ಸಿನಿಮಾ ರಂಗದಲ್ಲೊಬ್ಬ ಕೊಡಗಿನ ಯುವ ನಿರ್ದೇಶಕ : ಬಿಡುಗಡೆಗೆ ಸಿದ್ಧವಾಗಿದೆ ನಾಕುಮುಖ

ಮಡಿಕೇರಿ ಫೆ.24 : ಕನ್ನಡ ಚಲನಚಿತ್ರರಂಗದಲ್ಲಿ ಕೊಡಗಿನ ಸಾಕಷ್ಟು ಪ್ರತಿಭೆಗಳು ಗುರುತಿಸಿಕೊಂಡಿವೆ. ಕನ್ನಡವಲ್ಲದೆ ಇತರ ಭಾಷೆಯ ಚಿತ್ರಗಳಲ್ಲೂ ಕೊಡಗಿನ ಕಲಾವಿದರು ತಮ್ಮ ಛಾಪು ಮೂಡಿಸಿದ್ದಾರೆ. ಇದೀಗ ಕೊಡಗಿನ ಯುವಕನೋರ್ವ ಸಿನಿಮಾ ನಿರ್ದೇಶಕನಾಗಿ ಗುರುತಿಸಿಕೊಂಡಿದ್ದು, ಆತ ನಟಿಸಿ ನಿರ್ದೇಶಿಸಿರುವ ನಾಕುಮುಖ ಎಂಬ ಕನ್ನಡ ಚಲನಚಿತ್ರ ಬಿಡುಗಡೆಗೆ ಸಿದ್ಧವಾಗಿದೆ.
ಮೂರ್ನಾಡು ಐಕೋಳ ಗ್ರಾಮದ ಎಂ.ಎಂ. ಗೋಪಾಲ್, ಎಂ.ಜಿ. ಶೀಲಾವತಿ ದಂಪತಿಯ ಪುತ್ರನಾದ ಕುಶಾನ್ ಗೌಡ ಕಥೆ, ಸಾಹಿತ್ಯ ಬರೆದು ನಾಕುಮುಖ ಎಂಬ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಹಾರರ್ ಸಸ್ಪೆನ್ಸ್, ಥ್ರಿಲ್ಲರ್ ಅಂಶಗಳನ್ನು ಒಳಗೊಂಡಿರುವ ಈ ಚಿತ್ರದ ನಿರ್ಮಾಪಕರೂ ಕೂಡ ಕೊಡಗಿನವರೇ ಆಗಿದ್ದಾರೆ. ಸಿದ್ದಾಪುರ ಕರಡಿಗೋಡಿನ ಎಂ.ಎಸ್. ರಾಘವಯ್ಯ, ಎಂ.ಆರ್. ಲಲಿತಾ ದಂಪತಿಯ ಪುತ್ರ ದರ್ಶನ್ ರಾಘವಯ್ಯ ಈ ಚಿತ್ರದ ನಿರ್ಮಾಪಕರಾಗಿದ್ದು, ಸುಮಾರು 80 ಲಕ್ಷ ವೆಚ್ಚದಲ್ಲಿ ಚಿತ್ರವನ್ನು ನಿರ್ಮಾಣ ಮಾಡಲಾಗಿದೆ. ನಿಗೂಢವಾಗಿ ನಡೆಯುವ ಒಂದು ಕೊಲೆಯನ್ನು ಭೇದಿಸಲು ಓರ್ವ ಪತ್ರಕರ್ತ ಹಾಗೂ ಪೊಲೀಸ್ ಅಧಿಕಾರಿ ಪ್ರಯತ್ನಿಸುತ್ತಾರೆ. ಆಗ ಏನೆಲ್ಲಾ ಘಟನೆಗಳು ಎದುರಾಗಲಿದೆ ಎಂಬುದೇ ಚಿತ್ರದ ಸಾರಾಂಶವಾಗಿದೆ. ಪೊಲೀಸ್ ಅಧಿಕಾರಿಯಾಗಿ ದರ್ಶನ್ ರಾಘವಯ್ಯ, ಪತ್ರಕರ್ತನಾಗಿ ಕುಶಾನ್‌ಗೌಡ ನಟಿಸಿದ್ದು, ಅಮೃತ ಅಯ್ಯಂಗಾರ್ ನಾಯಕಿಯಾಗಿದ್ದಾರೆ.
ಚಿತ್ರದಲ್ಲಿ ಮೂರು ಹಾಡುಗಳಿದ್ದು, ಆರ್. ಹರಿಬಾಬು ಎಂಬವರ ಸಂಗೀತ ನಿರ್ದೇಶನದಲ್ಲಿ ಒಂದು ಹಾಡನ್ನು ಖ್ಯಾತ ಹಿನ್ನೆಲೆ ಗಾಯಕ ವಿಜಯಪ್ರಕಾಶ್ ಹಾಡಿದ್ದಾರೆ. ಈಗಾಗಲೇ ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ ‘ಎ’ ಪ್ರಮಾಣ ಪತ್ರ ಸಿಕ್ಕಿದ್ದು, ಮಾರ್ಚ್ 3 ರಂದು ಚಿತ್ರ ಕೊಡಗು ಸೇರಿದಂತೆ ರಾಜ್ಯಾದ್ಯಂತ ತೆರೆಗೆ ಬರಲಿದೆ. ಧ್ವನಿ ಸಿನಿಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಚಿತ್ರ ನಿರ್ಮಾಣ ವಾಗಿದ್ದು, ಕೆ. ರಂಗನಾಥ್ ಹಾಗೂ ಭರತ್ ಶಂಕರ್ ಸಹ ನಿರ್ಮಾಪಕರಾಗಿದ್ದಾರೆ.
ವರದಿ : – ಉಜ್ವಲ್ ರಂಜಿತ್
