ಕೊಡಗಿಗೂ ತಟ್ಟಿದ ಸರ್ಕಾರಿ ನೌಕರರ ಮುಷ್ಕರದ ಬಿಸಿ

ಮಡಿಕೇರಿ ಮಾ.1 : ವೇತನ ಭತ್ಯೆಗಳ ಪರಿಷ್ಕರಣೆಗೆ ಸಂಬಂಧಿಸಿದಂತೆ 7ನೇ ವೇತನ ಆಯೋಗದ ವರದಿ ಜಾರಿಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಕರೆ ನೀಡಿದ್ದ ಮುಷ್ಕರಕ್ಕೆ ಕೊಡಗು ಜಿಲ್ಲೆಯಲ್ಲಿ ಬೆಂಬಲ ವ್ಯಕ್ತವಾಯಿತು.
ಮುಷ್ಕರಕ್ಕೆ ಸ್ಪಂದಿಸಿದ ಜಿಲ್ಲಾ ಸರ್ಕಾರಿ ನೌಕರರು ಬುಧವಾರ ಕೆಲಸಕ್ಕೆ ಹಾಜರಾಗದ ಕಾರಣ ಸರ್ಕಾರಿ ಕಚೇರಿಗಳ ಕೆಲಸ ಕಾರ್ಯ ಸಂಪೂರ್ಣ ಸ್ಥಗಿತಗೊಂಡಿತ್ತು. ಜಿಲ್ಲಾಡಳಿತ ಭವನದ ಕಚೇರಿಗಳು ಬಣಗುಡುತ್ತಿದ್ದವು, ಹೊರಗುತ್ತಿಗೆ ನೌಕರರಷ್ಟೆ ಕಾರ್ಯನಿರ್ವಹಿಸುತ್ತಿದ್ದರು.
ಕೊಡಗು ಜಿಲ್ಲಾ ವ್ಯಾಪ್ತಿಯ ವಿವಿಧ ಸರ್ಕಾರಿ ಕಚೇರಿಗಳು, ಗ್ರಾಮ ಪಂಚಾಯ್ತಿ, ಪಟ್ಟಣ ಪಂಚಾಯ್ತಿ, ನಗರಸಭೆ ಸೇರಿದಂತೆ ಶಾಲಾ ಕಾಲೇಜುಗಳು ಸೇರಿದಂತೆ ವಿವಿಧ ಕಛೇರಿಗಳ ಸುಮಾರು 5 ಸಾವಿರ ಸರ್ಕಾರಿ ನೌಕರರು ಕರ್ತವ್ಯಕ್ಕೆ ಹಾಜರಾಗದೆ ಹೋರಾಟಕ್ಕೆ ಕೈಜೋಡಿಸಿದರು.
ಮಡಿಕೇರಿ ನಗರಸಭೆ ಸೇರಿದಂತೆ ಜಿಲ್ಲೆಯ ಎಲ್ಲಾ ಪಂಚಾಯ್ತಿಗಳಲ್ಲಿ ನೀರು ಸರಬರಾಜು ವ್ಯವಸ್ಥೆಯೊಂದನ್ನು ಹೊರತು ಪಡಿಸಿ, ಉಳಿದ ಎಲ್ಲಾ ಕೆಲಸ ಕಾರ್ಯಗಳಿಂದ ಸಿಬ್ಬಂದಿಗಳು ದೂರ ಉಳಿದಿದ್ದರು. ಮಡಿಕೇರಿ ಜಿಲ್ಲಾ ಆಸ್ಪತ್ರೆಯ ಕಚೇರಿಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಿಬ್ಬಂದಿಗಳು ಮುಷ್ಕರದ ಹಿನ್ನೆಲೆ ತಮ್ಮ ಕಾರ್ಯಸ್ಥಗಿತಗೊಳಿಸಿದ್ದರಾದರು, ಆರೋಗ್ಯ ಚಿಕಿತ್ಸಾ ಸಿಬ್ಬಂದಿಗಳು ಮಾನವೀಯ ನೆಲೆಗಟ್ಟಿನಲ್ಲಿ ಕಾರ್ಯನಿರ್ವಹಿಸಿದರು.
ಹೊರ ರೋಗಿಗಳ ವಿಭಾಗ ಚಿಕಿತ್ಸೆಗಾಗಿ ಬಂದ ಸಾರ್ವಜನಿಕರಿಂದ ಗಿಜಿಗುಡುತಿತ್ತು. ಬಳಿಕ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು ತೆರಳಿ ತುರ್ತು ಚಿಕಿತ್ಸಾ ಘಟಕವನ್ನಷ್ಟೆ ನಡೆಸುವಂತೆ ಮನವಿ ಮಾಡಿದ್ದರಿಂದ ಹೊರ ರೋಗಿಗಳ ವಿಭಾಗ ಕೆಲ ಕಾಲ ಮುಚ್ಚಲ್ಪಟ್ಟಿತ್ತು. ನಂತರ ರಾಜ್ಯ ಸರ್ಕಾರ ಸರ್ಕಾರಿ ನೌಕರರ ಬೇಡಿಕೆಗಳಿಗೆ ಸ್ಪಂದಿಸಿದ ಹಿನ್ನೆಲೆ ಮುಷ್ಕರ ಸ್ಥಗಿತಗೊಂಡು, ಆಸ್ಪತ್ರೆಯ ಚಿಕಿತ್ಸಾ ವಿಭಾಗ ಎಂದಿನಂತೆ ಕಾರ್ಯನಿರ್ವಹಿಸಿತು.
ಕೊಡಗು ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶ್ರೀನಿವಾಸ್ ಹಾಗೂ ಪದಾಧಿಕಾರಿಗಳು ಇಂದು ಬೆಳಗ್ಗಿನಿಂದಲೆ ಜಿಲ್ಲಾಡಳಿತ ಭವನ ಸೇರಿದಂತೆ ವಿವಿಧ ಇಲಾಖೆಗಳಿಗೆ ತೆರಳಿ ಮುಷ್ಕರದ ಬಗ್ಗೆ ನಿಗಾ ವಹಿಸಿದರು. ಮುಷ್ಕರ ಅಂತ್ಯವಾಗುತ್ತಿದ್ದಂತೆ ವಿವಿಧ ಇಲಾಖೆಗಳ ಫಲಾನುಭವಿಗಳು ಹಾಗೂ ಅರ್ಜಿದಾರರು ನಿಟ್ಟುಸಿರು ಬಿಟ್ಟರು.
