ಕೂಡಿಗೆ : ಮತದಾನದ ಅರಿವು ಕಾರ್ಯಕ್ರಮ
02/03/2023

ಕುಶಾಲನಗರ ಮಾ.2 : ಕುಶಾಲನಗರ ತಾಲ್ಲೂಕು ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮದ ಮತಗಟ್ಟೆಗಳಲ್ಲಿ ಎಲೆಕ್ಟ್ರಾನಿಕ್ ಮತ ಯಂತ್ರದಲ್ಲಿ ಮತ ಚಲಾವಣೆಯ ಬಗ್ಗೆ ಅರಿವು ಕಾರ್ಯಾಗಾರ ನಡೆಯಿತು.
ಕಳೆದ ಚುನಾವಣಾ ಸಂದರ್ಭದಲ್ಲಿ ಅತಿ ಕಡಿಮೆ ಪ್ರಮಾಣದಲ್ಲಿ ಮತದಾನವಾದ ಮತಕಟ್ಟೆಗಳ ವ್ಯಾಪ್ತಿಯಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಮತಯಂತ್ರಗಳ ಜೋಡಣೆ ಮಾಡುವ ಮೂಲಕ ಮುಕ್ತ ಮತದಾನ ಮಾಡುವ ಬಗ್ಗೆ ಅಣಕು ಪ್ರದರ್ಶನವನ್ನು ನಡೆಸಲಾಯಿತು. ಕಾವೇರಿ ನೀರಾವರಿ ನಿಗಮದ ಪುನರ್ವಸತಿ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಆಗಿರುವ ಮತದಾನ ಕೇಂದ್ರಗಳ ಸೆಕ್ಟರ್ ಅಧಿಕಾರಿ ಐ. ಕೆ ಪುಟ್ಟಸ್ವಾಮಿ ಅವರ ನೇತೃತ್ವದಲ್ಲಿ ಅಧಿಕಾರಿಗಳು ಮತಯಂತ್ರವನ್ನು ಜೋಡಣೆ ಮಾಡಿ ಮತ ಚಲಾವಣೆ ಬಗ್ಗೆ ಅರಿವು ಮೂಡಿಸಿದರು.
ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ 106, 144 ,145 146,148 149 ಮತ್ತು 150 ಕ್ರಮ ಸಂಖ್ಯೆಗಳ ಮತಕಟ್ಟೆಗಳಲ್ಲಿ ಮತದಾರರಿಗೆ ಅಣಕು ಪ್ರದರ್ಶನ ನಡೆಸಲಾಯಿತು. ಕೂಡಿಗೆ ವಿಭಾಗದ ಸೆಕ್ಟರ್ ಅಧಿಕಾರಿ ಆಗಿರುವ ಹಾರಂಗಿ ಪುನರ್ವಸತಿ ವಿಭಾಗದ ಕಾರ್ಯಪಾಲಕ ಅಭಿಯಂತರ ಐ. ಕೆ ಪುಟ್ಟಸ್ವಾಮಿ, ಕೂಡಿಗೆ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಅಂಜಲಾದೇವಿ, ಅಂಗನವಾಡಿ ಕಾರ್ಯಕರ್ತರು, ಪೋಲೀಸ್ ಇಲಾಖೆಯ ಸಿಬ್ಬಂದಿ, ಕಂದಾಯ ಇಲಾಖೆಯ ಸಿಬ್ಬಂದಿಗಳು, ಸ್ಥಳೀಯ ನಿವಾಸಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.














