Advertisement
3:59 AM Friday 8-December 2023

ಕರಿಕೆ-ಭಾಗಮಂಡಲ ರಸ್ತೆಗಿಲ್ಲ ಅಭಿವೃದ್ಧಿ ಭಾಗ್ಯ : ಪ್ರತಿಭಟನೆಯ ಎಚ್ಚರಿಕೆ

07/02/2023

ಮಡಿಕೇರಿ ಫೆ.7 : ಕರಿಕೆ- ಭಾಗಮಂಡಲ ರಸ್ತೆಯನ್ನು ತಕ್ಷಣ ಅಭಿವೃದ್ಧಿ ಪಡಿಸಬೇಕು ಮತ್ತು ಮಳೆಗಾಲದಲ್ಲಿ ಬಿದ್ದಿರುವ ಮಣ್ಣಿನ ರಾಶಿಯನ್ನು ತೆರವುಗೊಳಿಸಿ ವಾಹನಗಳ ಸಂಚಾರಕ್ಕೆ ಅನುಕೂಲ ಕಲ್ಪಿಸಿಕೊಡಬೇಕೆಂದು ಒತ್ತಾಯಿಸಿ ಕಾಂಗ್ರೆಸ್ ಪಕ್ಷದ ಪ್ರಮುಖರು ಜಿಲ್ಲಾಧಿಕಾರಿ ಹಾಗೂ ಲೋಕೋಪಯೋಗಿ ಇಲಾಖೆ ಅಭಿಯಂತರರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ಮುಂದಿನ 15 ದಿನಗಳೊಳಗೆ ರಸ್ತೆ ಅಭಿವೃದ್ಧಿಗೆ ಚಾಲನೆ ನೀಡದಿದ್ದಲ್ಲಿ ಕರಿಕೆ ಗ್ರಾಮಸ್ಥರ ಸಹಕಾರದೊಂದಿಗೆ ಕಾಂಗ್ರೆಸ್ ಪಕ್ಷ ಪ್ರತಿಭಟನೆ ನಡೆಸಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಮನವಿ ಸಲ್ಲಿಸಿ ಮಾತನಾಡಿದ ಕರಿಕೆ ಗ್ರಾ.ಪಂ ಉಪಾಧ್ಯಕ್ಷ ಎನ್.ಬಾಲಚಂದ್ರ ನಾಯರ್ ಕರಿಕೆ ಗ್ರಾಮದ ಮುಖ್ಯ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದೆ. ಕೊಡಗಿನ ಗಡಿಭಾಗದ ರಸ್ತೆಯ ಅಭಿವೃದ್ಧಿಯನ್ನೇ ಸರ್ಕಾರ ಮರೆತಿದೆ ಎಂದು ಆರೋಪಿಸಿದರು.
ಕರಿಕೆ ಗ್ರಾಮವು ಜಿಲ್ಲಾ ಕೇಂದ್ರವಾದ ಮಡಿಕೇರಿಯಿಂದ ಕೇವಲ 68 ಕಿ.ಮೀ. ದೂರದಲ್ಲಿದೆ. ನೆರೆಯ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಗೆ ಹೊಂದಿಕೊಂಡಿದೆ. ಪುಣ್ಯಕ್ಷೇತ್ರಗಳಾದ ತಲಕಾವೇರಿ ಮತ್ತು ಎಮ್ಮೆಮಾಡುವಿಗೆ ತೆರಳಲು ಇದೇ ರಸ್ತೆಯನ್ನು ಅವಲಂಬಿಸಬೇಕಾಗಿದೆ. ಅಂತರ ರಾಜ್ಯ ವ್ಯಾಪಾರ, ವಹಿವಾಟು, ಸರಕು ಸಾಗಾಣಿಕೆಗೂ ಇದು ಸಹಕಾರಿಯಾಗಿದೆ. ಆದರೆ ಸಾವಿರಾರು ವಾಹನಗಳು ಸಂಚರಿಸುವ ಈ ರಸ್ತೆಯನ್ನು ಅಭಿವೃದ್ಧಿ ಪಡಿಸದೆ ಕಡೆಗಣಿಸಲಾಗಿದೆ. ವಾಹನ ಚಾಲಕರು ಮಾತ್ರವಲ್ಲದೆ ಪಾದಾಚಾರಿಗಳು ಕೂಡ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಗ್ರಾಮಸ್ಥರು ಜಿಲ್ಲಾಧಿಕಾರಿಗಳ ಕಚೇರಿ ಹಾಗೂ ಲೋಕೋಪಯೋಗಿ ಇಲಾಖೆ ಎದುರು ಪ್ರತಿಭಟನೆ ನಡೆಸಲು ಸಜ್ಜಾಗಿದ್ದಾರೆ ಎಂದರು.

