Advertisement
3:47 AM Friday 8-December 2023

ಕಾಡಾನೆಗಳ ದಾಂಧಲೆ : ಬೆಳೆಗಾರರ ಅಸಮಾಧಾನ

27/02/2023

ಸೋಮವಾರಪೇಟೆ ಫೆ.27 : ಸೋಮವಾರಪೇಟೆ ತಾಲ್ಲೂಕಿನ ಯಡವಾರೆ ಗ್ರಾಮದಲ್ಲಿ ಕಾಡಾನೆಗಳ ಹಿಂಡು ಕಾಫಿ ತೋಟಕ್ಕೆ ನುಗ್ಗಿ ದಾಂಧಲೆ ಮಾಡುತ್ತಿದೆ ಎಂದು ಮಚ್ಚಂಡ ಅಶೋಕ್ ಅರಣ್ಯ ಇಲಾಖೆಗೆ ದೂರು ನೀಡಿದ್ದಾರೆ.
ಅಶೋಕ್ ಅವರ ಕಾಫಿ ತೋಟದಲ್ಲಿ ಕಾರ್ಮಿಕರು ಕಾಫಿ ಕೂಯ್ಲು ಮಾಡುತ್ತಿರುವ ಸಂದರ್ಭದಲ್ಲಿಯೇ ಕಾಡಾನೆಗಳು ಕಾಣಿಸಿಕೊಂಡಿದ್ದು, ಭಯಭೀತರಾದ ಕಾರ್ಮಿಕರು ಧಿಕ್ಕಾಪಾಲಾಗಿ ಓಡಿ ಪ್ರಾಣ ಉಳಿಸಿಕೊಂಡ ಘಟನೆ ನಡೆದಿದೆ.
ಶನಿವಾರ ಸಂಜೆ ಕಾಡಾನೆಗಳ ಹಿಂಡು ಕಾಫಿತೋಟಕ್ಕೆ ಲಗ್ಗೆ ಇಟ್ಟಿವೆ. ಇಲಾಖೆಗೆ ವಿಷಯ ತಿಳಿಸಿದ ಮೇರೆಗೆ ಸ್ಥಳಕ್ಕೆ ಆಗಮಿಸಿದ ಆನೆ ಕಾರ್ಯಚರಣೆ ಪಡೆ ಸಿಬ್ಬಂದಿಗಳು ಪಟಾಕಿಯನ್ನು ಸಿಡಿಸಿ ಕಾಡಾನೆಗಳನ್ನು ಕಾಡಿಗಟ್ಟಲು ಶ್ರಮಿಸಿದ್ದಾರೆ. ಈ ಸಂದರ್ಭ ಕಾಫಿ ತೋಟದ ಮಾಲೀಕರು, ತೋಟದಲ್ಲಿದ್ದ ಕಾಫಿಯನ್ನು ಸಾಗಿಸಲಾಗದೆ ಬೆಳಗ್ಗೆ ಬಂದು ನೋಡಿದಾಗ ಕಾಡಾನೆಗಳ ಹಿಂಡು ಸುಮಾರು 15 ಕಾಫಿ ಗಿಡ ಮುರಿದು, ಸುಮಾರು 50 ಚೀಲದಷ್ಟು ಕಾಫಿ ಮೂಟೆಗಳನ್ನು ಎಸೆದು ನಾಶಪಡಿಸಿವೆ.
ಇದರಿಂದ ತೋಟದ ಮಾಲೀಕರಿಗೆ ಸುಮಾರು 70 ಸಾವಿರ ರೂಪಾಯಿಗಳ ನಷ್ಟ ಸಂಭವಿಸಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳಾದ ಡಿಆರ್‌ಎಫ್‌ಒ ಜಗದೀಶ್ ಮತ್ತು ಸಿಬ್ಬಂದಿಗಳು ಭೇಟಿ ನೀಡಿ ಸ್ಥಳ ಪರಿಶೀಲಿಸಿದ್ದಾರೆ.
ರೈತ ಸಂಘದ ಸೋಮವಾರಪೇಟೆ ತಾಲೂಕು ಸಂಚಾಲಕರಾದ ಗರಗಂದೂರು ಲಕ್ಷ್ಮಣ್, ರೈತ ಸಂಘದ ಮುಖಂಡರಾದ ಅಡಿಕೇರಿ ಸುಬ್ಬಯ್ಯ, ಅಶೋಕ್ ಅವರುಗಳು ಕಾಡಾನೆಗಳ ಹಾವಳಿಯಿಂದ ರೈತರಿಗೆ ಆಗುತ್ತಿರುವ ನಷ್ಟದ ಬಗ್ಗೆ ಅಧಿಕಾರಿಗೆ ಹೇಳಿದರು.