Advertisement
10:34 AM Sunday 3-December 2023

ಬಿಜೆಪಿ ಕಾರ್ಯಕರ್ತರ ಸಭೆ : ಜಾತಿ ರಾಜಕಾರಣಕ್ಕೆ ಭವಿಷ್ಯವಿಲ್ಲ : ಶಾಸಕ ಕೆ.ಜಿ.ಬೋಪಯ್ಯ

03/03/2023

ಮಡಿಕೇರಿ ಮಾ.3 : ಜಾತಿ ರಾಜಕಾರಣಕ್ಕೆ ಭವಿಷ್ಯವಿಲ್ಲ, ನಾವು ಹುಟ್ಟಿದ ಜಾತಿಯ ಬಗ್ಗೆ ಅಭಿಮಾನವಿರಲಿ ದುರಭಿಮಾನ ಬೇಡ. ಜಾತಿಯನ್ನು ಮುಂದೆ ಮಾಡಿ ನಡೆಸುವ ರಾಜಕೀಯವನ್ನು ಸವಾಲಾಗಿ ಸ್ವೀಕರಿಸಬೇಕೆಂದು ವಿರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ಕರೆ ನೀಡಿದ್ದಾರೆ.
ನಗರದ ಗೌಡ ಸಮಾಜದ ಸಭಾಂಗಣದಲ್ಲಿ ನಡೆದ ಬಿಜೆಪಿ ಮಡಿಕೇರಿ ಗ್ರಾಮಾಂತರ ಮತ್ತು ನಗರ ಮಂಡಳ ‘ಕಾರ್ಯಕರ್ತರ ಮಿಲನ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಬಿಜೆಪಿ ಪಕ್ಷ ಅಭಿವೃದ್ಧಿಯೊಂದಿಗೆ ದೇಶದ ಅಖಂಡತೆಯ ಬಗ್ಗೆ ಚಿಂತನೆಗಳನ್ನು ಹರಿಸುವ ಪಕ್ಷವಾಗಿದ್ದು, ಇಂತಹ ಚಿಂತನೆಗಳಿಲ್ಲದಿದ್ದಲ್ಲಿ ದೇಶ ದೇಶವಾಗಿ ಉಳಿಯಲಾರದು. ಕಾಂಗ್ರೆಸ್‌ನ ಅಪಪ್ರಚಾರಗಳನ್ನು ಮೆಟ್ಟಿ ನಿಲ್ಲುವ ಮೂಲಕ ಬಿಜೆಪಿ ವಿಧಾನಸಭಾ ಚುನಾವಣೆಯಲ್ಲಿ 150 ಸ್ಥಾನಗಳನ್ನು ಗಳಿಸಬೇಕು. ಪಕ್ಷ ಸ್ವತಂತ್ರವಾಗಿ ಅಧಿಕಾರಕ್ಕೆ ಬರುವಂತೆ ಮಾಡಲು ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಾಧನೆಗಳನ್ನು ಮನೆ ಮನೆಗೆ ತಲುಪಿಸುವ ಕಾರ್ಯವನ್ನು ಕಾರ್ಯಕರ್ತರು ಮಾಡಬೇಕು ಎಂದರು.
ಕರ್ನಾಟಕವನ್ನು ಬಿಜೆಪಿ ಮಾರಾಟ ಮಾಡುತ್ತಿದೆ ಎನ್ನುವ ಕಾಂಗ್ರೆಸ್ ಟೀಕೆಗೆ ಇದೇ ಸಂದರ್ಭ ತಿರುಗೇಟು ನೀಡಿದ ಕೆ.ಜಿ.ಬೋಪಯ್ಯ, ಪಾಕಿಸ್ತಾನಕ್ಕೆ ಪಿಒಕೆಯನ್ನು ಬಿಟ್ಟು ಕೊಟ್ಟದ್ದು ಯಾರು, ಇಂಡೋ ಚೀನಾ ಬಾಯಿ ಬಾಯಿ ಎನ್ನುತ್ತಲೆ ನಡೆದ ಯುದ್ಧದಲ್ಲಿ ಟಿಬೆಟ್ ಪ್ರಾಂತ್ಯವನ್ನು ಬಿಟ್ಟು ಕೊಟ್ಟದ್ದು ಯಾರೆಂದು ಪ್ರಶ್ನಿಸಿದರು. ಬಿಜೆಪಿಯ ವಿರುದ್ಧ ಅನಗತ್ಯ ಅಪಪ್ರಚಾರದಲ್ಲಿ ತೊಡಗಿದಲ್ಲಿ ಕಾಂಗ್ರೆಸ್ ವಂಶಸ್ಥರ ನಡೆಗಳನ್ನು ಪ್ರಶ್ನಿಸಬೇಕಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಮಾತನಾಡಿ, ವಿಧ್ವಂಸಕ ಕೃತ್ಯವೆಸಗಿದವರನ್ನು ಸಮರ್ಥಿಸುವ ಕೆಲಸ ಮಾಡಿರುವ ಸಿದ್ದರಾಮಯ್ಯ ಹಾಗೂ ಸ್ವಾಭಿಮಾನಿ ಸ್ವಾವಲಂಬಿ ಬದುಕನ್ನು ಜನಸಾಮಾನ್ಯರಿಗೆ ಒದಗಿಸುವ ಬಿಜೆಪಿ ನಡುವಿನ ಹೋರಾಟವೇ ಮುಂದಿನ ವಿಧಾನಸಭಾ ಚುನಾವಣೆ ಆಗಿದೆ. ಪೂರ್ಣ ಬಹುಮತವಿಲ್ಲದ ಬಿಜೆಪಿ ಇತರ ಪಕ್ಷಗಳಿಂದ ಬಂದವರನ್ನು ಸೇರಿಸಿಕೊಂಡು ಸರ್ಕಾರ ರಚಿಸಿದೆ ಎಂದರು.
ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗ ಒಂದು ವರ್ಗಕ್ಕೆ ಸೀಮಿತವಾಗಿ ಶಾದಿಭಾಗ್ಯ ಯೋಜನೆ ಜಾರಿಗೆ ತಂದರು ಆದರೆ, ಯಡಿಯೂರಪ್ಪ ಅವರ ಅವಧಿಯಲ್ಲಿ ಭಾಗ್ಯಲಕ್ಷ್ಮಿ ಯೋಜನೆಯನ್ನು ಜಾರಿಗೆ ತಂದು ಎಲ್ಲಾ ವರ್ಗಕ್ಕೂ ಅದನ್ನು ತಲುಪುವಂತೆ ಮಾಡಿದರು. ಸರ್ವ ಜನರ ಹಿತವನ್ನು ಬಿಜೆಪಿ ಬಯಸುತ್ತದೆ ಎಂದು ತಿಳಿಸಿದರು.
ಕೊಡಗು ಜಿಲ್ಲೆಯ ಎರಡು ಕ್ಷೇತ್ರಗಳಿಗೆ ಯಡಿಯೂರಪ್ಪ ಹಾಗೂ ಬೊಮ್ಮಾಯಿ ಸರ್ಕಾರದ ಅವಧಿಯಲ್ಲಿ ವಿಶೇಷ ಅನುದಾನಗಳು ಸೇರಿದಂತೆ ಒಟ್ಟು 4 ಸಾವಿರ ಕೋಟಿ ರೂ. ದೊರತ್ತಿದೆ ಎಂದು ಹೇಳಿದರು.
::: ಟೂರಿಸ್ಟ್ ಅಭ್ಯರ್ಥಿ :::
ವಿರಾಜಪೇಟೆ ಕ್ಷೇತ್ರಕ್ಕೆ ‘ಟೂರಿಸ್ಟ್ ಕ್ಯಾಂಡಿಟೇಟ್’ ಬರುತ್ತಿದ್ದಾರೆಂದು ಕಾಂಗ್ರೆಸ್‌ನ್ನು ಲೇವಡಿ ಮಾಡಿದ ಅಪ್ಪಚ್ಚು ರಂಜನ್, ವಾರಕ್ಕೊಮ್ಮೆ ಜಿಲ್ಲೆಗೆ ಬರುವ, ಜನಸಾಮಾನ್ಯರ ಸಂಪರ್ಕಕ್ಕೆ ದೊರಕದ ಇಂತಹವರು ನಮಗೆ ಬೇಕೆ ಎಂದು ಪ್ರಶ್ನಿಸಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಬಿನ್ ದೇವಯ್ಯ ಮಾತನಾಡಿ, ಮಾರ್ಚ್ 18 ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಡಿಕೇರಿಯಲ್ಲಿ ನಡೆಯುವ ಫಲಾನುಭವಿಗಳ ಸಮಾವೇಶ ಹಾಗೂ ನಾಪೋಕ್ಲುವಿನಲ್ಲಿ ನಡೆಯುವ ಕೊಡವ ಕೌಟುಂಬಿಕ ಹಾಕಿ ಉತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ. ಮಾರ್ಚ್ 5 ರಿಂದ 20 ರವರೆಗೆ ಜಿಲ್ಲೆಯ ವಿವಿಧ ಕಡೆ ವಿವಿಧ ಮೋರ್ಚಾಗಳ ಸಮಾವೇಶ ಆಯೋಜಿತವಾಗಿದೆ. ಮಾರ್ಚ್ 10 ಮತ್ತು 11 ರಂದು ಬಿಜೆಪಿಯ ರಥಯಾತ್ರೆಯೂ ಕೊಡಗಿನಲ್ಲಿ ಸಂಚರಿಸಲಿದೆ ಎಂದು ಮಾಹಿತಿ ನೀಡಿದರು.
ಮಡಿಕೇರಿ ಕ್ಷೇತ್ರದ ಉಸ್ತುವಾರಿ ತಿಮ್ಮಪ್ಪ ಶೆಟ್ಟಿ, ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಬಿ.