ ಪ್ರದೇಶಗಳ ಜನರು ಪರಸ್ಪರರ ನಂಬಿಕೆ ಮತ್ತು ಆಚರಣೆಗಳನ್ನು ಗೌರವಿಸುತ್ತಾ ಬಂದಿದ್ದಾರೆ ಎಂದರು.
ಕೊಡಗಿನ ಭಾಷೆ, ಸಂಸ್ಕೃತಿ ಮತ್ತು ಸಂಪ್ರದಾಯಗಳ ಬಗ್ಗೆ ಮಲಯಾಳಿ ಸಮುದಾಯಕ್ಕೆ ಅಪಾರ ಗೌರವವಿದೆ. ಕೊಡವ ಸಮುದಾಯ ಸೇರಿದಂತೆ ಜಿಲ್ಲೆಯ ಎಲ್ಲಾ ಸಮುದಾಯಗಳೊಂದಿಗೆ ಮಲಯಾಳಿಗಳು ಸೌಹಾರ್ದಯುತವಾಗಿ ಬದುಕುತ್ತಿದ್ದಾರೆ. ಜಿಲ್ಲೆಯ ಕೃಷಿ, ವ್ಯಾಪಾರ, ಶಿಕ್ಷಣ ಹಾಗೂ ಸೇವಾ ಕ್ಷೇತ್ರಗಳಲ್ಲಿಯೂ ಸಮುದಾಯದವರು ತಮ್ಮದೇ ಆದ ಕೊಡುಗೆ ನೀಡುತ್ತಿದ್ದಾರೆ. ನಮ್ಮ ಸಮುದಾಯದ ಸಂಸ್ಕೃತಿ ಮತ್ತು ಸಂಸ್ಕಾರಕ್ಕೆ ರಾಜಕೀಯ ನಾಯಕರಿಂದ ಪ್ರಮಾಣಪತ್ರದ ಅಗತ್ಯವಿಲ್ಲ ಎಂದು ಹೇಳಿದರು.
ಯಾರಾದರೂ ತಪ್ಪು ಮಾಡಿದ್ದರೆ ಅಂತಹ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಿ. ಆದರೆ, ಅದಕ್ಕಾಗಿ ಇಡೀ ಸಮುದಾಯವನ್ನೇ ಹೊಣೆಗಾರರನ್ನಾಗಿ ಮಾಡುವುದು ಸರಿಯಲ್ಲ. ಕೊಡಗಿನ ಸಂಸ್ಕೃತಿಯ ಸಂರಕ್ಷಣೆಗೆ ಸಂಬಂಧಿಸಿದಂತೆ ಯಾವುದೇ ಆತಂಕಗಳಿದ್ದರೆ ಪರಸ್ಪರ ಗೌರವದಿಂದ ಚರ್ಚಿಸಲು ಸಮುದಾಯ ಸಿದ್ಧವಿದೆ ಎಂದು ಸ್ಪಷ್ಟಪಡಿಸಿದರು.
ಪ್ರತಾಪ್ ಸಿಂಹ ಅವರು ತಮ್ಮ ಹೇಳಿಕೆಯನ್ನು ಹಿಂಪಡೆದು, ಸಾರ್ವಜನಿಕವಾಗಿ ಸಮುದಾಯಕ್ಕೆ ಉಂಟಾಗಿರುವ ನೋವಿಗೆ ವಿಷಾದ ವ್ಯಕ್ತಪಡಿಸಬೇಕು. ಇಲ್ಲದಿದ್ದರೆ ಮುಂದಾಗುವ ಅನಾಹುತಗಳಿಗೆ ಅವರೇ ಹೊಣೆಗಾರರಾಗಬೇಕಾಗುತ್ತದೆ ಎಂದು ಸಂಘಟನೆಗಳ ಪ್ರಮುಖರು ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಎಸ್ಎನ್ಡಿಪಿ ಜಿಲ್ಲಾ ಉಪಾಧ್ಯಕ್ಷ ಕೆ.ವಿ. ಪ್ರೇಮಾನಂದ, ವಿರಾಜಪೇಟೆ ಹಿಂದೂ ಮಲಯಾಳಿ ಸಂಘದ ಮಹಿಳಾ ಸಮಿತಿ ಸದಸ್ಯೆ ಶೀಬಾ ಪೃಥ್ವಿನಾಥ್, ಗೋಣಿಕೊಪ್ಪಲು ಹಿಂದೂ ಮಲಯಾಳಿ ಸಂಘದ ಅಧ್ಯಕ್ಷ ಕೆ.ಪಿ. ಪ್ರಶಾಂತ್, ಕುಶಾಲನಗರ ಕೇರಳ ಸಮಾಜದ ಅಧ್ಯಕ್ಷ ಪಿ. ರವೀಂದ್ರನ್, ಕೊಡಗು ಜಿಲ್ಲಾ ತೀಯನ್ ಮಹಾಸಭಾದ ಉಪಾಧ್ಯಕ್ಷ ಅಶೋಕ್ ಕುಮಾರ್ ಹಾಗೂ ಹಿಂದೂ ಮಲಯಾಳಿ ಸಮಾಜದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಉಣ್ಣಿಕೃಷ್ಣನ್ ಎನ್.ವಿ. ಉಪಸ್ಥಿತರಿದ್ದರು.


































