Advertisement
11:59 AM Monday 4-December 2023

ಕನ್ನಡ ಸಾಹಿತ್ಯಕ್ಕೆ ಸರ್ವಜ್ಞರ ಕೊಡುಗೆ ಅಪಾರ : ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುಂಡೇಗೌಡ

28/02/2023

ಮಡಿಕೇರಿ ಫೆ.28 : ಕವಿ ಸರ್ವಜ್ಞ ಅವರು ತ್ರಿಪದಿಗಳ ಮೂಲಕ ಸಮಾಜದ ಆಗುಹೋಗುಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಸರ್ವಜ್ಞರು ತ್ರಿಪದಿಗಳ ಮೂಲಕ ಕನ್ನಡ ಸಾಹಿತ್ಯ ಲೋಕಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುಂಡೇಗೌಡ ಅವರು ತಿಳಿಸಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ನಗರದ ಭಾರತೀಯ ವಿದ್ಯಾಭವನದಲ್ಲಿ ತ್ರಿಪದಿ ಕವಿ ಸರ್ವಜ್ಞ ಜಯಂತ್ಯುತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಆಡಿದರೆ ಆಡುವನು, ವಾಚಿಸಿದರೆ ವಾಚಿಸುವನು ಹೀಗೆ ವಿಶಿಷ್ಟ ಸಾಹಿತ್ಯ ಪರಂಪರೆಯನ್ನು ಹುಟ್ಟು ಹಾಕಿದ್ದ ಸರ್ವಜ್ಞರ ತ್ರಿಪದಿ ಸಾಹಿತ್ಯ ಸಾರ್ವಕಾಲಿಕವಾಗಿದೆ ಎಂದು ಡಾ.ನಂಜುಂಡೇಗೌಡ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಸಾಹಿತಿ ಡಾ.ಜೆ.ಸೋಮಣ್ಣ ಅವರು ಮಾತನಾಡಿ ಸರ್ವಜ್ಞರು ತನಗಾಗಿ ಬದುಕದೆ ಸಮಾಜಕ್ಕಾಗಿ ಬದುಕಿದರು. ನಾಡಿನುದ್ದಗಲಕ್ಕೂ ಸಂಚರಿಸಿದ ಸರ್ವಜ್ಞರು ಶಾಲೆ ಕಾಲೇಜುಗಳಲ್ಲಿ ಕಲಿಯುವ ವಿಷಯಕ್ಕೆ ಹೆಚ್ಚಿನ ಜ್ಞಾನವನ್ನು ಸಮಾಜದಿಂದ ಕಲಿತರು. ಹೀಗಾಗಿ ಇವರಿಗೆ ಸರ್ವಜ್ಞ ಎಂದು ಹೆಸರು ಬರಲು ಸಾಧ್ಯವಾಯಿತು ಎಂದರು.
ಸರ್ವಜ್ಞರ ಮೊದಲಿನ ಹೆಸರು ಪುಷ್ಪದತ್ತ ಎಂಬುದಾಗಿತ್ತು, ಸರ್ವಜ್ಞರು ಬೆಳೆದಂತೆ ಹೆಸರಾಂತ ಕವಿಯಾಗಿ 16 ನೇ ಶತಮಾನದಲ್ಲಿ ಗುರುತಿಸಿಕೊಂಡಿದ್ದಾರೆ. ಮನುಷ್ಯನಾಗಿ ಸಮಾಜದಲ್ಲಿ ಇತರರೊಂದಿಗೆ ಬದುಕು ನಡೆಸುವಂತಾಗಲು ಗರ್ವವನ್ನು ಬಿಡಬೇಕು. ಪ್ರತಿಯೊಬ್ಬರೂ ಸಹ ಒಂದಲ್ಲ ಒಂದು ಜ್ಞಾನ ಹೊಂದಿ, ಇತರರಿಗೆ ಮಾದರಿಯಾಗಿ ನಡೆದುಕೊಳ್ಳುವ ನಿಟ್ಟಿನಲ್ಲಿ ಸರ್ವಜ್ಞರು ತಮ್ಮ ಸಂದೇಶಲ್ಲಿ ಸಾರಿದ್ದಾರೆ ಎಂದರು.
‘ಹಾಸಿಗೆ ಇದ್ದಷ್ಟು ಕಾಲು ಚಾಚಬೇಕು. ಅಗತ್ಯಕ್ಕೆ ತಕ್ಕಂತೆ ಗಳಿಸಬೇಕು. ಇತರರನ್ನು ಗೌರವಿಸಬೇಕು ಎಂಬುದನ್ನು ಸರ್ವಜ್ಞರು ಸಾರಿದ್ದಾರೆ. ಸಮ ಸಮಾಜ ನಿರ್ಮಾಣ ಸರ್ವಜ್ಞ ಅವರ ತ್ರಿಪದಿಗಳಲ್ಲಿ ಕಾಣಬಹುದು ಎಂದು ಸೋಮಣ್ಣ ಅವರು ನುಡಿದರು.’
ಸರ್ವಜ್ಞರು ಶಿಕ್ಷಣ, ಸಮಾಜ, ವಿಜ್ಞಾನ ಎಲ್ಲಾ ವಿಷಯಗಳ ಬಗ್ಗೆಯೂ ತಮ್ಮ ತ್ರಿಪದಿಗಳಲ್ಲಿ ವಚನಗಳನ್ನು ಬರೆದಿದ್ದಾರೆ. ಸರ್ವಜ್ಞರ ವಚನಗಳನ್ನು ಓದಿ ಅರ್ಥೈಸಿಕೊಂಡರೆ ನಮ್ಮ ಹೃದಯಗಳು ಪರಸ್ಪರ ಬೆಸೆದು ಮನುಷ್ಯರಾಗಿ ಬದುಕಲು ಸಾಧ್ಯವಾಗುತ್ತದೆ. ಸರ್ವಜ್ಞರ 7,070 ವಚನಗಳು ಸಂಗ್ರಹವಿದೆ ಎಂದರು.
ಕುಲಾಲ(ಕುಂಬಾರ) ಸಮಾಜದ ಜಿಲ್ಲಾ ಅಧ್ಯಕ್ಷರಾದ ಎಂ.ಡಿ.ನಾಣಯ್ಯ ಅವರು ಮಾತನಾಡಿ ಜಿಲ್ಲೆಯಲ್ಲಿ ಕುಂಬಾರ ಸಮಾಜದಲ್ಲಿ 4500 ಜನಸಂಖ್ಯೆ ಇದ್ದು, ಸಂಘಟಿತರಾಗಬೇಕಿದೆ ಎಂದರು. ಮಕ್ಕಳ ವಿಧ್ಯಾಭ್ಯಾಸಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ಅವರು ಕೋರಿದರು.
ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಚಿನ್ನಸ್ವಾಮಿ, ಕುಲಾಲ ಸಮಾಜದ ಪ್ರಮುಖರಾದ ಒ.ಆರ್.ಮೈಲಪ್ಪ, ಮಣಜೂರು ಮಂಜುನಾಥ್, ಬಿ.ಸಿ.ಶಂಕರಯ್ಯ ಇತರರು ಇದ್ದರು.