Advertisement
3:55 AM Friday 8-December 2023

ಅನಾಹುತಗಳು ಸಂಭವಿಸಿದರೆ ಅರಣ್ಯ ಇಲಾಖೆಯೇ ನೇರ ಹೊಣೆ : ಹುಲಿಗಳ ಮಾಹಿತಿ ಬಹಿರಂಗ ಪಡಿಸಲು ಒತ್ತಾಯ

23/02/2023

ಮಡಿಕೇರಿ ಫೆ.23 : ದಕ್ಷಿಣ ಕೊಡಗು ಭಾಗದಲ್ಲಿ ಹುಲಿ ಉಪಟಳ ಮಿತಿ ಮೀರಿದ್ದು, ಅರಣ್ಯ ಇಲಾಖೆ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿಲ್ಲವೆಂದು ಆರೋಪಿಸಿರುವ ಕಿರುಗೂರು ಗ್ರಾ.ಪಂ ಸದಸ್ಯ ಚೆಪ್ಪುಡಿರ ರಾಕೇಶ್ ದೇವಯ್ಯ, ಅನಾಹುತಗಳು ಸಂಭವಿಸಿದರೆ ಅರಣ್ಯ ಅಧಿಕಾರಿಗಳೇ ನೇರ ಹೊಣೆಗಾರರಾಗುತ್ತಾರೆ ಎಂದು ಎಚ್ಚರಿಕೆ ನೀಡಿದ್ದಾರೆ.
ಪೊನ್ನಂಪೇಟೆ ತಾಲ್ಲೂಕಿನ ಕಿರುಗೂರು ವ್ಯಾಪ್ತಿಯ ತೋಟವೊಂದರಲ್ಲಿ ಹುಲಿ ಕಾಣಿಸಿಕೊಂಡ ಪ್ರದೇಶಕ್ಕೆ ಭೇಟಿ ನೀಡಿದ್ದ ಅವರು ಅರಣ್ಯ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಕಣ್ಣ ಮುಂದೆ ಹುಲಿ ಇದ್ದರೂ ಅರಣ್ಯ ಇಲಾಖೆ ಸೆರೆ ಹಿಡಿಯುವ ತುರ್ತು ಕ್ರಮ ಕೈಗೊಂಡಿಲ್ಲ. ಹಿರಿಯ ಅಧಿಕಾರಿಗಳ ಅನುಮತಿ ಬೇಕು ಎಂದು ಕೈಚೆಲ್ಲಿ ಕುಳಿತ್ತಿದ್ದಾರೆ. ಅನುಮತಿ ದೊರೆಯುವ ವೇಳೆಗೆ ಜೀವಹಾನಿಯಾದರೆ ಯಾರು ಹೊಣೆ ಎಂದು ಪ್ರಶ್ನಿಸಿದರು.
ಇತ್ತೀಚೆಗೆ ಪೊನ್ನಂಪೇಟೆ ತಾಲ್ಲೂಕಿನ ಕೆ.ಬಾಡಗ ವ್ಯಾಪ್ತಿಯ ನಾಣಚ್ಚಿ ಗೇಟ್ ಬಳಿ ಹುಲಿಯೊಂದನ್ನು ಸೆರೆ ಹಿಡಿಯಲಾಗಿದೆ. ಸೆರೆಯಾದ ಹುಲಿಯನ್ನು ಕೆ.ಬಾಡಗ ಗ್ರಾಮದ ಚೂರಿಕಾಡು ವ್ಯಾಪ್ತಿಯಲ್ಲಿ ಯುವಕ ಹಾಗೂ ವೃದ್ಧನ ಜೀವವನ್ನು ಬಲಿ ಪಡೆದ ಹುಲಿ ಎಂದು ಪ್ರತಿಬಿಂಬಿಸಲಾಗಿತ್ತು. ಆದರೆ ಇದೇ ಹುಲಿ ಮಾನವ ಜೀವವನ್ನು ತೆಗೆದಿದೆ ಎನ್ನುವ ಬಗ್ಗೆ ನಿಖರ ಮಾಹಿತಿಯನ್ನು ಅರಣ್ಯ ಇಲಾಖೆ ಬಹಿರಂಗ ಪಡಿಸಿಲ್ಲ, ಅಲ್ಲದೆ ಸ್ಪಷ್ಟವಾಗಿ ಎಲ್ಲೂ ಹೇಳಿಲ್ಲ.
ಈ ನಡುವೆ ಮಂಗಳವಾರ ಕಿರುಗೂರು ವ್ಯಾಪ್ತಿಯ ತೋಟದಲ್ಲಿ ಹುಲಿ ರಾಜಾರೋಷವಾಗಿ ಓಡಾಡುತ್ತಿರುವುದು ಕಂಡು ಬಂದಿದ್ದು, ಆತಂಕ ಎದುರಾಗಿದೆ. ಒಂದು ಹಸುವನ್ನು ಕೂಡ ಈ ಹುಲಿ ಬಲಿ ಪಡೆದಿದೆ.  ಜನರ ಜೀವ ರಕ್ಷಣೆಯ ಹೊಣೆ ಅರಣ್ಯ ಅಧಿಕಾರಿಗಳ ಮೇಲಿದೆ. ಹುಲಿಗಳ ಸಂರಕ್ಷಣೆಯಾಗಬೇಕೆನ್ನುವ ಅಭಿಲಾಷೆ ನಮಗೂ ಇದೆ, ಇದಕ್ಕೆ ನಮ್ಮ ಸಂಪೂರ್ಣ ಸಹಕಾರವಿದೆ. ಆದರೆ ಮಾನವನ ಜೀವಬಲಿಯಾದರೆ ಅದಕ್ಕೆ ಬೆಲೆ ಇಲ್ಲವೇ, ಪರಿಹಾರ ಧನ ನೀಡಿದರೆ ಜೀವ ಮತ್ತೆ ಮರಳಿ ಬರುವುದೇ ಎಂದು ಪ್ರಶ್ನಿಸಿದರು.
ಕೊಡಗಿನ ಜನವಾಸದ ಯಾವ ಪ್ರದೇಶಗಳಲ್ಲಿ, ಎಷ್ಟು ಹುಲಿಗಳು ಬಂದು ಸೇರಿಕೊಂಡಿವೆ, ಗಾಯಗೊಂಡು ಬೇಟೆಯಾಡಲು ಸಾಧ್ಯವಾಗದೆ ಮನುಷ್ಯರ ಮೇಲೆ ದಾಳಿ ಮಾಡುತ್ತಿರುವ ಹುಲಿಗಳೆಷ್ಟು, ಕೊಡಗಿನಲ್ಲಿರುವ ಹುಲಿಗಳಿಗೆ ರೇಡಿಯೋ ಕಾಲರ್ ಅಳವಡಿಸಿ ಅಧ್ಯಯನ ನಡೆಸಲಾಗಿದೆಯೇ, ಕೆ.ಬಾಡಗ ಗ್ರಾಮದಲ್ಲಿ ಇಬ್ಬರನ್ನು ಬಲಿ ಪಡೆದ ಹುಲಿ ಸೆರೆಯಾಗಿದೆಯೇ, ಕಿರುಗೂರು ಗ್ರಾಮದಲ್ಲಿ ಕಂಡು ಬಂದಿರುವ ಹುಲಿಯನ್ನು ಎಷ್ಟು ದಿನಗಳಲ್ಲಿ ಸೆರೆ ಹಿಡಿಯಲಾಗುವುದು ಎಂಬ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರವನ್ನು ಅರಣ್ಯ ಅಧಿಕಾರಿಗಳು ಜನರೆದುರು ಬಹಿರಂಗಪಡಿಸಬೇಕೆಂದು ರಾಕೇಶ್ ದೇವಯ್ಯ ಒತ್ತಾಯಿಸಿದರು.