Advertisement
9:07 AM Sunday 3-December 2023

ಮಡಿಕೇರಿಯಲ್ಲಿ ಗ್ಯಾರಂಟಿ ಕಾರ್ಡ್ ಅಭಿಯಾನ : ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬಿಜೆಪಿ ಸರ್ಕಾರದ ಭ್ರಷ್ಟಾಚಾರ ಬಯಲು : ರಣ್‍ದೀಪ್ ಸಿಂಗ್ ಸುರ್ಜೇವಾಲ

02/03/2023

ಮಡಿಕೇರಿ ಮಾ.2 : ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಬಿಜೆಪಿ ಸರ್ಕಾರದ ಭ್ರಷ್ಟಾಚಾರವನ್ನು ಬಯಲಿಗೆಳೆದು ತನಿಖೆ ನಡೆಸಲಾಗುವುದು ಎಂದು ರಾಷ್ಟ್ರೀಯ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ರಾಜ್ಯ ಉಸ್ತುವಾರಿ ರಣ್‍ದೀಪ್ ಸಿಂಗ್ ಸುರ್ಜೇವಾಲ ತಿಳಿಸಿದ್ದಾರೆ.
ಮಡಿಕೇರಿಯ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ “ಕಾಂಗ್ರೆಸ್ ಗ್ಯಾರಂಟಿ ಕಾರ್ಡ್” ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಬಿಜೆಪಿ ಸರ್ಕಾರ ಕರ್ನಾಟಕವನ್ನು ಲೂಟಿ ಮಾಡುತ್ತಿದೆ ಎಂದು ಆರೋಪಿಸಿದರು.
ದೇಶವ್ಯಾಪಿ ರಾಜ್ಯ ಬಿಜೆಪಿ ಸರ್ಕಾರ ಶೇ.40 ಕಮಿಷನ್ ಸರ್ಕಾರ ಎನ್ನುವ ಅಪಖ್ಯಾತಿಗೆ ಪಾತ್ರವಾಗಿದೆ. ರಾಜ್ಯ ಗುತ್ತಿಗೆದಾರರ ಸಂಘ ಶೇ.40 ಕಮಿಷನ್ ಕುರಿತು ಖುದ್ದು ಪ್ರಧಾನಮಂತ್ರಿಗಳಿಗೆ ಪತ್ರ ಬರೆದು ದೂರಿಕೊಂಡಿದ್ದಾರೆ. ಈ ಆರೋಪ ಕೇಳಿ ಬಂದ ನಂತರ ಎಂಟು ಬಾರಿ ಪ್ರಧಾನಮಂತ್ರಿಗಳು ಕರ್ನಾಟಕಕ್ಕೆ ಬಂದು ಹೋಗಿದ್ದಾರೆ. ಆದರೆ ಎಲ್ಲೂ ಭ್ರಷ್ಟ ಸರ್ಕಾರದ ವಿರುದ್ಧ ಧ್ವನಿ ಎತ್ತಿಲ್ಲ.
ರಾಜ್ಯದ ಗುತ್ತಿಗೆದಾರರು ಮಾತ್ರವಲ್ಲದೆ ವಿವಿಧ ಕ್ಷೇತ್ರಗಳ ಪ್ರಮುಖರು ಕೂಡ ಕಮಿಷನ್ ಸರ್ಕಾರ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಖುದ್ದು ಮಠಾಧೀಶರುಗಳೇ ನಮ್ಮ ಬಳಿ ಶೇ.30 ಕಮಿಷನ್ ಕೇಳಿದ್ದಾರೆ ಎಂದು ಆರೋಪಿಸಿದ್ದಾರೆ. ಆದರೆ ಪ್ರಧಾನಮಂತ್ರಿಗಳು ಮಾತ್ರ ಏನೂ ನಡೆದೇ ಇಲ್ಲ ಎನ್ನುವ ರೀತಿಯಲ್ಲಿ ಮೌನಕ್ಕೆ ಶರಣಾಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬಿಜೆಪಿಯ ಸಕ್ರೀಯ ಕಾರ್ಯಕರ್ತ ಹಾಗೂ ಗುತ್ತಿಗೆದಾರ ಸಂತೋಷ್ ಪಾಟೀಲ್ ಕಮಿಷನ್ ಹಾವಳಿಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತನ್ನ ಪಕ್ಷದವರಿಂದಲೇ ತನಗೆ ಅನ್ಯಾಯವಾಗುತ್ತಿದೆ ಎಂದು ಬೇಸತ್ತು ಅವರು ಸಾವಿಗೆ ಶರಣಾಗಿದ್ದಾರೆ. ಇದೇ ರೀತಿ ಗುತ್ತಿಗೆದಾರರಾದ ರಾಜೇಂದ್ರ ಹಾಗೂ ಪ್ರಶಾಂತ್ ಎಂಬುವವರುಗಳು ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತಪಟ್ಟ ಇವರುಗಳ ಮನೆಗಳಿಗೆ ಮುಖ್ಯಮಂತ್ರಿಗಳಾಗಲಿ, ಸಚಿವರಾಗಲಿ ಅಥವಾ ಬಿಜೆಪಿ ಮುಖಂಡರಾಗಲಿ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿಲ್ಲ ಎಂದು ರಣ್‍ದೀಪ್ ಸಿಂಗ್ ಸುರ್ಜೇವಾಲ ಆರೋಪಿಸಿದರು.
