Advertisement
1:27 AM Thursday 7-December 2023

ಮಡಿಕೇರಿಯಲ್ಲಿ ನಿರ್ಮಾಣಗೊಳ್ಳಲಿದೆ 1 ಕೋಟಿ ರೂ. ವೆಚ್ಚದ ಗಾಂಧಿ ಸ್ಮಾರಕ

03/03/2023

ಮಡಿಕೇರಿ ಮಾ.3 : ಗಾಂಧಿ ಸ್ಮಾರಕ ನಿರ್ಮಾಣಕ್ಕೆ ರಾಜ್ಯ ಸರ್ಕಾರ 50 ಲಕ್ಷ ರೂ.ಗಳನ್ನು ಮಂಜೂರು ಮಾಡಿದ್ದು, ಜಿಲ್ಲಾಡಳಿತದ ಮೂಲಕ ನಡೆಯಲಿರುವ ಕಾಮಗಾರಿಗೆ ಕೊಡಗು ಜಿಲ್ಲಾ ಸರ್ವೋದಯ ಸಮಿತಿ ಸಂಪೂರ್ಣ ಸಹಕಾರ ನೀಡಲಿದೆ ಎಂದು ಸಮಿತಿಯ ನಿಕಟ ಪೂರ್ವ ಅಧ್ಯಕ್ಷ ಟಿ.ಪಿ.ರಮೇಶ್ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಸರ್ವೋದಯ ಸಮಿತಿಯ ನಿಯೋಗ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮಹಾತ್ಮಗಾಂಧಿ ಸ್ಮಾರಕ ನಿರ್ಮಾಣಕ್ಕೆ 1 ಕೋಟಿ ರೂ. ನೀಡುವಂತೆ ಮನವಿ ಮಾಡಿತ್ತು. ಮೊದಲ ಹಂತದಲ್ಲಿ 50 ಲಕ್ಷ ರೂ.ಗಳನ್ನು ಬಿಡುಗಡೆ ಮಾಡುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದ್ದು, ಇದೀಗ ಅನುದಾನ ಮಂಜೂರು ಮಾಡಲಾಗಿದೆ ಎಂದರು.
ಮಡಿಕೇರಿಯ ಖಜಾನೆಯಲ್ಲಿ ಇಡಲಾಗುತ್ತಿರುವ ಗಾಂಧೀಜಿ ಅವರ ಚಿತಾಭಸ್ಮಕ್ಕೆ ಶಾಶ್ವತ ನೆಲೆ ಕಲ್ಪಿಸಬೇಕು ಮತ್ತು ಪ್ರವಾಸಿಗರಿಗೆ ಗಾಂಧಿ ಚರಿತ್ರೆ ಪರಿಚಯಿಸಬೇಕು ಎನ್ನುವ ಉದ್ದೇಶದೊಂದಿಗೆ ದಶಕದ ಹಿಂದೆ ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾಗಿದ್ದ ಬಲದೇವಕೃಷ್ಣ ಅವರು ಸ್ಮಾರಕ ನಿರ್ಮಾಣದ ಯೋಜನೆಯೊಂದನ್ನು ರೂಪಿಸಿದರು. ಆದರೆ ಅನುದಾನ ದೊರೆಯದೆ ಯೋಜನೆ ನೆನೆಗುದಿಗೆ ಬಿದ್ದಿತ್ತು. ಈಗ 50 ಲಕ್ಷ ರೂ. ಬಿಡುಗಡೆ ಮಾಡಲಾಗಿದ್ದು, ಜಿಲ್ಲಾಡಳಿತ ಯೋಜನೆಯನ್ನು ಶೀಘ್ರ ಅನುಷ್ಠಾನಗೊಳಿಸಬೇಕು ಎಂದರು.
ಸುಮಾರು 30 ಸೆಂಟ್ ಜಾಗದಲ್ಲಿ ಸುಸಜ್ಜಿತವಾದ ಮಹಾತ್ಮ ಗಾಂಧಿ ಸ್ಮಾರಕ ನಿರ್ಮಾಣಗೊಳ್ಳಲಿದ್ದು, ಇದು 1 ಕೋಟಿ ರೂ. ವೆಚ್ಚದ ಮಹಾತ್ವಾಕಾಂಕ್ಷೆಯ ಯೋಜನೆಯಾಗಿದೆ. ಗಾಂಧಿ ಕೊಡಗಿಗೆ ಬಂದು ಹೋದ ಚರಿತ್ರೆ, ಜೀವನದ ಪುಟಗಳು, ಹೋರಾಟದ ಹಾದಿ ಹೀಗೆ ಹಲವು ವಿಚಾರಧಾರೆಗಳನ್ನು ಪರಿಚಯ ಮಾಡುವ ಛಾಯಾಚಿತ್ರಗಳು ಮತ್ತು ಗ್ರಂಥಾಲಯ ಸ್ಮಾರಕದಲ್ಲಿ ಇರಬೇಕು ಎನ್ನುವುದು ನಮ್ಮ ಉದ್ದೇಶವಾಗಿದೆ. ಗಾಂಧಿ ಸ್ಮಾರಕ ಇಂದಿನ ಯುವಪೀಳಿಗೆಗೆ ಅಧ್ಯಯನಕ್ಕೆ ಸಹಕಾರಿಯಾಗಿರಬೇಕು ಎಂದು ರಮೇಶ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಅಧ್ಯಕ್ಷ ಅಂಬೆಕಲ್ ಕುಶಾಲಪ್ಪ, ಕಾರ್ಯದರ್ಶಿ ಎಸ್.ಐ.ಮುನೀರ್ ಅಹಮ್ಮದ್, ಸಹ ಕಾರ್ಯದರ್ಶಿ ಕೆ.ಟಿ.ಬೇಬಿ ಮ್ಯಾಥ್ಯು, ಖಜಾಂಚಿ ಕಾನೆಹಿತ್ಲು ಮೊಣ್ಣಪ್ಪ ಹಾಗೂ ಸದಸ್ಯ ಲಿಯಾಕತ್ ಆಲಿ ಉಪಸ್ಥಿತರಿದ್ದರು.