Advertisement
4:40 AM Friday 8-December 2023

 ರೆಡ್ ಕ್ರಾಸ್ ನ ಸುಸಜ್ಜಿತ ಮೊಬೈಲ್ ಘಟಕಕ್ಕೆ ಮಾ.2 ರಂದು ಚಾಲನೆ

28/02/2023

ಮಡಿಕೇರಿ ಫೆ.28 : ಭಾರತೀಯ ರೆಡ್ ಕ್ರಾಸ್ ನ ಕೊಡಗು ಘಟಕದ ವತಿಯಿಂದ ಸುಸಜ್ಜಿತ ವೈದ್ಯಕೀಯ ತಪಾಸಣಾ ಬಸ್ ನ್ನು ಮಾ.2 ರಂದು  ಲೋಕಾಪ೯ಣೆ ಮಾಡಲಾಗುತ್ತದೆ.

ಮಡಿಕೇರಿಯ ಗಾಂಧಿ ಮಂಟಪದ ಮುಂಬದಿ ಬೆಳಗ್ಗೆ 9 ಗಂಟೆಗೆ ರೂ.75 ಲಕ್ಷ  ಮೌಲ್ಯದ ಸುಸಜ್ಜಿತ ಮೊಬೈಲ್ ಘಟಕವನ್ನು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಮತ್ತು ವಿರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ ಲೋಕಾಪ೯ಣೆ ಮಾಡಲಿದ್ದಾರೆ.

ಕಾಯ೯ಕ್ರಮದಲ್ಲಿ ರೆಡ್ ಕ್ರಾಸ್ ಸಭಾಧ್ಯಕ್ಷ ಹಾಗೂ  ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ್, ಮಡಿಕೇರಿ ನಗರಸಭಾಧ್ಯಕ್ಷೆ ಅನಿತಾ ಪೂವಯ್ಯ, ಜಿ.ಪಂ ಮುಖ್ಯ ಕಾಯ೯ನಿವ೯ಹಣಾಧಿಕಾರಿ ಡಾ.ಎನ್. ಆಕಾಶ್, ಹೆಚ್ಚುವರಿ ಜಿಲ್ಲಾಧಿಕಾರಿ ನಂಜುಂಡೇಗೌಡ, ಉಪವಿಭಾಗಾಧಿಕಾರಿ ಯತೀಶ್ ಉಲ್ಲಾಳ್ , ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್ , ವೈದ್ಯಕೀಯ ಕಾಲೇಜಿನ ಡೀನ್ ಡಾ.ಕಾಯ೯ಪ್ಪ, ರೆಡ್ ಕ್ರಾಸ್ ಕೊಡಗು ಘಟಕದ ಸಭಾಪತಿ ಬಿ.ಕೆ.ರವೀಂದ್ರ ರೈ, ಉಪಾಧ್ಯಕ್ಷ ಎಚ್.ಟಿ.ಅನಿಲ್,  ಕಾಯ೯ದಶಿ೯ ಮುರಳೀಧರ್ ಪಾಲ್ಗೊಳ್ಳಲಿದ್ದಾರೆ ಎಂದು  ರೆಡ್ ಕ್ರಾಸ್ ಪ್ರಕಟಣೆ ತಿಳಿಸಿದೆ.

ಭಾರತೀಯ ರೆಡ್ ಕ್ರಾಸ್ ಸಂಸ್ಥೆಯು ಕೊಡಗು ರೆಡ್ ಕ್ರಾಸ್ ಘಟಕದ ಕೋರಿಕೆಯನ್ವಯ 75 ಲಕ್ಷ ಮೌಲ್ಯದ ಸುಸಜ್ಜಿತವಾದ ವೈದ್ಯಕೀಯ ತಪಾಸಣೆಗೆ ಎಲ್ಲಾ ಸೌಲಭ್ಯಗಳನ್ನು ಹೊಂದಿರುವ ಮೊಬೈಲ್ ಆಸ್ಪತ್ರೆಯನ್ನು ಕೊಡಗು ಜಿಲ್ಲೆಗೆ ರವಾನಿಸಿದ್ದು, ಮುಂದಿನ ದಿನಗಳಲ್ಲಿ ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆಯ ಸಹಯೋಗದಲ್ಲಿ ಈ ಮೊಬೈಲ್ ಘಟಕವು ಗ್ರಾಮೀಣ ಭಾಗಗಳೂ ಸೇರಿದಂತೆ ಜಿಲ್ಲೆಯಾದ್ಯಂತ  ಜನತೆಗೆ ಸಹಕಾರಿಯಾಗಲಿದೆ ಎಂದು ರೆಡ್ ಕ್ರಾಸ್ ಸಭಾಪತಿ ಬಿ.ಕೆ.ರವೀಂದ್ರ ರೈ ಮಾಹಿತಿ ನೀಡಿದ್ದಾರೆ.