ಸೋಮವಾರಪೇಟೆ, NEWS DESK ನ.27: ಮಹಿಳೆಯರ ಮೇಲಿನ ಹಿಂಸೆ ಮತ್ತು ದೌರ್ಜನ್ಯವನ್ನು ತಡೆದು, ಸಮಾನತೆ ಹಾಗೂ ಸುರಕ್ಷಿತ ಸಮಾಜ ನಿರ್ಮಿಸುವ ಉದ್ದೇಶದಿಂದ ಸೋಮವಾರಪೇಟೆ ಇನ್ನರ್ ವೀಲ್ ಕ್ಲಬ್ ಆಫ್ ಸೋಮವಾರಪೇಟೆ ಗೋಲ್ಡ್ ವತಿಯಿಂದ ಪಟ್ಟಣದ ಪುಟ್ಟಪ್ಪ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಜಾಗೃತಿ ಮೂಡಿಸಲಾಯಿತು.
ವಿಶ್ವಸಂಸ್ಥೆಯು ಪ್ರತಿವರ್ಷ ನವೆಂಬರ್ 25ರಂದು ಆಚರಿಸುವ ‘ಮಹಿಳೆಯರ ಮೇಲಿನ ದೌರ್ಜನ್ಯ ನಿರ್ಮೂಲನೆಗಾಗಿ ಅಂತಾರಾಷ್ಟ್ರೀಯ ದಿನ’ದ ಅಂಗವಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಮಹಿಳೆಯರ ಮೇಲಿನ ದೌರ್ಜನ್ಯ ತಡೆಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತಿ ತಿಂಗಳ 25ನೇ ತಾರೀಖನ್ನು ‘ಯುಎನ್ ಆರೆಂಜ್ ಡೇ’ ಎಂದು ಗುರುತಿಸಲಾಗುತ್ತದೆ. ಕಿತ್ತಳೆ ಬಣ್ಣವು ಆಶಾವಾದ, ಭರವಸೆ ಹಾಗೂ ಹಿಂಸಾಮುಕ್ತ ಭವಿಷ್ಯದ ಸಂಕೇತವಾಗಿದೆ. ಮಹಿಳೆಯರು ಭಯವಿಲ್ಲದೆ, ಗೌರವದಿಂದ ಮತ್ತು ಸ್ವತಂತ್ರವಾಗಿ ಬದುಕುವ ಸಮಾಜ ನಿರ್ಮಿಸುವುದು ಈ ಅಭಿಯಾನದ ಪ್ರಮುಖ ಆಶಯವಾಗಿದೆ ಎಂದು ಕ್ಲಬ್ ಅಧ್ಯಕ್ಷೆ ಲತಾ ಮಂಜು ತಿಳಿಸಿದರು.
ಮಹಿಳಾ ದೌರ್ಜನ್ಯ ಮುಕ್ತ ಸಮಾಜ ನಿರ್ಮಾಣವು ಕೇವಲ ಒಂದು ದಿನದ ಅಭಿಯಾನಕ್ಕೆ ಸೀಮಿತವಾಗದೆ, ಪ್ರತಿದಿನದ ನಡವಳಿಕೆ ಮತ್ತು ಪ್ರತಿಯೊಬ್ಬರ ಸಂಕಲ್ಪವಾಗಬೇಕು. ಮಹಿಳೆಯರಿಗೆ ರಕ್ಷಣೆ ನೀಡುವುದರ ಜೊತೆಗೆ ಅವರ ಗೌರವಕ್ಕೆ ಧಕ್ಕೆ ತರುವ ಮನಸ್ಥಿತಿಯಲ್ಲೂ ಬದಲಾವಣೆಯಾಗಬೇಕು. ಅನುಕಂಪಕ್ಕಿಂತ ಸಮಾನತೆ, ಭರವಸೆಯ ಮಾತುಗಳಿಗಿಂತ ಸುರಕ್ಷಿತ ಬದುಕು ದೊರೆಯಬೇಕು. ಮಹಿಳೆಯರ ಹಕ್ಕು, ಸ್ವಾತಂತ್ರ್ಯ ಮತ್ತು ಘನತೆಯನ್ನು ಗೌರವಿಸುವ ಮನೋಭಾವ ಪ್ರತಿಯೊಬ್ಬರಲ್ಲೂ ಬೆಳೆಯಬೇಕು ಎಂದು ಅವರು ಆಶಿಸಿದರು.
ಕಾರ್ಯಕ್ರಮದಲ್ಲಿ ಕ್ಲಬ್ ಪದಾಧಿಕಾರಿಗಳಾದ ಸುವಿನಾ ಕೃಪಾಲ್, ಭಾಗ್ಯ, ಪ್ರೇಮಾ ಹೃಷಿಕೇಶ್, ಲತಾ ನಾಗೇಶ್, ಪವಿತ್ರ ಧರ್ಮಪ್ಪ, ಚಿತ್ರ ಭೋಜರಾಜ್, ರಾಜೇಶ್ವರಿ, ನಂದಿನಿ ಗೋಪಾಲ್, ವನಿತಾ ಜಯರಾಂ, ಸ್ಮಿತಾ ನವೀನ್, ಅಮೃತಾ ಕಿರಣ್ ಸೇರಿದಂತೆ ಇತರರು ಉಪಸ್ಥಿತರಿದ್ದರು.


































