ವಿದ್ಯಾರ್ಥಿಗಳು ಭವಿಷ್ಯದಲ್ಲಿ ಉದ್ಯೋಗವನ್ನು ಪಡೆಯಲು ಕೌಶಲ್ಯ ಅತ್ಯಗತ್ಯ : ಮಾಳೇಟಿರ ತೃಪ್ತಿ ಬೋಪಣ್ಣ

ವಿರಾಜಪೇಟೆ ಮಾ.2 : ವಿದ್ಯಾರ್ಥಿಗಳು ಉದ್ಯೋಗದ ದೃಷ್ಟಿಯಿಂದ ಕೌಶಲ್ಯವನ್ನು ಮೈಗೂಡಿಸಿಕೊಳ್ಳಬೇಕಾದ ಅನಿವಾರ್ಯತೆಯಿದೆ ಎಂದು ಸೆಂಟ್ ಆನ್ಸ್ ಪದವಿ ಕಾಲೇಜಿನ ಪ್ರಾಂಶುಪಾಲೆ ಮಾಳೇಟಿರ ತೃಪ್ತಿ ಬೋಪಣ್ಣ ಅಭಿಪ್ರಾಯಪಟ್ಟರು.
ಕಾಲೇಜಿನ ಐಕ್ಯೂಎಸಿ ಘಟಕ, ಉದ್ಯೋಗ ಘಟಕ ಹಾಗೂ ಮಡಿಕೇರಿಯ ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ಘಟಕದ ಅಂಗಸಂಸ್ಥೆಯಾದ ಅತಿಥಿ ವೃಕ್ಷ ಶಿಕ್ಷದ ಸಹಯೋಗದಲ್ಲಿ ಕಾಲೇಜಿನ ಅಂತಿಮ ಪದವಿ ವಿದ್ಯಾರ್ಥಿಗಳಿಗೆ ಆಯೋಜಿಸಲಾದ ಉದ್ಯೋಗ ಹಾಗೂ ಕೌಶಲ್ಯ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಉದ್ಯೋಗ ಪಡೆಯುವುದು ಸವಾಲಾಗಿದ್ದು ವಿದ್ಯಾರ್ಥಿಗಳು ಸಕಲ ರೀತಿಯಲ್ಲಿ ಸಜ್ಜಾಗಿರಬೇಕು. ಮಾತ್ರವಲ್ಲದೆ ಕೌಶಲ್ಯವನ್ನು ಹೊಂದಿರಬೇಕೆಂದು ತಿಳಿಸಿದರು.
ವೃಕ್ಷ ಶಿಕ್ಷದ ಮುಖ್ಯಸ್ಥರಾದ ಶಾಲಿನಿ ಚಾಲ್ರ್ಸ್ ಮಾತನಾಡಿ, ವಿದ್ಯಾರ್ಥಿಗಳಿಗೆ ಉದ್ಯೋಗ ಪಡೆಯಲು ಇರುವ ಕೌಶಲ್ಯಗಳು ಮತ್ತು ವ್ಯಕ್ತಿತ್ವ ವಿಕಸನದ ಬಗ್ಗೆ ಮಾಹಿತಿ ನೀಡಿದರು. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗೆ ತಯರಾಗುವುದು ಹೇಗೆ ಮತ್ತು ಯಾವ ತರಬೇತಿಯನ್ನು ಪಡೆಯಬೇಕು, ಸಂವಹನ ಕೌಶಲ್ಯದ ಬಗ್ಗೆ ಉದಾಹರಣೆ ಸಮೇತ ವಿವರಿಸಿದರು.
ಈ ಸಂದರ್ಭದಲ್ಲಿ ಕಾಲೇಜಿನ ಐಕ್ಯೂಎಸಿ ಸಂಚಾಲಕಿ ಹೇಮ, ಉದ್ಯೋಗ ಕೋಶ ಘಟಕದ ಸಂಚಾಲಕಿ ಶಿಲ್ಪ ಮತ್ತು ಉಪನ್ಯಾಸಕರು ಉಪಸ್ಥಿತರಿದ್ದರು.
ಅಂತಿಮ ಪದವಿ ತರಗತಿಯ ಎಲ್ಲಾ ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.
