Advertisement
3:55 AM Saturday 2-December 2023

ತಡವಾಗಿ ವೇತನ ಹೆಚ್ಚಳ ಘೋಷಣೆ ಚುನಾವಣಾ ಗಿಮಿಕ್ : ಜೆಡಿಎಸ್ ಟೀಕೆ

01/03/2023

ಮಡಿಕೇರಿ ಮಾ.1 : ಬಜೆಟ್ ಸಂದರ್ಭವೇ ಸರ್ಕಾರಿ ನೌಕರರ ವೇತನ ಹೆಚ್ಚಳ ಮಾಡಿ ಆದೇಶ ಹೊರಡಿಸದ ರಾಜ್ಯ ಸರ್ಕಾರ ಚುನಾವಣಾ ಗಿಮಿಕ್ ಗಾಗಿ ಮುಷ್ಕರ ಆರಂಭಿಸಿದ ನಂತರ ಘೋಷಣೆ ಮಾಡಿದೆ ಎಂದು ಜಾತ್ಯತೀತ ಜನತಾದಳದ ರಾಜ್ಯ ಸಂಘಟನಾ ಕಾರ್ಯದರ್ಶಿ ನಾಪೋಕ್ಲುವಿನ ಎಂ.ಎ.ಮನ್ಸೂರ್ ಆಲಿ ಆರೋಪಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ರಾಜ್ಯ ಬಿಜೆಪಿ ಸರ್ಕಾರ ಅತಿ ಬುದ್ದಿವಂತಿಕೆಯನ್ನು ಪ್ರದರ್ಶಿಸಿದ್ದು, ಮಗುವನ್ನು ಚಿವುಟಿದಂತೆ ಮಾಡಿ ತಾನೇ ಸಮಾಧಾನ ಪಡಿಸಿದಂತೆ ನಾಟಕವಾಡಿದೆ. ನೌಕರರು ಶೇ.40 ರಷ್ಟು ವೇತನ ಹೆಚ್ಚಳಕ್ಕಾಗಿ ಬಜೆಟ್ ಗೂ ಮೊದಲೇ ಮನವಿ ಮಾಡಿದ್ದರು. ಆದರೆ ಇದಕ್ಕೆ ಸ್ಪಂದಿಸದ ಸರ್ಕಾರ ಮುಷ್ಕರ ಆರಂಭಗೊಂಡ ನಂತರ ಶೇ.17 ರಷ್ಟು ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ. ಇಚ್ಛಾಶಕ್ತಿಯ ಕೊರತೆಯನ್ನು ಎದುರಿಸುತ್ತಿರುವ ಸರ್ಕಾರ ಈ ವಿಚಾರದಲ್ಲೂ ರಾಜಕೀಯ ಗಿಮಿಕ್ ಮಾಡಲು ಮುಂದಾಗಿರುವುದು ಸ್ಪಷ್ಟವಾಗಿದೆ ಎಂದು ಟೀಕಿಸಿದ್ದಾರೆ.
ದಿನದಿಂದ ದಿನಕ್ಕೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಲೇ ಇದ್ದು, ಸರ್ಕಾರಿ ನೌಕರರಿಗೆ ವೇತನ ಹೆಚ್ಚಳ ಮಾಡುವುದು ಅನಿವಾರ್ಯವಾಗಿದೆ. ಆದರೆ ಸರ್ಕಾರ ತನ್ನ ನಿರ್ಧಾರವನ್ನು ಪ್ರಕಟಿಸಲು ವಿಳಂಬ ಮಾಡಿದ ಕಾರಣ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಕಷ್ಟ, ನಷ್ಟಗಳನ್ನು ಅನುಭವಿಸುವಂತ್ತಾಗಿದೆ. ತನ್ನ ಕಾರ್ಯಸಾಧನೆಗಾಗಿ ಸರ್ಕಾರ ವಿಳಂಬ ನೀತಿ ಅನುಸರಿಸಿದ ಪರಿಣಾಮ ಲಕ್ಷಾಂತರ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಅಡಚಣೆಯಾಗಿದೆ, ಪರೀಕ್ಷೆಗಳು ಮುಂದೂಡಲ್ಪಟ್ಟಿವೆ.
ಚುನಾವಣಾ ಲಾಭಕ್ಕಾಗಿ ಜನರ ಜೀವನದ ಜೊತೆ ಸರ್ಕಾರ ಚೆಲ್ಲಾಟವಾಡಿದೆ. ಆಸ್ಪತ್ರೆಗಳಲ್ಲಿ ದಾಖಲಾದ ರೋಗಿಗಳು ವೈದ್ಯರುಗಳಿಲ್ಲದೆ ಮತ್ತು ಸೂಕ್ತ ಚಿಕಿತ್ಸೆ ಸಿಗದೆ ಸಂಕಷ್ಟ ಎದುರಿಸಿದ್ದಾರೆ. ಆಸ್ಪತ್ರೆಗೆ ಬಂದ ರೋಗಿಗಳು ವೈದ್ಯರ ಸೇವೆ ಲಭ್ಯವಿಲ್ಲದೆ ಮರಳಿದಿದ್ದಾರೆ. ವಿವಿಧ ಸರ್ಕಾರಿ ಕಚೇರಿಗಳಲ್ಲಿ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸದೆ ಇದ್ದ ಕಾರಣ ಅರ್ಜಿದಾರರು ನಿರಾಶೆಯಿಂದ ವಾಪಾಸ್ಸಾಗಿದ್ದಾರೆ. ನೌಕರರ ಮುಷ್ಕರದಿಂದ ಸರ್ಕಾರಕ್ಕೆ ಕೋಟ್ಯಾಂತರ ರೂ. ನಷ್ಟ ಸಂಭವಿಸಿದೆ. ಇದಕ್ಕೆಲ್ಲ ರಾಜ್ಯ ಸರ್ಕಾರದ ನಿರ್ಲಕ್ಷ್ಯ ಧೋರಣೆ ಮತ್ತು ನಿರ್ಧಾರಗಳನ್ನು ಸಕಾಲದಲ್ಲಿ ತೆಗೆದುಕೊಳ್ಳುವ ಸಾಮಥ್ರ್ಯ ಇಲ್ಲದಿರುವುದೇ ಪ್ರಮುಖ ಕಾರಣ ಎಂದು ಮನ್ಸೂರ್ ಆಲಿ ಆರೋಪಿಸಿದ್ದಾರೆ.
ಸರ್ಕಾರಿ ನೌಕರರ ಬೇಡಿಕೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು, ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಹೋರಾಟ ನಡೆಸುತ್ತಿರುವ ಗುತ್ತಿಗೆ ಆಧಾರದ ನೌಕರರು ಹಾಗೂ ಕಾರ್ಮಿಕರ ಬೇಡಿಕೆಗಳಿಗೂ ಸರ್ಕಾರ ಸ್ಪಂದಿಸಬೇಕು ಮತ್ತು ಇನ್ನು ಮುಂದೆ ಸಾರ್ವಜನಿಕರಿಗೆ ತೊಂದರೆಯಾಗದ ರೀತಿಯಲ್ಲಿ ದಿಟ್ಟ ನಿರ್ಧಾರಗಳನ್ನು ಸಕಾಲದಲ್ಲಿ ತೆಗೆದುಕೊಳ್ಳಬೇಕೆಂದು ಅವರು ಒತ್ತಾಯಿಸಿದ್ದಾರೆ.