Advertisement
4:21 AM Friday 8-December 2023

ರಾಜ್ಯ ಸರ್ಕಾರಿ ನೌಕರರ ಅನಿರ್ದಿಷ್ಟಾವಧಿ ಮುಷ್ಕರ : ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಬೆಂಬಲ

28/02/2023

ಸೋಮವಾರಪೇಟೆ ಫೆ.28 : ರಾಜ್ಯ ಸರ್ಕಾರಿ ನೌಕರರ ವೇತನ ಭತ್ಯೆಗಳ ಪರಿಷ್ಕರಣೆ ಮತ್ತು ಹಳೆ ಪಿಂಚಣಿ ಯೋಜನೆ ಜಾರಿಗೊಳಿಸಲು ರಾಜ್ಯ ಸರ್ಕಾರಿ ನೌಕರರ ಸಂಘ ಕರೆ ನೀಡಿರುವ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ತಾಲ್ಲೂಕು ಪ್ರಥಮಿಕ ಶಾಲಾ ಶಿಕ್ಷಕರ ಸಂಘ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ.
ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಸಂಘದ ತಾಲೂಕು ಘಟಕ ಅಧ್ಯಕ್ಷ ಬಸವರಾಜು, ರಾಜ್ಯ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗದ ಸೌಲಭ್ಯಗಳನ್ನು 2022ರ ಜುಲೈ 1 ರಿಂದಲೇ ಜಾರಿಗೊಳಿಸಬೇಕಾಗಿತ್ತು. ಆದರೆ, ಇದೂವರೆಗೂ ಜಾರಿಯಾಗಿಲ್ಲ. ಪ್ರಸಕ್ತ ಸಾಲಿನ ಮುಂಗಡ ಪತ್ರದಲ್ಲೂ ಇದರ ಉಲ್ಲೇಖವಿಲ್ಲ. ರಾಜ್ಯ ಸರ್ಕಾರಿ ನೌಕರರು ಹಾಗೂ ಸರ್ಕಾರದ ಅಧೀನಕ್ಕೆ ಒಳಪಡುವ ನೌಕರರು 7ನೇ ವೇತನ ಆಯೋಗದ ಸೌಲಭ್ಯಕ್ಕೆ ಅರ್ಹರಾಗಿದ್ದು, ರಾಜ್ಯ ಸರ್ಕಾರ ಚುನಾವಣೆ ನೀತಿ ಸಂಹಿತೆ ಜಾರಿಯಾಗುವ ಮೊದಲು ಈ ಸೌಲಭ್ಯಗಳನ್ನು ನೀಡಬೇಕೆಂದು ಆಗ್ರಹಿಸಿದರು.
ರಾಜ್ಯದ ಎನ್‍ಪಿಎಸ್ ನೌಕರರ ಜೀವನ ನಿರ್ವಹಣೆ ಹಾಗೂ ಸಂದ್ಯಾಕಾಲದ ಬದುಕು ಅತ್ಯಂತ ಕಷ್ಟಕರವಾಗಿರುವುದರಿಂದ ಎನ್‍ಪಿಎಸ್ ನೌಕರರನ್ನು ಓಪಿಎಸ್ ವ್ಯಾಪ್ತಿಗೆ ತರಲೇಬೇಕು. ಈಗಾಗಲೇ ಪಂಜಾಬ್, ರಾಜಸ್ಥಾನ, ಛತ್ತೀಸ್‍ಘಡ, ಜಾರ್ಖಂಡ್, ಹಿಮಾಚಲ ಪ್ರದೇಶ ರಾಜ್ಯಗಳಲ್ಲಿ ಹಳೇ ಪಿಂಚಣಿ ಯೋಜನೆಯನ್ನು ಜಾರಿಗೆ ತರಲಾಗಿದ್ದು, ಅದೇ ಮಾದರಿ ಕರ್ನಾಟಕದಲ್ಲೂ ಜಾರಿಯಾಗಬೇಕೆಂದು ಒತ್ತಾಯಿಸಿದರು.
ಜಿಲ್ಲಾಧ್ಯಕ್ಷ ಮಂಜುನಾಥ್ ಮಾತನಾಡಿ, ಮಾ.1 ರಿಂದ ಸಮಸ್ತ ಸರ್ಕಾರಿ ನೌಕರರು ಅನಿರ್ಧಿಷ್ಟಾವಧಿ ಮುಷ್ಕರನ್ನು ಬೆಂಬಲಿಸಬೇಕು. ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು ಸಂಪೂರ್ಣ ಬೆಂಬಲ ನೀಡುವುದರೊಂದಿಗೆ ಶಾಲೆಗಳಿಗೆ ಗೈರು ಹಾಜರಾಗುವ ಮೂಲಕ ಸೂಕ್ತ ನಿರ್ಣಯ ಕೈಗೊಳ್ಳುವವರೆಗೂ ಮುಂದುವರೆಸಬೇಕು ಎಂದು ಕರೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಪದಾಧಿಕಾರಿಗಳಾದ ಶಿವಕುಮಾರ್, ಎಲ್.ಎಂ.ಪ್ರೇಮ. ಬಿಪಿನ್ ಮತ್ತು ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಪ್ರದೀಪ್ ಹಾಜರಿದ್ದರು.