ಪ್ರಧಾನಮಂತ್ರಿಗಳು “ನಾವು ತಿನ್ನುವುದಿಲ್ಲ, ತಿನ್ನಲು ಬಿಡುವುದಿಲ್ಲ” ಎಂದು ಭ್ರಷ್ಟಾಚಾರ ವಿರೋಧಿಯಂತೆ ಘೋಷಣೆ ಮಾಡುತ್ತಾರೆ. ಆದರೆ ಅವರದ್ದೇ ಪಕ್ಷದ ನೇತೃತ್ವದ ಕರ್ನಾಟಕ ಸರ್ಕಾರ ರಾಜ್ಯವನ್ನೇ ಲೂಟಿ ಮಾಡುತ್ತಿದೆ. ಸರ್ಕಾರಿ ಹುದ್ದೆಗಳನ್ನು ಮಾರಾಟಕ್ಕಿಟ್ಟಿದೆ, ವರ್ಗಾವಣೆ ದಂಧೆ ನಡೆಯುತ್ತಿದೆ. 8 ಸಚಿವರು ಹಾಗೂ 17 ಶಾಸಕರ ವಿರುದ್ಧ ಭ್ರಷ್ಟಾಚಾರದ ಆರೋಪವಿದೆ. ಪಿಎಸ್‍ಐ ನೇಮಕಾತಿ ಹಗರಣದಲ್ಲಿ ಹಿರಿಯ ಪೊಲೀಸ್ ಅಧಿಕಾರಿಯೇ ಆರೋಪಿಯಾಗಿದ್ದಾರೆ.
ಬಿಜೆಪಿ ಸರ್ಕಾರ ನಡೆಸಿರುವ ಭ್ರಷ್ಟಾಚಾರಕ್ಕೆ ಸೂಕ್ತ ಸಾಕ್ಷ್ಯಾಧಾರಗಳಿದ್ದರೂ ಪ್ರಧಾನಮಂತ್ರಿಗಳು ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ. ಇದು ಡಬ್ಬಲ್ ಇಂಜಿನ್ ಸರ್ಕಾರವಲ್ಲ, ಡಬ್ಬಲ್ಲ ಭ್ರಷ್ಟಾಚಾರದ ಸರ್ಕಾರ ಎಂದು ಅವರು ಟೀಕಿಸಿದರು.
ಬಿಜೆಪಿ ಸರ್ಕಾರದಿಂದ ಕರ್ನಾಟಕ ರಾಜ್ಯವನ್ನು ಉಳಿಸಬೇಕಾಗಿದೆ, ಭ್ರಷ್ಟ ವ್ಯವಸ್ಥೆಯನ್ನು ತೊಲಗಿಸಬೇಕಾಗಿದೆ. ಈ ಕಾರ್ಯವನ್ನು ಮುಂದಿನ ದಿನಗಳಲ್ಲಿ ಅಧಿಕಾರಕ್ಕೆ ಬರುವ ಕಾಂಗ್ರೆಸ್ ಸರ್ಕಾರ ಮಾಡಲಿದೆ. ಭ್ರಷ್ಟರ ವಿರುದ್ಧ ಸೂಕ್ತ ತನಿಖೆ ಕೈಗೊಂಡು ಕ್ರಮಕ್ಕೆ ಮುಂದಾಗಲಿದೆ ಎಂದು ಸುರ್ಜೇವಾಲ ತಿಳಿಸಿದರು.
ರಾಜ್ಯದಲ್ಲಿ ಬಿಜೆಪಿ ಹೊಸದಾಗಿ ಹಿಂಸಾ ರೂಪದ ಸಂಸ್ಕøತಿಯನ್ನು ಪರಿಚಯಿಸುತ್ತಿದೆ. ಮಂಡ್ಯದಲ್ಲಿ ಸಚಿವರೊಬ್ಬರು “ಸಿದ್ದರಾಮಯ್ಯರಿಗೆ ಹೊಡೆಯಿರಿ, ಬಡೆಯಿರಿ” ಎಂದು ಪ್ರಚೋದನಾಕಾರಿ ಭಾಷಣ ಮಾಡುತ್ತಾರೆ. ಕರ್ನಾಟಕದ ಮಣ್ಣಿನ ಮಗ ಮಲ್ಲಿಕಾರ್ಜುನ ಖರ್ಗೆ ಅವರನ್ನು ಪ್ರಧಾನಮಂತ್ರಿಗಳು ಅವಮಾನಿಸುತ್ತಾರೆ. ಇದು ಸೋಲಿನ ಹತಾಶ ಮನೋಭಾವದ ಪರಿಣಾಮವಾಗಿದ್ದು, ಇದೇ ಕಾರಣಕ್ಕೆ ಬಿಜೆಪಿ ಮಂದಿ ದ್ವೇಷದ ರಾಜಕಾರಣ ಮಾಡಲು ಹೊರಟ್ಟಿದ್ದಾರೆ ಎಂದು ಟೀಕಿಸಿದರು.
ಭ್ರಷ್ಟಾಚಾರ, ದ್ವೇಷ ಮತ್ತು ಹಿಂಸೆಯ ರಾಜಕಾರಣವನ್ನು ಕೊನೆಗಾಣಿಸಲು ಎಲ್ಲರೂ ಒಗ್ಗಟ್ಟನ್ನು ಪ್ರದರ್ಶಿಸಬೇಕಾಗಿದೆ. ಆ ಮೂಲಕ ದೇಶ ಭಕ್ತಿಯನ್ನು ಪ್ರದರ್ಶಿಸಬೇಕಾಗಿದೆ ಎಂದು ಸುರ್ಜೇವಾಲ ಕರೆ ನೀಡಿದರು.
ಕೊಡಗು ಅತ್ಯಂತ ಸುಂದರ ಜಿಲ್ಲೆಯಾಗಿದೆ, ಭಾರತೀಯ ಸೇನೆಗೆ ವೀರಸೇನಾನಿಗಳನ್ನು ನೀಡಿದ ಹೆಗ್ಗಳಿಕೆ ಈ ಜಿಲ್ಲೆಯದ್ದಾಗಿದೆ. ಕ್ರೀಡಾ ಕ್ಷೇತ್ರಕ್ಕೆ ಅನೇಕ ಕ್ರೀಡಾಪಟುಗಳನ್ನು ನೀಡಿದೆ. ಈ ಧೀರರ, ಶೂರರ ನಾಡಿನಲ್ಲೂ ಸರ್ಕಾರಿ ಕಚೇರಿಗಳಲ್ಲಿ ಲಂಚಾವತಾರ ಮಿತಿ ಮೀರಿರುವುದು ವಿಷಾದನೀಯ ಎಂದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ್ ಹಾಗೂ ಪಕ್ಷದ ಜಿಲ್ಲಾ ಉಸ್ತುವಾರಿ ಎಂ.ಲಕ್ಷ್ಮಣ್ ಮಾತನಾಡಿ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ವಾಗ್ಧಾಳಿ ನಡೆಸಿದರು.
ಕೇರಳ ಶಾಸಕ ರೋಜಿ ಜಾನ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ ಮಾಜಿ ಸಚಿವ ಬಿ.ಎ.ಜೀವಿಜಯ, ಮಾಜಿ ಎಂಎಲ್‍ಸಿ ವೀಣಾಅಚ್ಚಯ್ಯ, ಜಿಲ್ಲಾ ಪ್ರಚಾರ ಸಮಿತಿಯ ಅಧ್ಯಕ್ಷ ಟಿ.ಪಿ.ರಮೇಶ್, ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷ ಎ.ಎಸ್.ಪೊನ್ನಣ್ಣ, ಪ್ರಮುಖರಾದ ಹೆಚ್.ಎಸ್.ಚಂದ್ರಮೌಳಿ, ಡಾ.ಮಂಥರ್ ಗೌಡ, ಹರಪಳ್ಳಿ ರವೀಂದ್ರ, ಕೆ.ಪಿ.ಚಂದ್ರಕಲಾ ಮತ್ತಿತರರು ಉಪಸ್ಥಿತರಿದ್ದರು.