Advertisement
4:19 AM Friday 8-December 2023

ಎನ್.ಯು.ನಾಚಪ್ಪ ವಿರುದ್ಧ ಕೊಡವ ಭಾಷಿಕ ಸಮುದಾಯಗಳ ಕೂಟ ಅಸಮಾಧಾನ : ಅಪ್ರಬುದ್ಧ ಹೇಳಿಕೆಯನ್ನು ಹಿಂಪಡೆಯಲು ಒತ್ತಾಯ

03/03/2023

ಮಡಿಕೇರಿ ಮಾ.3 : ಕೊಡವರ ಹೆಸರಿನಲ್ಲಿ ಕೊಡವರಲ್ಲದವರ ಅಧ್ಯಯನ ನಡೆಯುತ್ತಿದೆ ಎಂದು ಸಿಎನ್‍ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರು ಕೊಡವ ಭಾಷಿಕ 18 ಮೂಲನಿವಾಸಿ ಸಮುದಾಯಗಳ ವಿರುದ್ಧ ತೀರಾ ಅಪ್ರಬುದ್ಧ ಹೇಳಿಕೆಯನ್ನು ನೀಡಿದ್ದಾರೆ. ಈ ಹೇಳಿಕೆಯನ್ನು ಹಿಂಪಡೆಯದಿದ್ದಲ್ಲಿ ಹೋರಾಟ ನಡೆಸಬೇಕಾಗುತ್ತದೆ ಎಂದು ಕೊಡವ ಭಾಷಿಕ ಸಮುದಾಯಗಳ ಕೂಟದ ಅಧ್ಯಕ್ಷ ಡಾ.ಮೇಚಿರ ಸುಭಾಷ್ ನಾಣಯ್ಯ ಎಚ್ಚರಿಕೆ ನೀಡಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಕೊಡವ ಭಾಷೆ, ಸಂಸ್ಕೃತಿಯ ಉಳಿವಿಗಾಗಿ ಬದುಕನ್ನೇ ಮುಡುಪಾಗಿಟ್ಟುಕೊಂಡು ಮುನ್ನಡೆಯುತ್ತಿರುವ 18 ಕೊಡವ ಭಾಷಿಕ ಮೂಲ ನಿವಾಸಿ ಜನಾಂಗದವರ ಬಗ್ಗೆ ತುಚ್ಚವಾಗಿ ಅಸವಿಂಧಾನಿಕ ಹೇಳಿಕೆ ನೀಡಿರುವುದನ್ನು ಖಂಡಿಸುವುದಾಗಿ ತಿಳಿಸಿದ್ದಾರೆ.
ಫೆ.19ರಂದು ಬಿಟ್ಟಂಗಾಲ ಹೆಗ್ಗಡೆ ಸಮಾಜದಲ್ಲಿ ನಡೆದ ಕೊಡವ ಭಾಷಿಕ 18 ಮೂಲನಿವಾಸಿ ಸಮುದಾಯಗಳ ಸಮಾವೇಶದಲ್ಲಿ ಸಮಾಜ ಕಲ್ಯಾಣ ಇಲಾಖೆ ಸಚಿವರು 18 ಸಮುದಾಯ ಮೂಲ ನಿವಾಸಿಗಳ ಕುಲಶಾಸ್ತ್ರ ಅಧ್ಯಯನ ಮಾಡಿಸಲಾಗುವುದು. ಜನಾಂಗ ಬಾಂಧವರ ಹಿಂದಿನ ಕಾಲಘಟ್ಟದ ಐನ್‍ಮನೆ, ಮುಂದುಮನೆ, ಕೈಮಡ ನವೀಕರಣಕ್ಕೆ ರೂ. 5 ಕೋಟಿ ಅನುದಾನವನ್ನು ಬಿಡುಗಡೆ ಮಾಡಲಾಗುವುದೆಂದು ಘೋಷಿಸಿದ್ದರು. ಸಮಾರಂಭದಲ್ಲಿ ಉಪಸ್ಥಿತರಿದ್ದ ಜಿಲ್ಲೆಯ ಶಾಸಕರುಗಳು ಕೂಡ ಸಚಿವರ ಅಭಿಪ್ರಾಯಕ್ಕೆ ಪ್ರಶಂಶೆ ವ್ಯಕ್ತಪಡಿಸಿ ಮಾತನಾಡಿದ್ದಾರೆ.
ಆದರೆ ಇದೀಗ ಎನ್.ಯು.ನಾಚಪ್ಪ ಅವರು ಸಚಿವರ ಭರವಸೆಯನ್ನು ಸ್ವಾರ್ಥ ಚಿಂತನೆಯಿಂದ ಅವಲೋಕಿಸುತ್ತಿದ್ದಾರೆ. ಕೊಡವ ಭಾಷೆ, ಸಾಹಿತ್ಯ, ಸಂಸ್ಕೃತಿ, ಕಲೆ, ಪದ್ಧತಿ ಮತ್ತು ಸಂಪ್ರದಾಯಗಳನ್ನು ಮೈಗೂಡಿಸಿಕೊಂಡು ಪೋಷಿಸಿ ಉಳಿಸಿ ಬೆಳೆಸಿಕೊಂಡು ಮುನ್ನಡೆಯುತ್ತಿರುವ 18 ಕೊಡವ ಭಾಷಿಕ ಮೂಲ ನಿವಾಸಿ ಸಮುದಾಯದ ಬಗ್ಗೆ ಒಂದು ಮೂಲ ನಿವಾಸಿ ಸಮುದಾಯದ ಪ್ರತಿನಿಧಿಯಾಗಿ ಇಷ್ಟೊಂದು ಸಣ್ಣತನದ ಹೇಳಿಕೆ ನೀಡಿದ್ದಾರೆ. ಜಾತಿ ಜಾತಿಗಳ ಮಧ್ಯೆ ಸಂಘರ್ಷ ತಂದೊಡ್ಡುವ ಕೆಲಸ ಇದಾಗಿದೆ ಎಂದು ಆರೋಪಿಸಿದ್ದಾರೆ.
