Advertisement
3:28 AM Saturday 2-December 2023

ಕೂಡುಮಂಗಳೂರು ಪ್ರೌಢಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನ : ವಿದ್ಯಾರ್ಥಿಗಳಿಂದ ವಿಜ್ಞಾನ ಪ್ರಯೋಗಗಳ ಪ್ರಾತ್ಯಕ್ಷಿಕೆ 

28/02/2023

ಕೂಡುಮಂಗಳೂರು, ಫೆ.28 : ಉತ್ತರ ಕೊಡಗಿನ ಕುಶಾಲನಗರ ತಾಲ್ಲೂಕಿನ ಕೂಡಿಗೆ ಕ್ಲಸ್ಟರ್ ವ್ಯಾಪ್ತಿಯ ಕೂಡುಮಂಗಳೂರು (ಕೂಡ್ಲೂರು) ಸರ್ಕಾರಿ ಪ್ರೌಢಶಾಲೆಯಲ್ಲಿ ಶಾಲಾ ಶಿಕ್ಷಣ ಇಲಾಖೆ, ಸಮಗ್ರ ಶಿಕ್ಷಣ ಕರ್ನಾಟಕ ಹಾಗೂ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಕೊಡಗು ಜಿಲ್ಲಾ ಸಮಿತಿಯ ವತಿಯಿಂದ ಶಾಲೆಯ ವಿಜ್ಞಾನ ಸಂಘ, ಇಕೋ ಕ್ಲಬ್, ಎನ್.ಎಸ್.ಎಸ್.ಘಟಕದ ಸಹಯೋಗದೊಂದಿಗೆ ರಾಷ್ಟ್ರೀಯ ವಿಜ್ಞಾನ ದಿನ ಆಚರಿಸಲಾಯಿತು.
ವಿಜ್ಞಾನ ದಿನಾಚರಣೆ ಅಂಗವಾಗಿ ವಿದ್ಯಾರ್ಥಿಗಳು ವಿವಿಧ ವಿಜ್ಞಾನ ಪ್ರಯೋಗಗಳ ಪ್ರಾತ್ಯಕ್ಷಿಕೆ ಪ್ರದರ್ಶಿಸಿ ವೈಜ್ಞಾನಿಕ ಕಾರಣಗಳನ್ನು ನೀಡುವ ಮೂಲಕ ಗಮನ ಸೆಳೆದರು.
ವಿದ್ಯಾರ್ಥಿಗಳು ಸ್ವತಃ ಪ್ರದರ್ಶಿಸಿದ ವಿಜ್ಞಾನ ಪ್ರಯೋಗಕ್ಕೆ ಚಾಲನೆ ನೀಡುವ ಮೂಲಕ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಜಿಲ್ಲಾ ಸಮಿತಿ ಅಧ್ಯಕ್ಷರೂ ಆದ ಶಾಲೆಯ ಮುಖ್ಯೋಪಾಧ್ಯಾಯ ಟಿ.ಜಿ.ಪ್ರೇಮಕುಮಾರ್ ಮಾತನಾಡಿ,ವಿದ್ಯಾರ್ಥಿಗಳು ದೇಶದ ವಿಜ್ಞಾನಿಗಳ ಸಂಶೋಧನೆ ಮತ್ತು ಅವರ ಸಾಧನೆಗಳ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸುವ ಮೂಲಕ ಮೂಲ ವಿಜ್ಞಾನ ಕಲಿಕೆಯೊಂದಿಗೆ ತಮ್ಮನ್ನು ಹೊಸ ಹೊಸ ಅನ್ವೇಷಣೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ಬೆಳಕಿನ ಚದುರುವಿಕೆಯ ‘ರಾಮನ್ ಪರಿಣಾಮ’ ಮತ್ತು ತಂತ್ರಜ್ಞಾನದ ಬೆಳವಣಿಗೆಗೆ ವಿಜ್ಞಾನದ ಕೊಡುಗೆಯ ಮಹತ್ವದ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿದರು.
ಈ ರಾಷ್ಟ್ರೀಯ ವಿಜ್ಞಾನ ದಿನವನ್ನು ನೊಬೆಲ್ ಪ್ರಶಸ್ತಿ ಪುರಸ್ಕೃತ, ಭಾರತರತ್ನ ಡಾ. ಸಿ.ವಿ. ರಾಮನ್ ಅವರ ರಾಮನ್ ಪರಿಣಾಮದ ಸಂಶೋಧನೆಯ ಜ್ಞಾಪಕಾರ್ಥವಾಗಿ ಆಚರಿಸಲಾಗುತ್ತದೆ ಎಂದು ಪ್ರೇಮಕುಮಾರ್ ಹೇಳಿದರು.

