ಅಡುಗೆ ಅನಿಲದ ಬೆಲೆ ಹೆಚ್ಚಳ : ಮಡಿಕೇರಿ ಮಹಿಳಾ ಕಾಂಗ್ರೆಸ್ ಖಂಡನೆ

ಮಡಿಕೇರಿ ಮಾ.1 : ಅಡುಗೆ ಅನಿಲದ ಬೆಲೆಯನ್ನು ನಿರಂತರವಾಗಿ ಏರಿಕೆ ಮಾಡುವ ಮೂಲಕ ಸರ್ಕಾರ ಜನಸಾಮಾನ್ಯರ ಜೀವನದ ಜೊತೆ ಚೆಲ್ಲಾಟವಾಡುತ್ತಿದೆ ಎಂದು ಮಡಿಕೇರಿ ನಗರ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಹೊಟ್ಟೆಯಂಡ ಫ್ಯಾನ್ಸಿ ಬೆಳ್ಯಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು 14.2 ಕೆ.ಜಿ ಅಡುಗೆ ಅನಿಲದ ಸಿಲಿಂಡರ್ ಬೆಲೆ ಮತ್ತೆ ರೂ.50 ಹೆಚ್ಚಳವಾಗಿದ್ದು, ಒಂದು ಸಿಲಿಂಡರ್ ಗೆ ರೂ.1,103 ನೀಡಬೇಕಾಗಿದೆ. ವಾಣಿಜ್ಯ ಬಳಕೆಯ 19 ಕೆ.ಜಿ ಸಿಲಿಂಡರ್ ಬೆಲೆ ರೂ.350.50 ಪೈಸೆ ಹೆಚ್ಚಳವಾಗಿದ್ದು, ರೂ.2,119.50 ಪೈಸೆ ಪಾವತಿಸಬೇಕಾಗಿದೆ. ಇದು ಅತ್ಯಂತ ದುಬಾರಿಯಾಗಿದ್ದು, ಜನರ ಜೀವನದ ಮೇಲೆ ದೊಡ್ಡ ಪರಿಣಾಮವನ್ನು ಬೀರಲಿದೆ ಎಂದು ಟೀಕಿಸಿದ್ದಾರೆ.
ಬಡವರು, ಕೂಲಿ ಕಾರ್ಮಿಕರು, ಜನಸಾಮಾನ್ಯರು ದುಡಿದ ಹಣವನ್ನು ಸಿಲಿಂಡರ್ ಗೆ ಮೀಸಲಿಟ್ಟರೆ ಜೀವನ ಸಾಗಿಸುವುದು ಮತ್ತು ತಮ್ಮ ಮಕ್ಕಳಿಗೆ ಶಿಕ್ಷಣ ನೀಡುವುದು ಹೇಗೆ ಎಂದು ಪ್ರಶ್ನಿಸಿದ್ದಾರೆ.
ವಾಣಿಜ್ಯ ಬಳಕೆಯ ಸಿಲಿಂಡರ್ ಗಳ ಬೆಲೆಯೂ ಏರಿಕೆಯಾಗಿರುವುದರಿಂದ ಹೊಟೇಲ್ ಗಳಲ್ಲಿ ಊಟ, ಉಪಹಾರದ ದರ ದುಬಾರಿಯಾಗಲಿದೆ. ಇದು ಸಾರ್ವಜನಿಕರ ಮೇಲೆ ಪರಿಣಾಮ ಬೀರಲಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸರ್ಕಾರ ತಕ್ಷಣ ಎಚ್ಚೆತ್ತುಕೊಂಡು ಜನರ ಸ್ಥಿತಿಗತಿಯನ್ನು ಅರಿತು ಅಡುಗೆ ಅನಿಲದ ಬೆಲೆಯನ್ನು ನಿಯಂತ್ರಿಸಬೇಕು. ತಪ್ಪಿದಲ್ಲಿ ಮುಂಬರುವ ಚುನಾವಣೆಯಲ್ಲಿ ಜನರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಫ್ಯಾನ್ಸಿ ಬೆಳ್ಯಪ್ಪ ತಿಳಿಸಿದ್ದಾರೆ.
ರಾಜ್ಯದ ಪಡಿತರ ಫಲಾನುಭವಿಗಳಿಗೆ ಅನ್ನಭಾಗ್ಯ ಯೋಜನೆಯಡಿ ಹಂಚಿಕೆಯಾಗುತ್ತಿದ್ದ 10 ಕೆ.ಜಿ ಅಕ್ಕಿಯ ಬದಲಿಗೆ ಕೇವಲ 6 ಕೆ.ಜಿ ಅಕ್ಕಿ ನೀಡಿ ಸರ್ಕಾರ ವಂಚಿಸುತ್ತಿದೆ. ಒಂದೆಡೆ ಅಡುಗೆ ಅನಿಲ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆಯ ಬಿಸಿ, ಮತ್ತೊಂದೆಡೆ ಯಾರೂ ಹಸಿವಿನಿಂದ ಇರಬಾರದೆಂದು ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿದ್ದ ಅನ್ನಭಾಗ್ಯ ಯೋಜನೆಯ ಅಕ್ಕಿಯ ಪ್ರಮಾಣವನ್ನು ಕಡಿಮೆ ಮಾಡಲಾಗಿದೆ. ಇಂದಿರಾ ಕ್ಯಾಂಟೀನ್ ನ್ನು ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡದೆ ಕಡೆಗಣಿಸಲಾಗಿದೆ. ಎಲ್ಲಾ ವಿಧದಲ್ಲೂ ಬಿಜೆಪಿ ಸರ್ಕಾರ ಬಡವರ ಮೇಲೆ ನಿರಂತರವಾಗಿ ಗದಾಪ್ರಹಾರ ಮಾಡುತ್ತಲೇ ಬರುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
