Advertisement
3:52 AM Friday 8-December 2023

ಮಡಿಕೇರಿ ಮತ್ತು ಕುಶಾಲನಗರದಲ್ಲಿ ಔಷಧೀಯ ಸಸ್ಯಗಳ ಉದ್ಯಾನ ನಿರ್ಮಾಣ

02/03/2023

ಮಡಿಕೇರಿ ಮಾ.2 : ಕೊಡಗು ಜಿಲ್ಲೆಯ ಮಡಿಕೇರಿ ಮತ್ತು ಕುಶಾಲನಗರದಲ್ಲಿ ಔಷಧೀಯ ಸಸ್ಯಗಳ ಉದ್ಯಾನ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದ್ದು, ಸಧ್ಯದಲ್ಲಿಯೇ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಕರ್ನಾಟಕ ಜೀವ ವೈವಿಧ್ಯ ಮಂಡಳಿಯ ಅಧ್ಯಕ್ಷ ಎನ್.ಎಂ.ರವಿ ಕಾಳಪ್ಪ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕುಶಾಲನಗರದ ಹಾರಂಗಿ ಜಲಾಶಯದ ಬಳಿ ಮತ್ತು ಮಡಿಕೇರಿಯ ಅರಣ್ಯ ಭವನದ ಬಳಿ ಉದ್ಯಾನ ನಿರ್ಮಾಣವಾಗಲಿದೆ ಎಂದರು.
ಕೊಡಗಿನಲ್ಲಿರುವ ಅಪರೂಪದ ಔಷಧೀಯ ಸಸ್ಯಗಳು ಮತ್ತು ರಾಜ್ಯದ ವಿವಿಧೆಡೆಗಳಿಂದ ಔಷಧೀಯ ಗುಣವುಳ್ಳ ಸಸ್ಯಗಳನ್ನು ತಂದು ನೆಡಲಾಗುವುದು. ಅಲ್ಲದೆ ಅವುಗಳ ಬಗ್ಗೆ ಮಾಹಿತಿ ನೀಡುವ ಕಾರ್ಯ ಮಂಡಳಿಯಿಂದ ಆಗಲಿದೆ. ಉದ್ದೇಶಿತ ಯೋಜನೆಗೆ ಸಧ್ಯದಲ್ಲಿಯೇ ಭೂಮಿಪೂಜೆ ನೆರವೇರಿಸಲಾಗುವುದು ಎಂದು ತಿಳಿಸಿದರು.
ಕೊಡಗು ಜಿಲ್ಲೆಗೆ ಆಗಮಿಸುವ ಪ್ರವಾಸಿಗರು ಪ್ರವಾಸಿತಾಣಗಳನ್ನು ವೀಕ್ಷಿಸುವುದರೊಂದಿಗೆ ಔಷಧೀಯ ಸಸ್ಯಗಳ ಉದ್ಯಾನಕ್ಕೂ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬಹುದಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳಿಗೆ ಸಂಚರಿಸಿ ಅಲ್ಲಿನ ಜೀವ ವೈವಿಧ್ಯದ ಸ್ಥಿತಿಗತಿಗಳ ಬಗ್ಗೆ ಅವಲೋಕನ ಮಾಡಿದ್ದೇನೆ. ಕೊಡಗು ಜಿಲ್ಲೆಯ ಪರಿಸರದಲ್ಲಿ ಹಲವು ಔಷಧೀಯ ಸಸ್ಯಗಳು ಇರುವುದನ್ನು ಅನೇಕ ತಜ್ಞರು ನನ್ನ ಗಮನಕ್ಕೆ ತಂದಿದ್ದಾರೆ. ಕೆಲವು ಅಪರೂಪದ ಔಷಧೀಯ ಗುಣವಿರುವ ಗಿಡಗಳು ಅಳಿವಿನಂಚಿನಲ್ಲಿರುವ ಬಗ್ಗೆಯೂ ಆತಂಕ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಅವುಗಳನ್ನು ಸಂರಕ್ಷಣೆ ಮಾಡುವ ಕುರಿತು ಕೋರಿಕೊಂಡಿದ್ದಾರೆ.
ಕಳೆದ ನವೆಂಬರ್‍ನಲ್ಲಿ ಮಡಿಕೇರಿಯಲ್ಲಿ ನಡೆದ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದ ಶಾಸಕರುಗಳಾದ ಎಂ.ಪಿ.ಅಪ್ಪಚ್ಚು ರಂಜನ್ ಹಾಗೂ ಕೆ.ಜಿ.ಬೋಪಯ್ಯ ಅವರು ಕೂಡ ನನ್ನ ಆಶಯಕ್ಕೆ ಪೂರಕವಾಗಿ ಸ್ಪಂದಿಸಿದ್ದಾರೆ.
ಈ ವಿಚಾರವನ್ನು ಮಂಡಳಿಯ ಸಭೆಯಲ್ಲಿ ಮಂಡಿಸಲಾಗಿ, ಎಲ್ಲಾ ಸದಸ್ಯರು ಸಹಮತ ವ್ಯಕ್ತಪಡಿಸಿ ಯೋಜನೆಗೆ ಅನುಮೋದನೆಯೂ ಸಿಕ್ಕಿದೆ. ಕೊಡಗು ಜಿಲ್ಲಾಡಳಿತದ ಸಹಕಾರದೊಂದಿಗೆ ಜಾಗ ಗುರುತು ಪ್ರಕ್ರಿಯೆಯೂ ಆಗಿದ್ದು, ಕುಶಾಲನಗರ ಮತ್ತು ಮಡಿಕೇರಿಯಲ್ಲಿ ಔಷಧಿ ಸಸ್ಯಗಳ ಉದ್ಯಾನ ನಿರ್ಮಾಣಕ್ಕೆ ಯೋಜನೆ ಹಾಕಿಕೊಳ್ಳಲಾಗಿದೆ. ಕೊಡಗು ಜಿಲ್ಲಾಡಳಿತ ಹಾಗೂ ಅರಣ್ಯ ಇಲಾಖೆಯ ಸಹಭಾಗಿತ್ವದಲ್ಲಿ ಈ ಯೋಜನೆಯನ್ನು ಅನುಷ್ಠಾನಗೊಳಿಸಲು ತಯಾರಿ ನಡೆದಿದ್ದು, ಅಗತ್ಯ ಜಾಗವನ್ನು ಅರಣ್ಯ ಇಲಾಖೆ ಒದಗಿಸಿದೆ. ಯೋಜನೆ ಅನುಷ್ಠಾನ ಸಂಬಂಧ ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ವಿವಿಧ ಹಂತದ ಸಭೆ ನಡೆಸಿ ರೂಪುರೇಷೆ ತಯಾರಿ ಬಗ್ಗೆ ಚರ್ಚಿಸಲಾಗಿದೆ ಎಂದು ರವಿ ಕಾಳಪ್ಪ ಹೇಳಿದರು.
