ದಕ್ಷಿಣ ಕೊಡಗಿನಲ್ಲಿ ಮತ್ತೆ ಹುಲಿ ಪ್ರತ್ಯಕ್ಷ : ಕಿರುಗೂರು ಗ್ರಾಮ ವ್ಯಾಪ್ತಿಯಲ್ಲಿ ಆತಂಕ

ಮಡಿಕೇರಿ ಫೆ.22 : ದಕ್ಷಿಣ ಕೊಡಗಿನ ಕಾಫಿ ತೋಟವೊಂದರಲ್ಲಿ ಹುಲಿ ಪ್ರತ್ಯಕ್ಷವಾಗಿದ್ದು, ಮತ್ತೆ ಗ್ರಾಮಸ್ಥರಲ್ಲಿ ಆತಂಕ ಮೂಡಿದೆ. ಪೊನ್ನಂಪೇಟೆ ತಾಲ್ಲೂಕಿನ ಕಿರುಗೂರು ಮುಖ್ಯ ರಸ್ತೆಯ ಶಾಲೆಯ ಸಮೀಪವಿರುವ ಕೊರಕುಟ್ಟಿರ ರಾಜಪ್ಪ ಎಂಬುವವರ ತೋಟದಲ್ಲಿ ಸಂಜೆ 5 ಸುಮಾರಿಗೆ ಹುಲಿ ಕಂಡು ಬಂದಿದೆ.
ರಾಜಪ್ಪ ಅವರ ಪುತ್ರ ಸವಿ ದೇವಯ್ಯ ತೋಟದಿಂದ ತೆರಳುತ್ತಿದ್ದ ಸಂದರ್ಭ ದೂರದಲ್ಲಿ ಹುಲಿ ಇರುವುದು ಗೋಚರಿಸಿದೆ. ಈ ಕುರಿತು ಅವರು ಪೊನ್ನಂಪೇಟೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ ಮೇರೆಗೆ ಸ್ಥಳಕ್ಕಾಗಮಿಸಿದ ಪೊಲೀಸರು ಮತ್ತು ಅರಣ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗಳು ಹುಲಿ ಕಂಡು ಬಂದ ಸ್ಥಳದಲ್ಲಿ ಪರಿಶೀಲನೆ ನಡೆಸಿದರು. ಶಸ್ತ್ರ ಸಜ್ಜಿತ ಅರಣ್ಯ ಸಿಬ್ಬಂದಿಗಳ ಒಂದು ತಂಡ ಸ್ಥಳದಲ್ಲೇ ಬೀಡು ಬಿಟ್ಟಿದ್ದು, ಸಾರ್ವಜನಿಕರು ಎಚ್ಚರಿಕೆಯಿಂದ ಇರುವಂತೆ ಮನವಿ ಮಾಡಿದ್ದಾರೆ.
ಕೆಲವು ದಿನಗಳ ಹಿಂದೆ ಕುಟ್ಟ ಕೆ.ಬಾಡಗ ಚೂರಿಕಾಡು ವ್ಯಾಪ್ತಿಯಲ್ಲಿ ಹುಲಿ ದಾಳಿಗೆ ಸಿಲುಕಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಕೂಂಬಿoಗ್ ನಡೆಸಿದ ಅರಣ್ಯ ಇಲಾಖೆ ಒಂದು ಹೆಣ್ಣು ಹುಲಿಯನ್ನು ಸೆರೆ ಹಿಡಿದಿದ್ದರು.
ಈ ಭಾಗದಲ್ಲಿ ಸಂಚರಿಸುತ್ತಿರುವ ಪ್ರತ್ಯೇಕ 2 ಹುಲಿಗಳ ಸೆರೆಗೂ 4 ದಿನಗಳ ಕಾಲ ಕೂಂಬಿAಗ್ ನಡೆಸಲಾಗಿತ್ತು. ಆದರೆ ಯಾವುದೇ ಹುಲಿಗಳು ಪತ್ತೆಯಾಗದ ಕಾರಣ ಎಲ್ಲಾ ಹುಲಿಗಳು ಕಾಡಿಗೆ ಮರಳಿವೆ ಎಂದು ಭಾವಿಸಿ ಕೂಂಬಿAಗ್ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿತ್ತು. ಇದೀಗ ಮತ್ತೆ ಹುಲಿ ಕಾಣಿಸಿಕೊಂಡಿತ್ತು, ಗ್ರಾಮಸ್ಥರಲ್ಲಿ ಆತಂಕ ಮೂಡಿದೆ.
ಹುಲಿ ಇರುವ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದು, ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಸ್ಥಳದಲ್ಲಿ ಸಿ.ಸಿ ಕ್ಯಾಮರಾಗಳನ್ನು ಅಳವಡಿಸಲಾಗುತ್ತಿದೆ ಎಂದು ಪೊನ್ನಂಪೇಟೆ ಆರ್‌ಎಫ್‌ಓ ಶಂಕರ್ ತಿಳಿಸಿದ್ದಾರೆ.
