Advertisement
3:25 AM Saturday 2-December 2023

ಪ್ರಣಾಳಿಕೆ ತಯಾರಿ : ಬಿಜೆಪಿಯಿಂದ ಜನಾಭಿಪ್ರಾಯ ಸಂಗ್ರಹ ಅಭಿಯಾನ

03/03/2023

ಮಡಿಕೇರಿ ಮಾ.3 : ಮುಂಬರುವ ವಿಧಾನಸಭಾ ಚುನಾವಣೆಯ ಹಿನ್ನೆಲೆ ಜನಾಭಿಪ್ರಾಯ ಪಡೆದು ಪ್ರಣಾಳಿಕೆ ತಯಾರಿಸಲು ಬಿಜೆಪಿ ಮುಂದಾಗಿದ್ದು, ಜಿಲ್ಲೆಯಾದ್ಯಂತ ಒಂದು ತಿಂಗಳ ಕಾಲ ಅಭಿಯಾನ ನಡೆಯಲಿದೆ ಎಂದು ಪ್ರಣಾಳಿಕಾ ಸಲಹಾ ಸಂಗ್ರಹ ಸಮಿತಿಯ ಸಹ ಸಂಚಾಲಕ ಡಾ.ಬಿ.ಸಿ.ನವೀನ್ ಕುಮಾರ್ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಜನಪರವಾದ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದೆ. ಈ ಬಾರಿಯ ಚುನಾವಣೆಯಲ್ಲಿ ಜನರ ಸಲಹೆ ಪಡೆದು ಪ್ರಣಾಳಿಕೆ ತಯಾರಿಸಲಾಗುವುದು ಎಂದರು.
ಶಾಸಕರು ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷರ ಮಾರ್ಗದರ್ಶನದಲ್ಲಿ ಒಂದು ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು 25 ಸಲಹಾ ಪೆಟ್ಟಿಗೆಗಳನ್ನಿರಿಸಿ, 5 ಸಾವಿರಕ್ಕಿಂತ ಹೆಚ್ಚು ಮಂದಿಯ ಸಲಹೆಗಳನ್ನು ಸಂಗ್ರಹ ಮಾಡಲಾಗುವುದು. ಮತದಾರರ ಆಕಾಂಕ್ಷೆಗಳಿಗೆ ಅನುಗುಣವಾಗಿ ಪ್ರಣಾಳಿಕೆ ತಯಾರಾಗಲಿದೆ ಎಂದು ತಿಳಿಸಿದರು.
ಒಂದು ಜಿಲ್ಲೆಯಲ್ಲಿ 11 ತಂಡಗಳಿದ್ದು, ಜಿಲ್ಲೆ ಮತ್ತು ರಾಜ್ಯದ 50 ಸ್ಥಳಗಳಲ್ಲಿ ವಿವಿಧ ಸಮುದಾಯಗಳ ಕೇಂದ್ರೀಕೃತ ಸಭೆ ನಡೆಸಲಾಗುವುದು. ಅಲ್ಲದೆ ಸಾಮಾಜಿಕ ಜಾಲತಾಣ, ಕಾಲೇಜು, ಅಂಗಡಿ, ಮುಂಗಟ್ಟುಗಳು, ಸಂಘ-ಸಂಸ್ಥೆ ಸೇರಿದಂತೆ ಹೆಚ್ಚು ಜನ ಸಂದಣಿ ಇರುವ ಪ್ರದೇಶಗಳಲ್ಲಿ ಜನಾಭಿಪ್ರಾಯ ಸಂಗ್ರಹಿಸಲಾಗುವುದು ಎಂದರು.
ಸಲಹಾ ಪೆಟ್ಟಿಗೆ ಹಾಗೂ ಪತ್ರದಲ್ಲಿ ಕ್ಯೂಆರ್ ಕೋಡ್ ಲಗತ್ತಿಸಲಾಗಿದ್ದು, ಅದನ್ನು ಸ್ಕ್ಯಾನ್ ಮಾಡಿದರೆ ಸಲಹಾ ವೈಬ್‍ಸೈಟ್ ಒಪನ್ ಆಗಲಿದೆ. ಜಿಲ್ಲೆಯ ಪ್ರಜ್ಞಾವಂತ ನಾಗರೀಕರು ತಮ್ಮ ಸಲಹೆಯನ್ನು ಸಲಹಾ ಪೆಟ್ಟಿಗೆಯಲ್ಲಿ ಹಾಕಬಹುದು ಎಂದು ನವೀನ್ ಕುಮಾರ್ ಮಾಹಿತಿ ನೀಡಿದರು.
ಜಿಲ್ಲಾ ಸಂಚಾಲಕಿ ಪಟ್ಟಡ ರೀನಾ ಪ್ರಕಾಶ್ ಮಾತನಾಡಿ, “ಸಮೃದ್ಧ ಕರ್ನಾಟಕಕ್ಕೆ ಬಿಜೆಪಿಯೇ ಭರವಸೆ” ಎಂಬ ಘೋಷಣೆಯೊಂದಿಗೆ ಜನರ ಬಳಿಗೆ ಹೋಗುತ್ತೇವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಹ ಸಂಚಾಲಕ ಶಜಿಲ್ ಕೃಷ್ಣನ್ ಹಾಗೂ ಜಿಲ್ಲಾ ಮಾಧ್ಯಮ ಪ್ರಮುಖ್ ಪಿ.ಸುಬ್ರಮಣ್ಯ ಉಪಾಧ್ಯಾಯ ಉಪಸ್ಥಿತರಿದ್ದರು.