::: ಕಿತ್ತಳೆ ತಳಿ ಅಭಿವೃದ್ಧಿಗೆ ಯೋಜನೆ :::
ಕೊಡಗಿನಲ್ಲಿ ದಶಕದ ಹಿಂದೆ ಹೇರಳವಾಗಿ ಬೆಳೆಯಲಾಗುತ್ತಿದ್ದ ಕಿತ್ತಳೆ ದೇಶ ವಿದೇಶಗಳಲ್ಲಿ ಪ್ರಸಿದ್ಧಿ ಪಡೆದಿತ್ತು, ಇಂದಿಗೂ ಅದರ ಮಹತ್ವ, ಬೇಡಿಕೆ ಹೆಚ್ಚಿನ ಪ್ರಮಾಣದಲ್ಲೇ ಇದೆ. ಆದರೆ ಕೊಡಗಿನಲ್ಲಿ ಮೂಲ ಕಿತ್ತಳೆ ಬೆಳೆಯುವವರ ಸಂಖ್ಯೆ ಗಣನೀಯವಾಗಿ ಕ್ಷೀಣಿಸಿದೆ. ತನ್ನದೇ ಆದ ವಿಶೇಷ ರುಚಿ, ಬಣ್ಣ, ಗಾತ್ರ, ಸುವಾಸನೆಯನ್ನು ಹೊಂದಿರುವ ಕೊಡಗಿನ ಕಿತ್ತಳೆ ಅಳಿವಿನಂಚಿಗೆ ಸಾಗುತ್ತಿರುವುದು ನಿಜಕ್ಕೂ ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಈ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಿರುವ ಕರ್ನಾಟಕ ಜೀವ ವೈವಿಧ್ಯ ಮಂಡಳಿ ಕೊಡಗಿನ ಕಿತ್ತಳೆ ತಳಿಯ ಅಭಿವೃದ್ಧಿಗಾಗಿ ಯೋಜನೆಯನ್ನು ಹಮ್ಮಿಕೊಂಡಿದೆ. ಜಿಲ್ಲೆಯಲ್ಲಿ ಪ್ರಸ್ತುತ ಮೂಲ ತಳಿಯ ಕಿತ್ತಳೆ ಬೆಳೆಯುತ್ತಿರುವವರನ್ನು ಗುರುತಿಸಿ, ಅವರಿಂದ ಕಿತ್ತಳೆ ಹಣ್ಣುಗಳನ್ನು ಸಂಗ್ರಹಿಸಿ, ಅದರಿಂದ ಬೀಜ ತೆಗೆದು, ಸಸಿ ಉತ್ಪಾದನೆ ಮಾಡಿ ರೈತರಿಗೆ ವಿತರಿಸುವ ಯೋಜನೆ ಇದೆ.
ಕಿತ್ತಳೆಗೆ ಬಾಧಿಸುವ ರೋಗ ಬಾಧೆ ನಿಯಂತ್ರಣಕ್ಕೆ ಕ್ರಮ ಕೊಡಗಿನ ಕಿತ್ತಳೆಗೆ ಉತ್ತಮ ಮಾರುಕಟ್ಟೆ ಒದಗಿಸುವ ಬಗ್ಗೆಯೂ ಯೋಜನೆ ಹಾಕಿಕೊಳ್ಳಲಾಗಿದೆ. ಚೆಟ್ಟಳ್ಳಿ ತೋಟಗಾರಿಕಾ ಸಂಶೋಧನಾ ಕೇಂದ್ರ, ತೋಟಗಾರಿಕೆ ಇಲಾಖೆ ಕೊಡಗು ಜಿಲ್ಲೆ ಮತ್ತು ಪೊನ್ನಂಪೇಟೆ ಅರಣ್ಯ ಕಾಲೇಜು ಸಹಭಾಗಿತ್ವದಲ್ಲಿ ಶೀಘ್ರದಲ್ಲಿ ಈ ಯೋಜನೆಯನ್ನು ಕಾರ್ಯರೂಪಕ್ಕೆ ತರಲಾಗುವುದು. ಮಹತ್ವಾಕಾಂಕ್ಷೆಯ ಈ ಯೋಜನೆಗೆ ಜಿಲ್ಲೆಯ ಬೆಳೆಗಾರರು ಸಹಕಾರ ನೀಡಬೇಕೆಂದು ರವಿಕಾಳಪ್ಪ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ವಕ್ತಾರ ಮಹೇಶ್ ಜೈನಿ, ಜಿಲ್ಲಾ ಉಪಾಧ್ಯಕ್ಷ ಅರುಣ್ ಕುಮಾರ್, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಉಮೇಶ್ ಸುಬ್ರಮಣಿ, ಮಂಡಳಿಯ ಪ್ರಮುಖ ಭೀಮಯ್ಯ ಹಾಗೂ ಸದಸ್ಯ ಕುಶಾಲಪ್ಪ ಉಪಸ್ಥಿತರಿದ್ದರು.