Advertisement
12:50 PM Monday 4-December 2023

ಸಹಕಾರ ಸಂಘಗಳ ಅಧ್ಯಕ್ಷರುಗಳಿಗೆ ರಾಜ್ಯಮಟ್ಟದ ಕಾರ್ಯಕ್ರಮ : ಸಹಕಾರ ಕ್ಷೇತ್ರಕ್ಕೆ ವಿಧಾನಪರಿಷತ್ ಸ್ಥಾನ ಮೀಸಲಿರಿಸಬೇಕು : ಎ.ಕೆ. ಮನು ಮುತ್ತಪ್ಪ

02/03/2023

ಮಡಿಕೇರಿ ಮಾ.2 : ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಸಂಯುಕ್ತಾಶ್ರಯದಲ್ಲಿ ಆದಾಯ ತೆರಿಗೆ, ಜಿ.ಎಸ್.ಟಿ., ಮತ್ತು ಸಹಕಾರ ಸಂಘಗಳ ಚುನಾವಣೆ ಕುರಿತು ಜಿಲ್ಲೆಯ ಸಹಕಾರ ಸಂಘಗಳ ಅಧ್ಯಕ್ಷರುಗಳಿಗೆ ರಾಜ್ಯಮಟ್ಟದ ವಿಶೇಷ ಕಾರ್ಯಕ್ರಮ ನಡೆಯಿತು.

ನಗರದ ಹೊಟೇಲ್ ಮಯೂರ ವ್ಯಾಲಿ ವ್ಯೂ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ಹಿರಿಯ ಸಹಕಾರಿಗಳು ಹಾಗೂ ಪದ್ಮಶ್ರೀ ಪ್ರಶಸ್ತಿ ಭಾಜನರಾದ ರಾಣಿ ಮಾಚಯ್ಯ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಸಹಕಾರ ಕ್ಷೇತ್ರವು ಎಲ್ಲಾ ವರ್ಗದವರನ್ನು ಮುಕ್ತವಾಗಿ ಆಹ್ವಾನಿಸುತ್ತಿದ್ದು, ತಾನು ಸಹ ಕೋಟೆ ಮಹಿಳಾ ಸಹಕಾರ ಸಂಘ, ಮಹಿಳಾ ಪಟ್ಟಣ ಸಹಕಾರ ಬ್ಯಾಂಕ್ ಹಾಗೂ ಇನ್ನಿತರೆ ಸಹಕಾರ ಸಂಘದಲ್ಲಿ ಅಧ್ಯಕ್ಷೆಯಾಗಿ, ನಿರ್ದೇಶಕಿಯಾಗಿ ಕಾರ್ಯನಿರ್ವಹಿಸಿದ್ದೇನೆ. ಆ ಮೂಲಕ ಸಮಾಜ ಸೇವೆಯಲ್ಲಿ ಸಹ ತೊಡಗಿಸಿಕೊಳ್ಳಲು ಸಹಕಾರಿಯಾಯಿತೆಂದು ತಿಳಿಸಿದರು.
ತಾನು ಸಲ್ಲಿಸಿದ ಸೇವೆಗಾಗಿ ಭಾರತ ಸರ್ಕಾರವು ‘ಪದ್ಮಶ್ರೀ’ ಪ್ರಶಸ್ತಿಗೆ ಗುರುತಿಸಿರುವುದು ತನಗೆ ಹಾಗೂ ಪರೋಕ್ಷವಾಗಿ ಬೆಂಬಲವಾಗಿ ನಿಂತವರಿಗೂ, ವಿದ್ಯಾರ್ಥಿಗಳಿಗೂ, ಪೋಷಕರಿಗೆ ಎಲ್ಲರಿಗೂ ಸಂದ ಗೌರವವೆಂದು ಹೇಳಿದರು.
ಸಣ್ಣ ಜಿಲ್ಲೆಯಾದ ಕೊಡಗು ಜಿಲ್ಲೆಯನ್ನು ಸಹ ಇತ್ತೀಚೆಗೆ ಪ್ರಶಸ್ತಿಗೆ ಪರಿಗಣಿಸುತ್ತಿರುವುದು ಉತ್ತಮ ಬೆಳವಣಿಗೆ ಎಂದು ತಿಳಿಸುತ್ತಾ ತಾನು ಈ ನೆಲದ ಕಲೆ, ಸಂಸ್ಕೃತಿಯನ್ನು ಬೆಳೆಸುವಲ್ಲಿ ಅಲ್ಪ ಕಾಣಿಕೆಯನ್ನು ನೀಡಿದ್ದು ಜಿಲ್ಲೆಯ ಜನತೆ ಕಲೆ, ಸಂಸ್ಕೃತಿಯನ್ನು ಬೆಳೆಸಬೇಕಾಗಿ ತಿಳಿಸುತ್ತಾ, ಕಾರ್ಯಕ್ರಮದಲ್ಲಿ ಸನ್ಮಾನಿಸಿದಕ್ಕಾಗಿ ಯೂನಿಯನ್‍ನ ಅಧ್ಯಕ್ಷರು ಮತ್ತು ಸಮಸ್ತ ಆಡಳಿತ ಮಂಡಳಿ ಸದಸ್ಯರಿಗೆ ಧನ್ಯವಾದ ಸಲ್ಲಿಸಿದರು.

ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕರಾದ ಜಯಕರಶೆಟ್ಟಿ ಇಂದ್ರಾಳಿ ಮಾತನಾಡಿ, ಪ್ರತಿಯೊಂದು ಸಹಕಾರ ಸಂಘವು ಕಾಯ್ದೆ-ಕಾನೂನಿನ ಚೌಕಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಕಾಯ್ದೆ-ಕಾನೂನಿನಲ್ಲಾಗುವ ಬದಲಾವಣೆಗಳ ಅರಿವು ಇರಬೇಕಾಗುತ್ತದೆ. ಅಂತೆಯೇ ಪ್ರತಿಯೊಂದು ಸಂಘವು ಇಂದು ಜಿ.ಎಸ್.ಟಿ. ಮತ್ತು ಆದಾಯ ತೆರಿಗೆಯ ವ್ಯಾಪ್ತಿಗೊಳಪಡುವುದರಿಂದ ಅವುಗಳ ಜ್ಞಾನ ಇರಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಕೊಡಗು ಜಿಲ್ಲೆಯ ಸಹಕಾರ ಸಂಘಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಅವುಗಳು ಇನ್ನಷ್ಟು ಪ್ರಗತಿ ಸಾಧಿಸಿ ದೇಶಕ್ಕೆ ಕೊಡುಗೆಯನ್ನು ನೀಡಲಿ ಎಂದು ಶುಭ ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ, ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಎ.ಕೆ.ಮನು ಮುತ್ತಪ್ಪ, ಜಿಲ್ಲೆಯಲ್ಲಿ ಸಹಕಾರ ಸಂಘಗಳ ಅಧ್ಯಕ್ಷರುಗಳಿಗೆ ರಾಜ್ಯಮಟ್ಟದ ವಿಶೇಷ ತರಬೇತಿ ಕಾರ್ಯಕ್ರಮವನ್ನು ಏರ್ಪಡಿಸುತ್ತಿದ್ದು, ಸದರಿ ಕಾರ್ಯಕ್ರಮದಲ್ಲಿ ಜಿ.ಎಸ್.ಟಿ. ಮತ್ತು ಆದಾಯ ತೆರಿಗೆ ಕುರಿತು ಉಪನ್ಯಾಸ ನೀಡಲಾಗುತ್ತಿದೆ. ಈ ವಿಷಯಗಳು ನಮ್ಮ ದೈನಂದಿನ ವ್ಯವಹಾರದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಿದ್ದು, ಸಂಘಗಳು ಕಾನೂನುಬದ್ಧವಾಗಿ ಪಾವತಿಸಬೇಕಾದಂತಹ ತೆರಿಗೆಗಳ ಕುರಿತು ಮಾಹಿತಿಯನ್ನು ಅರಿತುಕೊಳ್ಳುವಂತಾಗಬೇಕು.
