Advertisement
11:09 AM Monday 4-December 2023

ಬಾಕ್ಸಿಂಗ್ ಮುಖ್ಯ ಕೋಚ್ ಆಗಿ ಕೊಡಗಿನ ಸಿ.ಎ.ಕುಟ್ಟಪ್ಪ ಮರು ನೇಮಕ

10/02/2023

ಮಡಿಕೇರಿ ಫೆ.10 : ಭಾರತ ಬಾಕ್ಸಿಂಗ್ ತಂಡದ ಮುಖ್ಯ ಕೋಚ್ ಆಗಿ ಕೊಡಗಿನವರಾದ ಚೇನಂಡ ಎ.ವಿಶು ಕುಟ್ಟಪ್ಪ ಅವರು ಮತ್ತೊಮ್ಮೆ ನೇಮಕಗೊಂಡಿದ್ದಾರೆ.
ಪ್ರತಿಷ್ಠಿತವಾದ ದ್ರೋಣಾಚಾರ್ಯ ಪ್ರಶಸ್ತಿ ವಿಜೇತರೂ ಆಗಿರುವ ಕುಟ್ಟಪ್ಪ ಅವರು ಭಾರತೀಯ ಬಾಕ್ಸಿಂಗ್ ತಂಡದ ಈ ಮಹತ್ವದ ಜವಾಬ್ದಾರಿಗೆ ಎರಡನೇ ಬಾರಿಗೆ ನಿಯುಕ್ತಿಗೊಂಡಿದ್ದು, ಬಾಕ್ಸಿಂಗ್ ಫೆಡರೇಷನ್ ಆಫ್ ಇಂಡಿಯಾ (ಬಿಎಫ್‍ಐ) ಇದನ್ನು ಪ್ರಕಟಿಸಿದೆ.
ಈ ಹಿಂದೆ ಕುಟ್ಟಪ್ಪ ಅವರು 2018 ರಿಂದ 2021ರ ವರೆಗೆ ರಾಷ್ಟ್ರೀಯ ಬಾಕ್ಸಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು. 2021ರ ಟೋಕಿಯೋ ಒಲಂಪಿಕ್ಸ್ ನಂತರ ಇವರು ಈ ಸ್ಥಾನದಿಂದ ಹೊರಗಿಳಿದಿದ್ದರು. ಇದೀಗ ಹೈಪರ್ ಫಾರ್ಮೆನ್ಸ್ ಡೈರೆಕ್ಟರ್ ಬೆರ್ನಾಡ್‍ಡುನ್ ಸಲಹೆಯ ಆಧಾರದಲ್ಲಿ ಭಾರತೀಯ ಬಾಕ್ಸಿಂಗ್ ಒಕ್ಕೂಟ (ಬಿ.ಎಫ್.ಐ) ಈ ನಿರ್ಧಾರವನ್ನು ತೆಗೆದುಕೊಂಡಿದ್ದು, ಕುಟ್ಟಪ್ಪ ಅವರು ಮರಳಿ ಬಂದಿದ್ದಾರೆ.
ಪ್ರಸ್ತುತ ಕೋಚ್ ಆಗಿದ್ದ ನರೇಂದರ್ ರಾಣಾ ಅವರಿಂದ ಕುಟ್ಟಪ್ಪ ಅವರು ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಮುಂಬರುವ ವಿಶ್ವ ಚಾಂಪಿಯನ್‍ಶಿಪ್, ಏಷ್ಯನ್ ಗೇಮ್ಸ್ ಸೇರಿದಂತೆ 2024ರ ಪ್ಯಾರಿಸ್ ಒಲಂಪಿಕ್ಸ್ ತನಕವೂ ಕುಟ್ಟಪ್ಪ ಅವರು ಈ ಸ್ಥಾನದಲ್ಲಿ ಮುಂದುವರಿಯಲಿದ್ದಾರೆ.
ಭಾರತೀಯ ಸೇನೆಯಲ್ಲಿ ಕರ್ತವ್ಯದಲ್ಲಿರುವ ಇವರು ಪೂನಾದ ಆರ್ಮಿ ಇನ್ಸಟಿಟ್ಯೂಟ್‍ನಲ್ಲಿದ್ದಾರೆ. ಮೂಲತಃ ಜಿಲ್ಲೆಯ ಕೋಕೇರಿ ಗ್ರಾಮದವರಾದ ಇವರು ಚೇನಂಡ ದಿ.ಅಚ್ಚಯ್ಯ ಹಾಗೂ ಶಾಂತಿ (ತಾಮನೆ : ಕಾಟಿಮಾಡ) ದಂಪತಿ ಪುತ್ರ. ಸ್ವತಃ ಬಾಕ್ಸಿಂಗ್ ಪಟು ಹಾಗೂ ತರಬೇತುದಾರರಾಗಿರುವ ಕುಟ್ಟಪ್ಪ ಅವರು ಕ್ರೀಡಾ ತರಬೇತಿಗಾಗಿ ಪ್ರತಿಷ್ಠಿತ ದ್ರೋಣಾಚಾರ್ಯ ಬಿರುದು ಪಡೆದಿರುವ ಕೊಡಗಿನ ಏಕೈಕ ವ್ಯಕ್ತಿಯಾಗಿದ್ದಾರೆ.