Advertisement
9:26 AM Sunday 3-December 2023

ಬೆಲೆ ಏರಿಕೆಯ ಮೂಲಕ ದೇಶದ ಜನರಿಗೆ ಅನ್ಯಾಯ : ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಆರೋಪ

02/03/2023

ಮಡಿಕೇರಿ ಮಾ.2 : ಕಳೆದ ಒಂಭತ್ತು ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ನೇತೃತ್ವದ ಸರ್ಕಾರ ಡೀಸೆಲ್, ಪೆಟ್ರೋಲ್ ಮತ್ತು ಅಡುಗೆ ಅನಿಲದ ಬೆಲೆಯನ್ನು 47 ಬಾರಿ ಹೆಚ್ಚಿಸುವ ಮೂಲಕ ದೇಶದ ಜನರಿಗೆ ಅನ್ಯಾಯ ಮಾಡಿದೆ ಎಂದು ಕೆಪಿಸಿಸಿ ವಕ್ತಾರರು ಹಾಗೂ ಜಿಲ್ಲಾ ಉಸ್ತುವಾರಿ ಎಂ. ಲಕ್ಷ್ಮಣ್ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸ್ತುತ ಅಡುಗೆ ಅನಿಲದ ದರವನ್ನು ಏಕಾಏಕಿ ಹೆಚ್ಚಳ ಮಾಡಿರುವ ಕ್ರಮವನ್ನು ಕಾಂಗ್ರೆಸ್ ತೀವ್ರವಾಗಿ ಖಂಡಿಸುತ್ತದೆ. ಕಚ್ಚಾ ತೈಲದ ದರ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಬ್ಯಾರೆಲ್‍ಗೆ 77 ಡಾಲರ್ ಇದೆ. ಇದರಿಂದ ಅನಿಲ ಉತ್ಪಾದನೆಗೆ ಕೇವಲ 450 ರೂ. ತಗುಲುತ್ತದೆ. ಆದರೆ, ಇಂದು ಪ್ರತಿ ಅಡುಗೆ ಸಿಲಿಂಡರ್‍ನಿಂದ ಹೆಚ್ಚುವರಿ 750 ರೂ.ಗಳನ್ನು ಮತ್ತು ಕಮರ್ಷಿಯಲ್ ಸಿಲಿಂಡರ್‍ನಿಂದ 1250 ರೂ. ಲಾಭವನ್ನು ಕೇಂದ್ರ ಪಡೆಯುತ್ತಿದೆ ಎಂದು ಟೀಕಿಸಿದರು.
ಉತ್ಪಾದನಾ ವೆಚ್ಚಕ್ಕಿಂತ ಅತೀ ಹೆಚ್ಚಿನ ದರವನ್ನು ಪೆಟ್ರೋಲ್ ಮತ್ತು ಡೀಸೆಲ್ ಗೆ ನಿಗದಿ ಮಾಡುವ ಮೂಲಕ ಕೇಂದ್ರ ಜನ ಸಾಮಾನ್ಯರನ್ನು ಲೂಟಿ ಮಾಡುತ್ತಿದೆ. ಕೇಂದ್ರ್ರದಲ್ಲಿ ಕಾಂಗ್ರೆಸ್‍ನ ಮನಮೋಹನ್ ಸಿಂಗ್ ಅವರು ಅಧಿಕಾರದಲ್ಲಿ ಇದ್ದ 2011 ರಲ್ಲಿ ಅಡುಗೆ ಅನಿಲದ ದರ 390 ರೂ.ಗಳಿತ್ತು. ಇದು 2014 ಕ್ಕೆ 450 ರೂ.ಗಳಿಗಷ್ಟೆ ಏರಿತ್ತು. ಆ ಹಂತದಲ್ಲಿ ಅಡುಗೆ ಅನಿಲ ದರವನ್ನು 15 ರೂ. ಹೆಚ್ಚಿಸದ ಸಂದರ್ಭ ಬಿಜೆಪಿಯ ಸ್ಮೃತಿ ಇರಾನಿ ಅವರು, ದರ ಹೆಚ್ಚಳ ವಿರೋಧಿಸಿ ‘ವಾಟ್ ಎ ಶೇಮ್’ ಎಂದು ಕೇಂದ್ರವನ್ನು ಹೀಗಳೆದು ಟ್ವೀಟ್ ಮಾಡಿದ್ದರು, ಈಗ ಅದು ಅವರಿಗೆ ಅನ್ವಯಿಸುವುದಿಲ್ಲವೆ ಎಂದು ಪ್ರಶ್ನಿಸಿದರು.
ಎಐಸಿಸಿ ಅಧ್ಯಕ್ಷರಾದ ಖರ್ಗೆ ಅವರನ್ನು ಕಾಂಗ್ರೆಸ್ ಸರಿಯಾಗಿ ನಡೆಸಿಕೊಂಡಿಲ್ಲವೆಂದು ಆಪಾದಿಸುವ ಬಿಜೆಪಿ, ಈ ಹಿಂದೆ ಬಿಜೆಪಿಗಾಗಿ ಶ್ರಮಿಸಿದ್ದ ಎಲ್.ಕೆ. ಅಡ್ವಾಣಿ, ಮುರುಳಿ ಮನೋಹರ್ ಜೋಷಿ, ಯಶ್ವಂತ್ ಸಿನ್ಹ ಅವರನ್ನು ಹೇಗೆ ನಡೆಸಿಕೊಂಡಿದೆ, ಅವರು ಎಲ್ಲಿದ್ದಾರೆಂದು ಲಕ್ಷ್ಮಣ್ ಪ್ರಶ್ನಿಸಿ, ಇಂದು ಲಿಂಗಾಯಿತ ಮತಗಳು ಕೈತಪ್ಪುವ ಭೀತಿಯಿಂದ ಯಡಿಯೂರಪ್ಪ ಅವರನ್ನು ಹಾಡಿಹೊಗಳುತ್ತಿರುವುದಾಗಿ ನುಡಿದರು.
::: ವೇತನ ಹೆಚ್ಚಳ ಪ್ರಹಸನ :::
ರಾಜ್ಯ ಸರ್ಕಾರಿ ನೌಕರರ ವೇತನವನ್ನು ಶೇ.17 ರಷ್ಟು ಹೆಚ್ಚಿಸಲಾಗಿದೆಯೆಂದು ರಾಜ್ಯ ಸರ್ಕಾರ ಘೋಷಣೆ ಮಾಡಿ, ಅದಕ್ಕೆ ನೌಕರರರ ಸಂಘದ ಷಡಕ್ಷರಿ ಅವರು ಮುಷ್ಕರ ಹಿಂದಕ್ಕೆ ತೆಗೆದುಕೊಂಡ ಪ್ರಹಸನ ನಡೆದಿದೆ. ಶೀಘ್ರವೇ ಚುನಾವಣಾ ಘೋಷಣೆಯಾಗುವುದರಿಂದ ಈ ಘೋಷಣೆ ಜಾರಿಯಾಗುವುದೇ ಅನುಮಾನವೆಂದು ಎಂ.ಲಕ್ಷ್ಮಣ್ ಆರೋಪಿಸಿದರು.
ನೌಕರರ ಸಂಘದ ಅಧ್ಯಕ್ಷರು ಮುಷ್ಕರದಿಂದ ಹಿಂದಕ್ಕೆ ಸರಿಯುವ ಮೂಲಕ ರಾಜ್ಯದ 10 ಲಕ್ಷ ನೌಕರರನ್ನು ವಂಚಿಸಿರುವುದಲ್ಲದೆ, ಎನ್‍ಪಿಎಸ್ ನೌಕರರನ್ನು ನಡು ನೀರಿನಲ್ಲಿ ಕೈಬಿಟ್ಟಿರುವುದಾಗಿ ಆರೋಪಿಸಿದರು.
ಬಿಜೆಪಿಯ ತಲಾ ನಾಲ್ಕು ಮಂದಿ ಸಚಿವರು ಮತ್ತು ಶಾಸಕರು ಆ ಪಕ್ಷವನ್ನು ತೊರೆದು ಕಾಂಗ್ರೆಸ್‍ಗೆ ಸೇರ್ಪಡೆಯಾಗಲಿದ್ದಾರೆ ಎಂದು ಅವರು ಇದೇ ಸಂದರ್ಭ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ವಕ್ತಾರ ಹೆಚ್.ಎಸ್.ಚಂದ್ರಮೌಳಿ, ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕೆ.ಕೆ. ಮಂಜುನಾಥ್ ಕುಮಾರ್, ಮಾಜಿ ಸಚಿವ ಬಿ.ಎ.ಜೀವಿಜಯ, ಮಾಜಿ ಎಂಎಲ್‍ಸಿ ವೀಣಾ ಅಚ್ಚಯ್ಯ ಹಾಗೂ ಮೈಸೂರು ಜಿ.ಪಂ ಮಾಜಿ ಅಧ್ಯಕ್ಷ ಬಿ.ಎನ್.ರಾಮು ಉಪಸ್ಥಿತರಿದ್ದರು.