ಆಡಳಿತ ಮಂಡಳಿ ಸದಸ್ಯರು ಸದರಿ ಎಲ್ಲಾ ಮಾಹಿತಿಗಳನ್ನು ಸೂಕ್ಷ್ಮವಾಗಿ ತಿಳಿದುಕೊಂಡಲ್ಲಿ ಸಂಘದ ಸುಲಲಿತ ಬೆಳವಣಿಗೆ ಸಾಧ್ಯವಾಗುತ್ತದೆ. ಅಂತೆಯೇ ಈ ಬಾರಿ ಅನೇಕ ಸಂಘಗಳಿಗೆ ಚುನಾವಣೆ ಇರುವುದರಿಂದ ಯಾವುದೇ ಗೊಂದಲಗಳಾಗದ ರೀತಿಯಲ್ಲಿ ಕಾರ್ಯನಿರ್ವಹಿಸಲು ಸಹಕಾರಿಯಾಗಲೆಂದು ಇಂದು ಕಾರ್ಯಕ್ರಮವನ್ನು ಆಯೋಜಿಸಿದ್ದು ತರಬೇತಿ ಮತ್ತು ಶಿಕ್ಷಣ ಕಾರ್ಯಕ್ರಮದ ಪ್ರಯೋಜನ ಪಡೆದುಕೊಳ್ಳಬೇಕೆಂದು ಹೇಳಿದರು. ಅಲ್ಲದೆ ವಿಧಾನಪರಿಷತ್ ಸದಸ್ಯ ಸ್ಥಾನಕ್ಕೆ ಸಹಕಾರ ಕ್ಷೇತ್ರದಿಂದಲೂ ಆಯ್ಕೆ ಮಾಡುವಂತೆ ಸ್ಥಾನಗಳನ್ನು ಮೀಸಲಿರಿಸಬೇಕೆಂದು ತಿಳಿಸಿದುದನ್ನು ಹಾಜರಿದ್ದ ಎಲ್ಲಾ ಪ್ರತಿನಿಧಿಗಳು ಒಪ್ಪಿ ಈ ಕುರಿತು ನಿರ್ಣಯ ಅಂಗೀಕರಿಸಲಾಯಿತು.
ಸನ್ನದು ಲೆಕ್ಕಿಗರಾದ ಎಸ್.ವಿ. ಶಂಭುಲಿಂಗಪ್ಪ ಆದಾಯ ತೆರಿಗೆ, ಜಿ.ಎಸ್.ಟಿ., ಮತ್ತು ಸಂಘದ ಆರ್ಥಿಕತೆ ಹಾಗೂ ಸಿಬ್ಬಂದಿ ವೇತನ ಸಮನ್ವಯತೆ ಬಗ್ಗೆ ಸುದೀರ್ಘ ಉಪನ್ಯಾಸ ನೀಡಿದರು.
ಸಹಕಾರ ಸಂಘಗಳ ಚುನಾವಣೆ ಕುರಿತು ಸಹಕಾರ ಸಂಘಗಳ ಸಹಾಯಕ ನಿಬಂಧಕ ಎಂ.ಈ. ಮೋಹನ್‍ರವರು ಮಾಹಿತಿ ನೀಡಿದರು.
ವೇದಿಕೆಯಲ್ಲಿ ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಉಪಾಧ್ಯಕ್ಷ ಪಿ.ಸಿ. ಮನು ರಾಮಚಂದ್ರ, ನಿರ್ದೇಶಕರಾದ ಎನ್.ಎ. ರವಿ ಬಸಪ್ಪ, ಪ್ರೇಮ ಸೋಮಯ್ಯ, ಕೆ.ಎಂ. ತಮ್ಮಯ್ಯ, ಪಿ.ಸಿ. ಅಚ್ಚಯ್ಯ, ಎನ್.ಎಂ. ಉಮೇಶ್ ಉತ್ತಪ್ಪ, ಪಿ.ವಿ. ಭರತ್, ಪಿ.ಬಿ.ಯತೀಶ್, ಕನ್ನಂಡ ಸಂಪತ್ ಉಪಸ್ಥಿತರಿದ್ದರು.
ಯೂನಿಯನ್ ನಿರ್ದೇಶಕ ಕೆ.ಎಸ್. ಗಣಪತಿ ಸ್ವಾಗತಿಸಿ, ವ್ಯವಸ್ಥಾಪಕಿ ಆರ್. ಮಂಜುಳ ಪ್ರಾರ್ಥಿಸಿ, ವಂದಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯೋಗೇಂದ್ರ ನಾಯಕ ಕಾರ್ಯಕ್ರಮ ನಿರೂಪಿಸಿ, ಬಿ.ಸಿ. ಅರುಣ್ ಕುಮಾರ್ ಕಾರ್ಯಕ್ರಮ ನಿರ್ವಹಣೆಗೆ ಸಹಕರಿಸಿದರು.