Advertisement
10:34 AM Sunday 3-December 2023

ನಾಕೂರು-ಕಾನ್‍ಬೈಲ್ ಕ್ರೀಡೋತ್ಸವದ ಸಮಾರೋಪ : ಸಾಧಕರಿಗೆ ಸನ್ಮಾನ

27/02/2023

ಸುಂಟಿಕೊಪ್ಪ ಫೆ.27 : ಗ್ರಾಮೀಣ ಪ್ರತಿಭೆಗಳು ಕ್ರೀಡಾಕೂಟವನ್ನು ಸದುಪಯೋಗಪಡಿಸಿಕೊಂಡಾಗ ಮಾತ್ರ ಕಾರ್ಯಕ್ರಮದ ಯಶಸ್ವಿಗೆ ದುಡಿದವರ ಶ್ರಮ ಸಾರ್ಥವಾಗುತ್ತದೆ ಎಂದು ನಾಕೂರು ಕಾನ್‍ಬೈಲ್ ಗ್ರಾ.ಪಂ ಅಧ್ಯಕ್ಷ ಮಂದೋಡಿ ಸಿ.ಜಗನ್ನಾಥ ತಿಳಿಸಿದರು.
ನಾಕೂರು ಕಾನ್‍ಬೈಲ್ ಫ್ರೆಂಡ್ಸ್ ಯೂತ್ ಕ್ಲಬ್ ವತಿಯಿಂದ ಪ್ರಾಥಮಿಕ ಶಾಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ 23ನೇ ಕ್ರೀಡಾಕೂಟದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರಸ್ತುತ ದಿನಗಳಲ್ಲಿ ಕ್ರೀಡಾಕೂಟಗಳಿಗೆ ಹೆಚ್ಚು ಪ್ರಾಶಸ್ತ್ಯ ನೀಡಲಾಗಿದ್ದು, ಗ್ರಾಮೀಣ ಪ್ರತಿಭೆಗಳನ್ನು ಅವುಗಳನ್ನು ಸದುಪಯೋಗ ಪಡಿಸಿಕೊಂಡು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವಂತಾಗಬೇಕು ಎಂದರು.
ಕ್ರೀಡಾಪಟುಗಳಿಗೆ ಗ್ರಾ.ಪಂ ವತಿಯಿಂದ ಎಲ್ಲಾ ರೀತಿಯ ಸಹಾಯ ಮತ್ತು ಸಹಕಾರವನ್ನು ನೀಡಿದ್ದು, ಗ್ರಾ.ಪಂ ಅನುದಾನದಲ್ಲಿ ಹಂತ ಹಂತವಾಗಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದೆ. ಎಲ್ಲಿಯೂ ಕೂಡ ತಾರತಮ್ಯ ಮಾಡುವ ಪ್ರಶ್ನೆಯೇ ಇಲ್ಲ ಎಂದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ವಿ.ಪಿ.ಶಶಿಧರ್, 23 ವರ್ಷಗಳಿಂದ ಯುವಕ ಸಂಘ ಕ್ರೀಡಾಕೂಟವನ್ನು ಆಯೋಜಿಸುವ ಮೂಲಕ ಗ್ರಾಮೀಣ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುತ್ತಿರುವ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು.
ನಾಯಕತ್ವದ ಗುಣ ಸಂಘಟನೆಗೆ ಬಲ ತುಂಬುತ್ತವೆ. ಸಾಹಿತ್ಯ, ಕಲೆ, ಕ್ರೀಡೆಗಳಿಗೆ ಜಾತಿ ಮತದ ಹಂಗಿಲ್ಲ. ಮನುಷ್ಯರಲ್ಲಿ ಬಾಂಧವ್ಯ ಬೆಸೆಯುವಲ್ಲಿ ಕ್ರೀಡಾಕೂಟ ಸಹಕಾರಿ ಎಂದು ಹೇಳಿದರು.
ಫ್ರೆಂಡ್ಸ್ ಯೂತ್ ಕ್ಲಬ್ ಮತ್ತು ಗ್ರಾ.ಪಂ ಮಾಜಿ ಅಧ್ಯಕ್ಷ ಬಿ.ಜಿ.ರಮೇಶ್ ಮಾತನಾಡಿ, 23 ವರ್ಷಗಳ ಕ್ರೀಡಾಕೂಟಕ್ಕೆ ಕ್ಲಬ್ ಪದಾಧಿಕಾರಿಗಳು, ಗ್ರಾ.ಪಂ, ಊರಿನ ಹಿರಿಯ ಗಣ್ಯರು, ದಾನಿಗಳ ಸಹಕಾರವನ್ನು ಸ್ಮರಿಸಿದರು.
ಕ್ರೀಡಾಕೂಟಗಳಲ್ಲಿ ಪಾಲ್ಗೊಂಡ ಗ್ರಾಮೀಣ ಪ್ರತಿಭೆಗಳು ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದ ವಿವಿಧ ಕ್ರೀಡೆಗಳಲ್ಲಿ ಸಾಧನೆ ಮಾಡಿದ್ದಾರೆಂದು ಹೇಳಿದರು.

ಕಾರ್ಯಕ್ರವನ್ನು ಕಾನ್‍ಬೈಲ್ ತೋಟದ ಮಾಜಿ ವ್ಯವಸ್ಥಾಪಕ ಪಿ.ಜಿ.ಹೆಗ್ಡೆ ಉದ್ಘಾಟಿಸಿ, ಮಾತನಾಡಿದರು.
ಗ್ರಾ.ಪಂ ಉಪಾಧ್ಯಕ್ಷ ಸತೀಶ್, ಕಾಫಿ ಬೆಳೆಗಾರರಾದ ಸುಜಯ್, ಎ.ಆರ್.ಪಾಪ್ಪಣ, ಜಿ.ಬಿ.ರಾಮಯ್ಯ, ಧರ್ಮಪ್ಪ, ಸದಸ್ಯರುಗಳಾದ ಸೀತೆ, ಅರುಣಾಕುಮಾರಿ, ಪ್ರೇಮ, ರಾಧಮಣಿ, ಹಾರಂಗಿ ಕಾವೇರಿ ಮೀನುಗಾರರ ಸಂಘ ಅಧ್ಯಕ್ಷ ಮಹಮ್ಮದ್, ಫ್ರೆಂಡ್ಸ್ ಯೂತ್ ಕ್ಲಬ್ ಅಧ್ಯಕ್ಷ ಅಂಬೆಕಲ್ ಚಂದ್ರಶೇಖರ್, ಗೌರವಧ್ಯಕ್ಷ ಕುಂಞಕೃಷ್ಣ, ಕಾರ್ಯದರ್ಶಿ ಶಂಕರ ನಾರಾಯಣ, ವಿನೋದ್, ವಸಂತ ಮತ್ತಿತರರುಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ ಶಾಲಾ ನಿವೃತ್ತ ಶಿಕ್ಷಕ ಚಂದ್ರಶೇಖರ್, ದಮಯಂತಿ, ಪ್ರೌಢಶಾಲಾ ಶಿಕ್ಷಕಿ ಮಲಾಮೂರ್ತಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಬ್ಬಡ್ಡಿ, ಥ್ರೋಬಾಲ್, ಹಗ್ಗ ಜಗ್ಗಾಟ, ರಸ್ತೆ ಓಟ, ಮಕ್ಕಳಿಗೆ ಕಾಳು ಹೆಕ್ಕುವುದು, ಕಪ್ಪೆ ಜಿಗಿತ, ಗೋಣಿಚೀಲ ಓಟ ಸೇರಿದಂತೆ ವಿವಿಧ ಗ್ರಾಮೀಣ ಕ್ರೀಡೆಗಳಲ್ಲಿ ಗ್ರಾಮಸ್ಥರು ಪಾಲ್ಗೊಂಡಿದ್ದರು.