ಮಡಿಕೇರಿ ನಗರ ಆಟೋ ಮಾಲೀಕ, ಚಾಲಕರ ಸಂಘದಿಂದ ಕ್ರೀಡಾಕೂಟ, ಡ್ಯಾನ್ಸ್ ಮೇಳ : ಗಣರಾಜ್ಯೋತ್ಸವದ ಸಂಭ್ರಮಕ್ಕಾಗಿ

ಮಡಿಕೇರಿ ಜ.24 : ಗಣರಾಜ್ಯೋತ್ಸವವನ್ನು ಸಂಭ್ರಮದಿAದ ಆಚರಿಸುವ ಉದ್ದೇಶದಿಂದ ಮಡಿಕೇರಿ ನಗರ ಆಟೋ ಮಾಲೀಕ, ಚಾಲಕರ ಸಂಘದ ವತಿಯಿಂದ ವಿವಿಧ ಕ್ರೀಡಾಕೂಟ ಮತ್ತು ಡ್ಯಾನ್ಸ್ ಮೇಳವನ್ನು ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಎ.ಅರುಣ್‌ಕುಮಾರ್ ಹಾಗೂ ಪ್ರಧಾನ ಕಾರ್ಯದರ್ಶಿ ಬಾರನ ದಿನೇಶ್ ತಿಳಿಸಿದ್ದಾರೆ.
ಜ.26 ರಂದು ನಗರದ ಗಾಂಧಿ ಮೈದಾನದಲ್ಲಿ ಆಟೋ ಚಾಲಕರು ಹಾಗೂ ಸಾರ್ವಜನಿಕರಿಗಾಗಿ ಕ್ರೀಡಾಕೂಟ ಮತ್ತು ಡ್ಯಾನ್ಸ್ ಮೇಳವನ್ನು ಆಯೋಜಿಸಲಾಗಿದೆ. ಕ್ರೀಡಾಕೂಟ ಬೆಳಗ್ಗೆ 9 ಗಂಟೆಗೆ ಮತ್ತು 25 ಕ್ಕೂ ಹೆಚ್ಚು ನೃತ್ಯ ತಂಡಗಳು ಭಾಗವಹಿಸುವ ಡ್ಯಾನ್ಸ್ ಮೇಳ ಸಂಜೆ 6 ಗಂಟೆಗೆ ಉದ್ಘಾಟನೆಗೊಳ್ಳಲಿದೆ.
ಅಂದು ಬೆಳಗ್ಗೆ 8:30 ಗಂಟೆಗೆ ಖಾಸಗಿ ಬಸ್ ನಿಲ್ದಾಣದ ಬಳಿ ಇರುವ ಆಟೋ ನಿಲ್ದಾಣದಲ್ಲಿ ಧ್ವಜಾರೋಹಣ ನೆರವೇರಿಸಲಾಗುವುದು. ನಂತರ ಬನ್ನಿ ಮಂಟಪದಿoದ ಗಾಂಧಿ ಮೈದಾನದವರೆಗೆ ಆಟೋಗಳ ಮೆರವಣಿಗೆ ನಡೆಯಲಿದೆ.
::: ಸನ್ಮಾನ :::
10ನೇ ತರಗತಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಆಟೋ ಚಾಲಕರ ಮಕ್ಕಳನ್ನು ಗುರುತಿಸಿ ನೆನಪಿನ ಕಾಣಿಕೆ ನೀಡಿ ಗೌರವಿಸಲಾಗುವುದು.
ದಕ್ಷ ಮತ್ತು ಜನಸ್ನೇಹಿಯಾಗಿ ಕಾರ್ಯನಿರ್ವಹಿಸುತ್ತಿರುವ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ ಹಾಗೂ ಟ್ರಾಫಿಕ್ ASI ಐ.ಪಿ.ನಂದ ಅವರುಗಳನ್ನು ಸನ್ಮಾನಿಸಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.
::: ಕಾವೇರಿ ಕ್ರಿಕೆಟರ್ಸ್ ಚಾಂಪಿಯನ್ :::
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಇತ್ತೀಚೆಗೆ ನಡೆದ ಆಟೋ ಚಾಲಕರ ಕ್ರಿಕೆಟ್ ಪಂದ್ಯಾವಳಿಯಲ್ಲಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿಯ ಕಾವೇರಿ ಕ್ರಿಕೆಟರ್ಸ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಯೂನಿಯನ್ ಹಂಟರ್ಸ್ ತಂಡ ದ್ವಿತೀಯ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದೆ.