Advertisement
11:14 AM Monday 4-December 2023

ಮಾ.18 ಮತ್ತು 19 ರಂದು ರಾಷ್ಟ್ರಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿ

03/03/2023

ಮಡಿಕೇರಿ ಮಾ.3 : ಕರ್ನಾಟಕ ರಾಜ್ಯ ಅಡಕ್ ವಾಲಿಬಾಲ್ ಅಸೋಸಿಯೇಷನ್ ಹಾಗೂ ಕೊಡಗು ಜಿಲ್ಲಾ ವಾಲಿಬಾಲ್ ಅಸೋಸಿಯೇಷನ್ ಮತ್ತು ಎಚ್.ಡಿ.ದೇವೇಗೌಡ ಅಭಿಮಾನಿಗಳ ಬಳಗ ಸಂಯುಕ್ತಾಶ್ರಯದಲ್ಲಿ ಮಾ.18 ಮತ್ತು 19ರಂದು ಮಡಿಕೇರಿಯಲ್ಲಿ ಹೊನಲು ಬೆಳಕಿನ ರಾಷ್ಟ್ರಮಟ್ಟದ ವಾಲಿಬಾಲ್ ಪಂದ್ಯಾವಳಿ ನಡೆಯಲಿದೆ ಎಂದು ಬಳಗದ ಸಂಚಾಲಕ ಎನ್.ಸಿ.ಸುನಿಲ್ ತಿಳಿಸಿದರು.

ನಗರದಲ್ಲಿ ಸಿದ್ದುಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಜನರಲ್ ತಿಮ್ಮಯ್ಯ ಮೈದಾನದಲ್ಲಿ ಪುರುಷ ಮತ್ತು ಮಹಿಳೆಯರ ವಿಭಾಗದಲ್ಲಿ ಪಂದ್ಯಾವಳಿ ನಡೆಯಲಿದ್ದು, ಪುರುಷರ ವಿಭಾಗದ ಪಂದ್ಯಾವಳಿಗೆ ಕೇರಳ, ತಮಿಳುನಾಡು, ಆಂದ್ರ ಪ್ರದೇಶ ಸೇರಿದಂತೆ ವಿವಿಧೆಡೆಯಿಂದ 8 ರಿಂದ 10 ತಂಡಗಳು ಆಗಮಿಸಲಿದೆ. ಮಹಿಳೆಯರ ವಿಭಾಗದಲ್ಲಿ 4 ತಂಡಗಳು ಪಾಲ್ಗೊಳ್ಳಲಿದ್ದು, ಪ್ರಶಸ್ತಿಗಾಗಿ ಕರ್ನಾಟಕದಿಂದ 2 ತಂಡಗಳು, ಕೇರಳ ಮತ್ತು ತಮಿಳುನಾಡಿನಿಂದ ತಲಾ 1 ತಂಡಗಳು ಸೆಣಸಾಟ ನಡೆಸಲಿದೆ ಎಂದು ಮಾಹಿತಿ ನೀಡಿದರು.

ಪುರುಷರ ವಿಭಾಗದಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದ ತಂಡಕ್ಕೆ ಒಟ್ಟು ರೂ.1,25,000 ನೀಡಲಾಗುವುದು. ಮಹಿಳೆಯರ ವಿಭಾಗದಲ್ಲಿ ಒಟ್ಟು 70,000 ನಗದು ಹಾಗೂ ಆಕರ್ಷಕ ಟ್ರೋಫಿ ನೀಡಿ ಗೌರವಿಸಲಾಗುವುದು. ಅಲ್ಲದೆ ಕ್ರೀಡಾಕೂಟದಲ್ಲಿ ಪಾಲ್ಗೊಂಡ ತಂಡಗಳಿಗೆ ತಲಾ 5,000 ನಗದು ನೀಡಲಾಗುವುದು ಎಂದು ತಿಳಿಸಿದರು.

ಬಳಗದ ಮಹಿಳಾ ಸಂಚಾಲಕಿ ಪುಷ್ಪಾವತಿ ಮಾತನಾಡಿ, ಉದ್ಘಾಟನಾ ಸಮಾರಂಭಕ್ಕೆ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆಗಮಿಸುವ ಸಾಧ್ಯತೆಯಿದೆ. ಕ್ರೀಡಾಕೂಟಕ್ಕೆ ಜಿಲ್ಲೆಯ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಬಳಗದ ಕಾರ್ಯದರ್ಶಿ ಗೌತಮ್, ಸಹ ಸಂಚಾಲಕರಾದ ರಾಜೀವ್, ಉಮೇಶ್, ಮದನ್ ಉಪಸ್ಥಿತರಿದ್ದರು.