ವಿರಾಜಪೇಟೆ, NEWS DESK ನ.28: ಕೊಡಗಿನ ಸುಗ್ಗಿ ಸಂಭ್ರಮ ಹಾಗೂ ಸಾಂಪ್ರದಾಯಿಕ ಶ್ರೀಮಂತಿಕೆಯ ಪ್ರತೀಕವಾದ ಪುತ್ತರಿ ಹಬ್ಬದ ಸಡಗರ ಅಮ್ಮತ್ತಿ ನಾಡಿನ ಬೋಂದ ಮುನ್ನೂರೊಕ್ಕಡ ನಾಡ್ ಮಂದ್ ಆದ ಕಳ್ಳಿರ ಬಾಣೆಯಲ್ಲಿ ಮನೆಮಾಡಿತ್ತು. ತಲೆತಲಾಂತರಗಳಿಂದ ನಡೆದುಕೊಂಡು ಬಂದಿರುವ ಪದ್ಧತಿಯಂತೆ ಸಾಂಪ್ರದಾಯಿಕ ಆಚಾರ-ವಿಚಾರಗಳು ಹಾಗೂ ಜಾನಪದ ಕಲೆಗಳ ವೈಭವದೊಂದಿಗೆ ಪುತ್ತರಿ ಕೋಲ್ ಮಂದ್ ಕಾರ್ಯಕ್ರಮ ಸಂಭ್ರಮದಿಂದ ನೆರವೇರಿತು.
ಬೋಂದ ಮುನ್ನೂರೊಕ್ಕಡ ತಕ್ಕರಾದ ಮುಕ್ಕಾಟಿರ ಸಂತೋಷ್ ಅವರ ತಕ್ಕಾಮೆಯಲ್ಲಿ ಕಾರ್ಯಕ್ರಮದ ವಿಧಿವಿಧಾನಗಳು ಜರುಗಿದವು. ಕಳ್ಯಪಂಡ, ಉಪ್ಪಂಗಡ ಹಾಗೂ ಕೋಪುಡ ತಕ್ಕರ ಸಮ್ಮುಖದಲ್ಲಿ ಮಂದ್‌ನಲ್ಲಿ ಕೋಲಾಟ್, ಪರೆಯಾಟ್, ತೆಂಗಿನಕಾಯಿಗೆ ಗುಂಡು ಹೊಡೆಯುವುದು, ವಾಲಗತಾಟ್ ಹಾಗೂ ದುಡಿಕೊಟ್ಟು ಪಾಟ್ ಸೇರಿದಂತೆ ವಿವಿಧ ಕೊಡವ ಜಾನಪದ ಕಲೆಗಳು ಅನಾವರಣಗೊಂಡವು.
ಪುತ್ತರಿ ಹಬ್ಬದ ಪ್ರಯುಕ್ತ ಆಯೋಜಿಸಲಾಗಿದ್ದ ಕೋಲಾಟ್, ಪರೆಯಾಟ್ ಹಾಗೂ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಗಳು ಪ್ರೇಕ್ಷಕರನ್ನು ರಂಜಿಸಿದವು. ತೀವ್ರ ಕುತೂಹಲ ಕೆರಳಿಸಿದ್ದ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯಲ್ಲಿ ಐನಂಡ ರಂಜನ್ ಅವರ ಪುತ್ರ ಧನ್ ಉತ್ತಪ್ಪ ಪ್ರಥಮ ಸ್ಥಾನ ಗಳಿಸಿದರೆ, ನೆಲ್ಲಚಂಡ ಹರ್ಷ ದ್ವಿತೀಯ ಸ್ಥಾನ ಪಡೆದುಕೊಂಡರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬೋಂದ ಮುನ್ನೂರೊಕ್ಕಡ ದೇವಸ್ಥಾನ ಸಮಿತಿಯ ಅಧ್ಯಕ್ಷ ಚಿಲ್ಲವಂಡ ಪಿ. ಕಾವೇರಪ್ಪ ಮಾತನಾಡಿ, “ಭೂಮಿ ತಾಯಿ ನೀಡಿದ ಸಮೃದ್ಧ ಫಸಲನ್ನು ಸಂಭ್ರಮಿಸುವ ಕೊಡಗಿನ ಪುತ್ತರಿ ಹಬ್ಬಕ್ಕೆ ತನ್ನದೇ ಆದ ಪವಿತ್ರ ಹಾಗೂ ಐತಿಹಾಸಿಕ ಹಿನ್ನೆಲೆಯಿದೆ. ಆಧುನಿಕತೆಯ ಭರಾಟೆಯಲ್ಲಿ ಇಂದು ನಮ್ಮ ಮೂಲ ಸಂಸ್ಕೃತಿ ಮತ್ತು ಆಚಾರ-ವಿಚಾರಗಳು ಮರೆಯಾಗುತ್ತಿದ್ದು, ಅವುಗಳನ್ನು ಉಳಿಸಿ ಬೆಳೆಸುವ ದೊಡ್ಡ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಮಂದ್‌ನಲ್ಲಿ ನಾಡು-ಊರಿನವರೆಲ್ಲರೂ ಎಲ್ಲವನ್ನೂ ಮರೆತು ಒಂದೆಡೆ ಸೇರಿ ಆಡುವ ಕೋಲಾಟ ಹಾಗೂ ಸಾಂಪ್ರದಾಯಿಕ ಕ್ರೀಡೆಗಳು ಸಮುದಾಯದಲ್ಲಿ ಒಗ್ಗಟ್ಟು ಮತ್ತು ಸಹಬಾಳ್ವೆಯನ್ನು ಗಟ್ಟಿಗೊಳಿಸುವುದರ ಜೊತೆಗೆ ನಮ್ಮ ಭವ್ಯ ಪರಂಪರೆಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯಲು ದಾರಿದೀಪವಾಗಿವೆ” ಎಂದು ಅಭಿಪ್ರಾಯಪಟ್ಟರು.
ಅಮ್ಮತ್ತಿ ನಾಡಿನ ಕೊಡವ ಸಂಪ್ರದಾಯಕ್ಕೆ ಸೇರಿದ ಕುಟುಂಬಗಳ ಸದಸ್ಯರು, ಹಿರಿಯರು, ಯುವಕ-ಯುವತಿಯರು ಹಾಗೂ ಊರಿನವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಂಭ್ರಮಿಸಿದರು. ಪರಸ್ಪರ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ಈ ವರ್ಷದ ಪುತ್ತರಿ ಕೋಲಾಟಕ್ಕೆ ಸಂಭ್ರಮದ ತೆರೆ ಎಳೆಯಲಾಯಿತು.


































