ಕುಶಾಲನಗರ ನ್ಯಾಯಾಲಯ ಸಂಕೀರ್ಣ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ

ಮಡಿಕೇರಿ ಮಾ.2 : ಜಿಲ್ಲಾ ನ್ಯಾಯಾಂಗ, ಲೋಕೋಪಯೋಗಿ ಇಲಾಖೆ ಮತ್ತು ವಕೀಲರ ಸಂಘದ ಸಂಯುಕ್ತಾಶ್ರಯದಲ್ಲಿ ನೂತನ ತಾಲ್ಲೂಕು ಕೇಂದ್ರ ಕುಶಾಲನಗರದಲ್ಲಿ ಮಾ.4 ರಂದು 12.50 ಕೋಟಿ ರೂ. ವೆಚ್ಚದ ನ್ಯಾಯಾಲಯ ಸಂಕೀರ್ಣ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಲಿದೆ ಎಂದು ಕುಶಾಲನಗರ ವಕೀಲರ ಸಂಘದ ಅಧ್ಯಕ್ಷ ಆರ್.ಕೆ.ನಾಗೇಂದ್ರ ಅವರು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಅಂದು ಬೆಳಗ್ಗೆ 11.30 ಗಂಟೆಗೆ ಕುಶಾಲನಗರದ ಪ್ರವಾಸಿ ಮಂದಿರದ ಬಳಿಯ 1.27 ಏಕರೆ ಪ್ರದೇಶದಲ್ಲಿ ನಿರ್ಮಾಣವಾಗಲಿರುವ ನ್ಯಾಯಾಲಯ ಕಟ್ಟಡ ಸಂಕೀರ್ಣಕ್ಕೆ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಎ.ಎಸ್.ಬೋಪಣ್ಣ ಶಿಲಾನ್ಯಾಸವನ್ನು ನೆರವೇರಿಸಲಿದ್ದಾರೆ. ರಾಜ್ಯ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಪ್ರಸನ್ನ ಬಿ.ವರಾಳೆÉ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ತಿಳಿಸಿದರು.
ವಿಶೇಷ ಆಹ್ವಾನಿತರಾಗಿ ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳು ಹಾಗೂ ಕೊಡಗಿನ ಆಡಳಿತಾತ್ಮಕ ನ್ಯಾಯಮೂರ್ತಿಗಳಾದ ವಿ. ಶ್ರೀಶಾನಂದ, ರಾಜ್ಯ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಎಂ.ಜಿ.ಶುಕುರೆ ಕಮಲ್, ಸಿ.ಎಂ. ಪೂಣಚ್ಚ, ರಾಜ್ಯ ಉಚ್ಚ ನ್ಯಾಯಾಲಯದ ಮಹಾ ವಿಲೇಖನಾಧಿಕಾರಿಗಳಾದ ಕೆ.ಎಸ್. ಭರತ್ ಕುಮಾರ್, ಕೊಡಗು ಜಿಲ್ಲಾ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎಂ.ಭೃಂಗೇಶ್ ಪಾಲ್ಗೊಳ್ಳಿದ್ದಾರೆಂದು ಮಾಹಿತಿ ನೀಡಿದರು.
ಕುಶಾಲನಗರ ವಕೀಲರ ಸಂಘದ ಅಧ್ಯಕ್ಷನಾಗಿರುವ ತಾನು ಸೇರಿದಂತೆ ಸಂಘದ ಕಾರ್ಯದರ್ಶಿ ಕೆ.ಬಿ.ಮೋಹನ್, ಲೋಕೋಪಯೋಗಿ ಇಲಾಖಾ ಕಾರ್ಯಪಾಲಕ ಅಭಿಯಂತರರಾದ ನಾಗರಾಜು ಡಿ., ಜಿಲ್ಲೆಯ ಐದು ವಕೀಲರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆಂದು ಮಾಹಿತಿಯನ್ನಿತ್ತರು.
::: 11 ತಿಂಗಳಲ್ಲಿ ಕಟ್ಟಡ ನಿರ್ಮಾಣ :::
ಉದ್ದೇಶಿತ ನೂತನ ನ್ಯಾಯಾಲಯ ಸಂಕೀರ್ಣ ಕಟ್ಟಡ ನಿರ್ಮಾಣದ ಕಾಲಾವಧಿ 11 ತಿಂಗಳದ್ದಾಗಿದೆ. ನೂತನ ನ್ಯಾಯಾಲಯ ಕಟ್ಟಡ ಎರಡು ಮಹಡಿಯದ್ದಾಗಿದ್ದು, ಇದರಲ್ಲಿ ಎರಡು ನ್ಯಾಯಾಲಯ ಕಾರ್ಯ ಕಲಾಪಗಳನ್ನು ನಡೆಸುವ ಸಭಾಂಗಣ ಇರಲಿದೆಯೆಂದು ಆರ್.ಕೆ. ನಾಗೇಂದ್ರ ಅವರು ಮಾಹಿತಿ ನೀಡಿದರು.
ಕುಶಾಲನಗರದಲ್ಲಿ ನ್ಯಾಯಾಲಯ ಸ್ಥಾಪನೆಯಾಗಬೇಕೆನ್ನುವ ಹೋರಾಟ 2005 ರಿಂದ ಆರಂಭಗೊಂಡಿತ್ತು. ಇದರ ಫಲಶ್ರುತಿಯಾಗಿ 2013ರಲ್ಲಿ ಕುಶಾಲನಗರದಲ್ಲಿ ಸಂಚಾರಿ ನ್ಯಾಯಪೀಠ ಸ್ಥಾಪನೆಯಾಯಿತು. ಸಿದ್ದರಾಮಯ್ಯ ಅವರು ಮುಖ್ಯ ಮಂತ್ರಿಗಳಾಗಿದ್ದ 2015 ರಲ್ಲಿ ಶಾಶ್ವತ ನ್ಯಾಯಾಲಯ ಅನುಮೋದನೆ ದೊರಕಿತ್ತು. ಇದೀಗ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ಕಾರ್ಯ ನಡೆಯುತ್ತಿರುವುದಾಗಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕುಶಾಲನಗರ ವಕೀಲರ ಸಂಘದ ಕಾರ್ಯದರ್ಶಿ ಕೆ.ಬಿ.ಮೋಹನ್, ಖಜಾಂಚಿ ಎಸ್.ಕೆ.ಮಂಜುನಾಥ್ ಹಾಗೂ ನಿರ್ದೇಶಕ ಹೆಚ್.ಎನ್.ಸುಧಾಕರ್ ಉಪಸ್ಥಿತರಿದ್ದರು.
