ಕೊಡಗಿನಲ್ಲಿ ಉತ್ತಮ ಮಳೆ : ಕಾಫಿ, ಭತ್ತಕ್ಕೆ ಹಾನಿ

24/01/2023

ಮಡಿಕೇರಿ ಜ.24 : ಕಳೆದ ಎರಡು ದಿನಗಳಿಂದ ಮೋಡದ ವಾತಾವರಣವಿದ್ದ ಕೊಡಗು ಜಿಲ್ಲೆಯ ವಿವಿಧ ಭಾಗಗಳಲ್ಲಿ ಉತ್ತಮ ಮಳೆಯಾಗಿದೆ.
ಸಂಜೆ 4 ಗಂಟೆಯಿoದ ರಾತ್ರಿ 9 ಗಂಟೆಯ ವರೆಗೆ ನಿರಂತರವಾಗಿ ಮಳೆ ಸುರಿದಿದೆ. ಕಾವೇರಿಯ ಉಗಮ ಸ್ಥಾನ ತಲಕಾವೇರಿ ಹಾಗೂ ಭಾಗಮಂಡಲದಲ್ಲಿ ಬೆಳಗ್ಗಿನಿಂದಲೇ ಮಳೆಯಾಗಿದೆ.
ಮಡಿಕೇರಿ, ನಾಪೋಕ್ಲು, ಸುಂಟಿಕೊಪ್ಪ, ಕುಶಾಲನಗರ, ಸಿದ್ದಾಪುರ, ವಿರಾಜಪೇಟೆ, ಪೊನ್ನಂಪೇಟೆ, ಸೋಮವಾರಪೇಟೆ ಸೇರಿದಂತೆ ಹಲವು ಕಡೆ ಉತ್ತಮ ಮಳೆ ಸುರಿದಿದೆ.
ಮಡಿಕೇರಿಯಲ್ಲಿ ಮೈಕೊರೆಯುವ ಚಳಿ ಇದ್ದು, ಮಂಜು ಮುಸುಕಿದ ವಾತಾವರಣ ಮುಂದುವರೆದಿದೆ.
::: ಬೆಳೆನಾಶ :::
ದಿಢೀರ್ ಆಗಿ ಸುರಿದ ಅಕಾಲಿಕ ಮಳೆಯಿಂದ ಕಾಫಿ ಮತ್ತು ಭತ್ತದ ಫಸಲಿಗೆ ಹಾನಿಯಾಗಿದೆ. ಈ ಎರಡೂ ಬೆಳೆಗಳ ಕೊಯ್ಲಿನ ಸಮಯ ಇದಾಗಿರುವುದರಿಂದ ಒಣಗಲು ಹಾಕಿದ್ದ ಫಸಲು ನೀರು ಪಾಲಾಗಿದೆ. ಕೈಗೆ ಬಂದ ತುತ್ತು ಬಾಯಿಗೆ ಬಾರದ ಸ್ಥಿತಿ ಉಂಟಾಗಿದೆ ಎಂದು ಕೃಷಿಕ ವರ್ಗ ಬೇಸರ ವ್ಯಕ್ತಪಡಿಸಿದೆ.