ಕೆಪಿಸಿಸಿ ಸದಸ್ಯ ಬಿ.ಎಸ್.ರಮಾನಾಥ್ ಮಾತನಾಡಿ ಪಂಚಾಯಿತಿ ವ್ಯಾಪ್ತಿಯ ಸುಮಾರು 10 ಕಿ.ಮೀ ನಷ್ಟು ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದೆ. ಇದರಿಂದ ಗ್ರಾಮಸ್ಥರ ನಿತ್ಯ ಸಂಚಾರಕ್ಕೆ ತೊಂದರೆಯಾಗಿದೆ. ಶಾಲಾ ಮಕ್ಕಳು ಹಾಗೂ ನಿತ್ಯ ಕೆಲಸಕ್ಕೆ ಹೋಗುವ ಕೂಲಿ ಕಾರ್ಮಿಕರು ಗುಂಡಿ ಬಿದ್ದ ರಸ್ತೆಯ ಮೂಲಕವೇ ಕಷ್ಟಪಟ್ಟು ತೆರಳಬೇಕಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕಳೆದ ಮಳೆಗಾಲದಲ್ಲಿ ರಸ್ತೆಯ ಬದಿಯಲ್ಲಿ ಬಿದ್ದಿದ್ದ ಮಣ್ಣಿನ ರಾಶಿಯನ್ನು ಇಲ್ಲಿಯವರೆಗೆ ತೆರವುಗೊಳಿಸಿಲ್ಲ. ಇದರಿಂದ ವಾಹನಗಳ ಸಂಚಾರಕ್ಕೆ ಅಡಚಣೆಯಾಗಿದೆ. ರಸ್ತೆಯ ಅಭಿವೃದ್ಧಿಯನ್ನು ಆಡಳಿತ ವ್ಯವಸ್ಥೆ ಸಂಪೂರ್ಣವಾಗಿ ನಿರ್ಲಕ್ಷಿಸಿರುವುದರಿಂದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳನ್ನು ಎಚ್ಚರಿಸಲು ಪ್ರತಿಭಟನೆ ನಡೆಸುವುದು ಅನಿವಾರ್ಯವಾಗಿದೆ ಎಂದರು.
ಕರಿಕೆ ವಲಯ ಕಾಂಗ್ರೆಸ್ ಅಧ್ಯಕ್ಷ ಬಿ.ಡಿ.ದೇವರಾಜ್ ಮಾತನಾಡಿ ನೆರೆಯ ಕೇರಳ ರಾಜ್ಯದಲ್ಲಿ ಉತ್ತಮ ರಸ್ತೆಗಳನ್ನು ಅಲ್ಲಿನ ಸರ್ಕಾರ ನಿರ್ಮಿಸಿದೆ. ಆದರೆ ಕರ್ನಾಟಕ ರಾಜ್ಯ ಸರ್ಕಾರ ಮಾತ್ರ ರಸ್ತೆ ಅಭಿವೃದ್ಧಿ ಮಾಡದೆ ಕೊಡಗು ಜಿಲ್ಲೆ ಹಾಗೂ ರಾಜ್ಯಕ್ಕೂ ಕಳಂಕ ತಂದಿದೆ. 2004 ರಿಂದ ಕರಿಕೆ-ಭಾಗಮಂಡಲ ರಸ್ತೆಯ ವಿಸ್ತರಣೆ ಕಾರ್ಯವೇ ನಡೆದಿಲ್ಲ. ರಸ್ತೆ ಮಾತ್ರವಲ್ಲದೆ ಸರ್ಕಾರದ ಮೂಲಭೂತ ಸೌಲಭ್ಯದ ಕೊರತೆಯಿಂದಲೂ ಕರಿಕೆ ಜನರು ಪರದಾಡುತ್ತಿದ್ದಾರೆ. ಸಾಕಷ್ಟು ಬಾರಿ ಜಿಲ್ಲೆಯ ಶಾಸಕರಿಗೆ, ಸಂಸದರಿಗೆ ಸಮಸ್ಯೆಗಳ ಬಗ್ಗೆ ತಿಳಿಸಲಾಗಿದೆ. ಆದರೆ ಯಾವುದೇ ಸ್ಪಂದನೆ ದೊರೆತ್ತಿಲ್ಲ ಎಂದು ಟೀಕಿಸಿದರು.
::: ರಾಷ್ಟ್ರೀಯ ಹೆದ್ದಾರಿ ಕನಸು :::
2017 ರಲ್ಲಿ ಕೇರಳದ ಕಾಂಞ್ಞಂಗಾಡುವಿನಿಂದ ಮಡಿಕೇರಿಯ ಕಾಟಕೇರಿ ತನಕ 110 ಕಿ.ಮೀ. ರಸ್ತೆಯನ್ನು ಅಭಿವೃದ್ಧಿ ಪಡಿಸಲು ರಾಷ್ಟ್ರೀಯ ರಸ್ತೆ ಅಭಿವೃದ್ಧಿ ನಿಗಮದಿಂದ ಸರ್ವೆಗೆ ಆದೇಶ ನೀಡಲಾಗಿತ್ತು. ಈ ಬಗ್ಗೆ ಕೇರಳ ರಾಜ್ಯದ ಗಡಿ ಭಾಗದವರೆಗೆ ಸರ್ವೆಯಾಗಿದೆ, ಆದರೆ ಕರ್ನಾಟಕದಲ್ಲಿ ಸರ್ವೆ ಕಾರ್ಯ ನಡೆದಿಲ್ಲ. ರಾಷ್ಟ್ರೀಯ ಹೆದ್ದಾರಿ ಎನ್ನುವುದು ಕನಸಾಗಿಯೇ ಉಳಿದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.