ಫೀ.ಮಾ.ಕಾರ್ಯಪ್ಪ ಕಾಲೇಜ್ : ಯುವ ಸಮೂಹ ಮಾದಕ ವ್ಯಸನಕ್ಕೆ ತುತ್ತಾಗದಿರಿ : ಕಟ್ಟೇರ ಕೆ.ಕಾರ್ಯಪ್ಪ

24/01/2023

ಮಡಿಕೇರಿ ಜ.24 : ಭವಿಷ್ಯದಲ್ಲಿ ಉತ್ತಮ ಸಮಾಜವನ್ನು ನಿರ್ಮಿಸಬೇಕಾದ ಯುವ ಸಮೂಹ ಮಾದಕ ವ್ಯವಸನಕ್ಕೆ ತುತ್ತಾಗುತ್ತಿರುವುದು ದುರಂತ ಎಂದು ಕೊಡವ ದೀನಬಂಧು ದತ್ತಿ ಸಂಸ್ಥೆಯ ಅಧ್ಯಕ್ಷ ಕಟ್ಟೇರ ಕೆ. ಕಾರ್ಯಪ್ಪ ಅತೃಪ್ತಿ ವ್ಯಕ್ತಪಡಿಸಿದರು.
ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ, ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಉತ್ತಮ ಶಿಕ್ಷಣದೊಂದಿಗೆ ಸನ್ನಡತೆಯನ್ನು ಮೈಗೂಡಿಸಿಕೊಂಡು ವಿದ್ಯಾರ್ಥಿಗಳು ಎಲ್ಲರಿಗೂ ಮಾದರಿಯಾಗುವಂತೆ ಬದುಕಬೇಕೆಂದು ಸಲಹೆ ನೀಡಿದರು.
ಇದೇ ಸಂದರ್ಭ ಮಾತನಾಡಿದ ಕೊಡವ ದೀನಬಂಧು ದತ್ತಿ ಸಂಸ್ಥೆಯ ಕಾರ್ಯದರ್ಶಿ ಪಟ್ಟಡ ಎ.ಜಯಕುಮಾರ್, ಆಹಾರ ಪ್ರತಿಯೊಬ್ಬರಿಗೂ ಅಗತ್ಯವಾಗಿದ್ದು, ಯಾರಿಗೂ ಆಹಾರವನ್ನು ಪೋಲು ಮಾಡುವ ಹಕ್ಕಿಲ್ಲ ಎಂದು ತಿಳಿಸಿದರು.
ಮಾಲೇಟಿರ ನಂಜುಅಪ್ಪಯ್ಯ ಅವರು ಮಾತನಾಡಿ, ವಿದ್ಯಾರ್ಥಿಗಳು ಅಹಂ ರೂಢಿಸಿಕೊಳ್ಳದೆ ಸೌಜನ್ಯದಿಂದ ಬದುಕುವ ಕಲೆ ಬೆಳೆಸಿಕೊಳ್ಳಬೇಕೆಂದು ಕಿವಿಮಾತು ಹೇಳಿದರು. ಇದೇ ಸಂದರ್ಭ ಕೊಡವ ದೀನಬಂಧು ದತ್ತಿ ಸಂಸ್ಥೆಯ ವಿವಿಧ ಸಮಾಜಮುಖಿ ಕಾರ್ಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲ ಮೇಜರ್ ಡಾ.ಬಿ. ರಾಘವ, ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಹೊಂದಿ, ಮತ್ತೊಬ್ಬರಿಗೂ ಉಪಕಾರಿಯಾಗುವ ಬದುಕನ್ನು ಕಟ್ಟಿಕೊಳ್ಳಬೇಕು ಎಂದರು. ನಾವು ಬೆಳೆದು ಬದುಕಲು ಇತರರೂ ಸಾಕಷ್ಟು ನೆರವಾಗಿರುತ್ತಾರೆ. ಅದೇ ರೀತಿ ನಾವು ಕೂಡ ಪರೋಪಕಾರಿಯಾಗಿ ಬದುಕಬೇಕು ಎಂದರು.
ಕಾರ್ಯಕ್ರಮದಲ್ಲಿ ‘ನಾನು ನನ್ನ ತಟ್ಟೆಯಿಂದ ಒಂದು ಅಗಲು ಅನ್ನವನ್ನೂ ಪೋಲು ಮಾಡುವುದಿಲ್ಲ’ ಎಂದು ಪ್ರತಿಜ್ಞಾ ವಿಧಿ ಸ್ವೀಕರಿಸಲಾಯಿತು.
ಹಿಂದಿ ವಿಭಾಗದ ಪ್ರಾದ್ಯಾಪಕರಾದ ಡಾ.ಶ್ರೀಧರ ಹೆಗಡೆ ಅವರು ವಂದಿಸಿದರು. ಸಂಸ್ಥೆಯ ಪದಾಧಿಕಾರಿಗಳಾದ ಚೆಂದ್ರಿಮಾಡ ಜಿ.ಮಾದಪ್ಪ, ಚೆಂಬoಡ ಜಿ.ಸೋಮಣ್ಣ ಅವರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂಧಿಗಳು ಭಾಗವಹಿಸಿದ್ದರು.