ಮಲಗಿರುವ ಹುಲಿಯನ್ನು ಕೆಣಕಿ ಮೈ ಮೇಲೆ ಬೀಳಿಸಿಕೊಂಡು ಘಾಸಿಗೊಳಿಸಿದಂತಾಗಿದೆ. ಸರ್ಕಾರಿ ಮಟ್ಟದಲ್ಲಿ ನಿಯಮಬದ್ಧವಾಗಿ ಕುಲಶಾಸ್ತ್ರ ಅಧ್ಯಯನಗೊಳಿಸಲು ಅದಕ್ಕೆಂದೇ ಒಂದು ವಿಶೇಷ ಸಮಿತಿ ಇರುವಾಗ ಅನಾವಶ್ಯಕ ಜನಾಂಗದ ಮಧ್ಯೆ ಗೊಂದಲ ಸೃಷ್ಟಿಸುವ ಹೇಳಿಕೆಯನ್ನು ನೀಡುವುದರಲ್ಲಿ ಅರ್ಥವಿಲ್ಲ. ಕನಿಷ್ಠ ಜ್ಞಾನ ಮತ್ತು ಸಂಸ್ಕೃತಿಯ ಅರಿವಿಲ್ಲದೆ ಹುಲಿ-ಬೆಕ್ಕು ಪದಗಳ ಬಳಕೆ ಖಂಡನೀಯವೆಂದು ಸುಭಾಷ್ ನಾಣಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೊಡಗಿನಲ್ಲಿ ನೆಲೆಸಿರುವ 18 ಕೊಡವ ಭಾಷಿಕ ಜನಾಂಗದವರ ಸಂಸ್ಕೃತಿ- ಕಲೆ, ಸಂಪ್ರದಾಯದ ಬಗ್ಗೆ ಕನಿಷ್ಠ ಅರಿವು, ಗೌರವ ಇದ್ದಿದ್ದರೆ ಇಂತಹ ಬಾಲಿಶತನದ ಹೇಳಿಕೆ ಹೊರ ಬರುತ್ತಿರಲಿಲ್ಲ. ಅಪ್ರಬುದ್ಧ ಮಾತುಗಳಿಂದ 18 ಮೂಲ ನಿವಾಸಿ ಸಮುದಾಯಗಳ ಜನಾಂಗ ಬಾಂಧವರಲ್ಲಿ, ತೀವ್ರತರಹದ ನೋವು ಉಂಟಾಗಿದ್ದು, ಈ ರೀತಿಯ ಬಾಲಿಶ ಹೇಳಿಕೆಗಳನ್ನು ನೀಡುವುದನ್ನು ನಾಚಪ್ಪ ಅವರು ತಕ್ಷಣ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
ಯಾವುದೇ ರೀತಿಯಲ್ಲಿ ಸರ್ಕಾರದ ಹಾದಿ ತಪ್ಪಿಸುವ ಕೆಲಸ ಆಗಬಾರದು, ಒಕ್ಕೂಟವಾಗಲಿ ಅಥವಾ 18 ಮೂಲ ನಿವಾಸಿ ಜನಾಂಗದವರಾಗಲಿ, ಅವರ ಸಮುದಾಯದ ವಿಚಾರವಾಗಿ ಎಲ್ಲೂ ಮಧ್ಯಸ್ಥಿಕೆ ವಹಿಸಿಲ್ಲ ಮತ್ತು ಮಾತನಾಡುತ್ತಿಲ್ಲ. ಹೀಗಿರುವಾಗ 18 ಕೊಡವ ಭಾಷಿಕ ಮೂಲ ನಿವಾಸಿ ಜನಾಂಗ ಬಾಂಧವರ ಬಗ್ಗೆ ಅನಾವಶ್ಯಕ ಮೂಗು ತೂರಿಸುವುದು ಅವರಿಗೆ ಶೋಭೆ ತರುವುದಿಲ್ಲ.
ಕೊಡವ ಭಾಷಿಕ ಜನಾಂಗದವರ ಬಗ್ಗೆ ನೀಡಿರುವ ಬಾಲಿಶ ಹೇಳಿಕೆಯನ್ನು ನಾಚಪ್ಪ ಅವರು ತಕ್ಷಣ ಹಿಂಪಡೆಯಬೇಕು ಮತ್ತು ಮುಂದೆ ಈ ರೀತಿಯ ಹೇಳಿಕೆಗಳನ್ನು ನೀಡಬಾರದು. ಇದು ಹೀಗೇ ಮುಂದುವರೆದರೆ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಸುಭಾಷ್ ನಾಣಯ್ಯ ಎಚ್ಚರಿಕೆ ನೀಡಿದ್ದಾರೆ.