ವಿಜ್ಞಾನವು ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಿದೆ. ಬದುಕಿನ ಪ್ರತೀ ಸಮಸ್ಯೆಗೂ ವಿಜ್ಞಾನದಲ್ಲಿ ಪರಿಹಾರವಿದೆ.
ಆದ್ದರಿಂದ ಮಕ್ಕಳಲ್ಲಿ ಪ್ರಾಥಮಿಕ ಹಂತದಿಂದಲೇ ಗಣಿತ ಮತ್ತು ವಿಜ್ಞಾನಗಳ ಬಗ್ಗೆ ಒಲವು ಮೂಡಿಸಬೇಕು. ಈಗ ಮಾನವಿಕಗಳ ಕಲಿಕೆಯಲ್ಲೂ ತಂತ್ರಜ್ಞಾನ ನಿರ್ಣಾಯಕ ಪಾತ್ರ ವಹಿಸುತ್ತಿದೆ. ವಿದ್ಯಾರ್ಥಿಗಳು ಏನನ್ನೇ ಕಲಿತರೂ ವೈಜ್ಞಾನಿಕ ಮನೋಭಾವವನ್ನು ರೂಢಿಸಿಕೊಳ್ಳಬೇಕು ಎಂದು ಪ್ರೇಮಕುಮಾರ್ ಹೇಳಿದರು.
ವಿಜ್ಞಾನ ದಿನಾಚರಣೆಯ ಮಹತ್ವ ಕುರಿತು ವಿವರಣೆ ನೀಡಿದ ಶಾಲೆಯ ವಿಜ್ಞಾನ ಸಂಘದ ಉಸ್ತುವಾರಿ ಶಿಕ್ಷಕಿ ಬೊಳ್ಳಂಡ ಡಿ.ರಮ್ಯ ಮಾತನಾಡಿ, ವಿದ್ಯಾರ್ಥಿಗಳು ವಿಜ್ಞಾನ ಕಲಿಕೆಯಲ್ಲಿ ಹೆಚ್ಚಿನ ಆಸಕ್ತಿ ಹಾಗೂ ಕೌಶಲ್ಯವನ್ನು ಬೆಳಸಿಕೊಂಡು ಸಂಶೋಧನೆಯ ಕಡೆಗೆ ಹೆಚ್ಚಿನ ಗಮನ ಹರಿಸಬೇಕು ಎಂದರು.

‘ಜಾಗತಿಕ ಯೋಗಕ್ಷೇಮಕ್ಕಾಗಿ ಜಾಗತಿಕ ವಿಜ್ಞಾನ’ ಎಂಬುದು 2023ರ ರಾಷ್ಟ್ರೀಯ ವಿಜ್ಞಾನ ದಿನದ ಥೀಮ್ ಆಗಿದ್ದು, ‘ಸುಸ್ಥಿರ ಭವಿಷ್ಯಕ್ಕಾಗಿ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಹೆಚ್ಚಿನ ಸಂಶೋಧನೆ ನಡೆಸುವ ಮೂಲಕ ದೇಶವನ್ನು ಅಭಿವೃದ್ಧಿ ಪಡಿಸಲು ವಿಶೇಷ ಗಮನ ಹರಿಸಲಾಗಿದೆ ಎಂದರು.
ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಸಂಘಟನಾ ಕಾರ್ಯದರ್ಶಿ ಎಂ.ಟಿ.ದಯಾನಂದ ಪ್ರಕಾಶ್, ಶಿಕ್ಷಕರಾದ ಕೆ.ಗೋಪಾಲ್, ಎಸ್.ಎಂ.ಗೀತಾ, ಅನ್ಸಿಲಾ ರೇಖಾ, ಕೆ.ಬಿ.ನಯನ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ವಿದ್ಯಾರ್ಥಿಗಳಿಂದ ವಿಜ್ಞಾನ ಪ್ರಾತ್ಯಕ್ಷಿಕೆ : ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ವಿಜ್ಞಾನ ಪ್ರಯೋಗಗಳ ಪ್ರಾತ್ಯಕ್ಷಿಕೆ ಗಮನ ಸೆಳೆಯಿತು. ವಿದ್ಯಾರ್ಥಿಗಳು ಶಿಕ್ಷಕರ ಮಾರ್ಗದರ್ಶನದಲ್ಲಿ ವಿವಿಧ ಮಾದರಿಗಳನ್ನು ಪ್ರದರ್ಶಿಸುವ ಮೂಲಕ ಸ್ವತಃ ವಿವಿಧ ವಿಜ್ಞಾನ ಪ್ರಯೋಗಗಳನ್ನು ಪ್ರದರ್ಶಿಸಿದರು.
ಸರ್ ಸಿ.ವಿ.ರಾಮನ್ ಅವರ ವೈಜ್ಞಾನಿಕ ಸಂಶೋಧನೆ ಕುರಿತು ವಿದ್ಯಾರ್ಥಿಗಳಾದ ಕೆ.ಎಂ.ಮದನ್ ಮತ್ತು ಸಜನಾ ಪ್ರಬಂಧ ಮಂಡಿಸಿದರು.
ವಿದ್ಯಾರ್ಥಿಗಳಾದ ಜೀವಿತ, ಧನಲಕ್ಷ್ಮಿ, ಐಶ್ವರ್ಯ, ಮೋನಿಕಾ, ಪ್ರೀತಂಗೌಡ, ಜೀವನ್ ಹಾಗೂ ರಂಜನ್ ಕುಮಾರ್ ವಿವಿಧ ವಿಜ್ಞಾನ ಪ್ರಯೋಗಗಳನ್ನು ಪ್ರಾತ್ಯಕ್ಷಿಕೆ ಮೂಲಕ ವಿವರಿಸಿದರು.