ಮೊಬೈಲ್ ತಪಾಸಣಾ ಘಟಕ ಲೋಕಾರ್ಪಣೆ : ಗ್ರಾಮಾಂತರ ಜನತೆಗೆ ಸುಲಭವಾಗಿ ಆರೋಗ್ಯ ಸೇವೆ ದೊರಕಲಿ : ಶಾಸಕ ಕೆ.ಜಿ.ಬೋಪಯ್ಯ

ಮಡಿಕೇರಿ ಮಾ.2 : ರೆಡ್‍ಕ್ರಾಸ್‍ನ ನೂತನ ಆರೋಗ್ಯ ತಪಾಸಣಾ ಮೊಬೈಲ್ ಘಟಕದ ಪ್ರಯೋಜನವು ಜಿಲ್ಲೆಯ ಗ್ರಾಮಾಂತರ ಪ್ರದೇಶಗಳ ಜನತೆಗೆ ಹೆಚ್ಚಿನ ರೀತಿಯಲ್ಲಿ ದೊರಕುವಂತಾಗಲಿ ಎಂದು ಶಾಸಕರಾದ ಕೆ.ಜಿ.ಬೋಪಯ್ಯ ಅವರು ಸಲಹೆ ನೀಡಿದ್ದಾರೆ.
ಭಾರತೀಯ ರೆಡ್‍ಕ್ರಾಸ್‍ನ ಕೊಡಗು ಘಟಕವು 75 ಲಕ್ಷ ರು. ವೆಚ್ಚದಲ್ಲಿ ಆರೋಗ್ಯ ತಪಾಸಣೆ, ಚಿಕಿತ್ಸೆಗೆ ಮೀಸಲಿರಿಸಿದ ಸುಸಜ್ಜಿತ ಮೊಬೈಲ್ ಚಿಕಿತ್ಸಾ ಘಟಕಕ್ಕೆ ನಗರದ ಗಾಂಧಿ ಮಂಟಪದ ಮುಂದೆ ಆಯೋಜಿತ ಸರಳ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ರೆಡ್‍ಕ್ರಾಸ್ ಕೊಡಗು ಜಿಲ್ಲೆಗೆ ನೀಡಿರುವ ಸುಸಜ್ಜಿತ ಆರೋಗ್ಯ ತಪಾಸಣಾ ಮೊಬೈಲ್ ಘಟಕವು ಆರೋಗ್ಯ ಇಲಾಖೆಗೆ ಮಹತ್ವದ ಕೊಡುಗೆಯಾಗಿದ್ದು, ಇದರ ಪ್ರಯೋಜನ ವಿವಿಧ ಇಲಾಖೆಗಳ ಸಹಕಾರದಲ್ಲಿ ಜನತೆಗೆ ದೊರಕುವಂತಾಗಬೇಕು ಎಂದು ಹೇಳಿದರು.
ಅಂತರರಾಷ್ಟ್ರೀಯ ಸೇವಾ ಸಂಸ್ಥೆಯಾಗಿರುವ ರೆಡ್‍ಕ್ರಾಸ್ ಕೊಡಗನ್ನು ಗುರುತಿಸಿ ಮೊಬೈಲ್ ಘಟಕವನ್ನು ನೀಡಿದ್ದು ಪ್ರಶಂಸನೀಯ ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್ ಮಾತನಾಡಿ, ವೈದ್ಯಕೀಯ ಕಾಲೇಜಿನ ವೈದ್ಯರ ಸಹಯೋಗದಲ್ಲಿ ಜಿಲ್ಲಾ ಆರೋಗ್ಯ ಇಲಾಖೆಯು ಔಷಧಿ ಮತ್ತು ತಾಂತ್ರಿಕ ನೆರವನ್ನು ಮೊಬೈಲ್ ಘಟಕಕ್ಕೆ ನೀಡಲಿದೆ. ಘಟಕದ ಸದುಪಯೋಗವನ್ನು ಯೋಜಿತ ರೀತಿಯಲ್ಲಿ ಪಡೆಯಲಾಗುತ್ತದೆ ಎಂದು ಭರವಸೆ ನೀಡಿದರು.
ರೆಡ್‍ಕ್ರಾಸ್ ಕೊಡಗು ಘಟಕದ ಸಭಾಪತಿ ಬಿ.ಕೆ.ರವೀಂದ್ರ ರೈ ಮಾತನಾಡಿ, ಕರ್ನಾಟಕಕ್ಕೆ ಎರಡು ಮೊಬೈಲ್ ಘಟಕವನ್ನು ಭಾರತೀಯ ರೆಡ್‍ಕ್ರಾಸ್ ನೀಡಿದ್ದು, ಕೊಡಗು ಜಿಲ್ಲೆಗೆ 1 ಘಟಕ ನೀಡಲ್ಪಟ್ಟಿದೆ. ಮುಂದಿನ ದಿನಗಳಲ್ಲಿ ಜಿಲ್ಲೆಯ ಬೇರೆ ಬೇರೆ ಕಡೆ ರಕ್ತ ಸಂಗ್ರಹ ಸೇರಿದಂತೆ ಆರೋಗ್ಯ ಸಂಬಂಧಿತ ಚಟುವಟಿಕೆಗಳಿಗೆ ಘಟಕವನ್ನು ಬಳಸಿಕೊಳ್ಳಲಾಗುತ್ತದೆ ಎಂದು ಹೇಳಿದರು. ಜಿಲ್ಲಾಧಿಕಾರಿ ಮತ್ತು ಕೊಡಗು ರೆಡ್‍ಕ್ರಾಸ್ ಸಭಾಧ್ಯಕ್ಷ ಡಾ.ಬಿ.ಸಿ.ಸತೀಶ್ ಅವರು ಘಟಕಕ್ಕೆ ನೀಡಿದ ನೆರವನ್ನು ರವೀಂದ್ರ ರೈ ಸ್ಮರಿಸಿದರು.
ರೆಡ್‍ಕ್ರಾಸ್ ಜಿಲ್ಲಾ ಉಪಾಧ್ಯಕ್ಷ ಅನಿಲ್ ಎಚ್.ಟಿ, ಕಾರ್ಯದರ್ಶಿ ಎಚ್.ಆರ್.ಮುರಳೀಧರ್, ಯೂತ್ ರೆಡ್‍ಕ್ರಾಸ್ ನಿರ್ದೇಶಕ ಎಂ.ಧನಂಜಯ್, ರೋಟರಿ ಮಿಸ್ಟಿಹಿಲ್ಸ್ ಅಧ್ಯಕ್ಷ ಪ್ರಸಾದ್ ಗೌಡ, ನಿರ್ದೇಶಕ ಬಿ.ಜಿ.ಅನಂತಶಯನ, ನಿರ್ದೇಶಕರಾದ ದರ್ಶನ್ ಬೋಪಯ್ಯ, ವಿಜಯ್ ಶೆಟ್ಟಿ, ವಿಕ್ರಂ ಶೆಟ್ಟಿ, ಉತ್ತಯ್ಯ, ಶಿಲ್ಪಾ ರೈ, ಸದಸ್ಯರು ಹಾಜರಿದ್ದರು. ರೆಡ್‍ಕ್ರಾಸ್ ಉಪಾಧ್ಯಕ್ಷ ಅನಿಲ್ ಎಚ್.ಟಿ. ಕಾರ್ಯಕ್ರಮ ನಿರೂಪಿಸಿ, ಕಾರ್ಯದರ್ಶಿ ಮುರಳೀಧರ್ ವಂದಿಸಿದರು.
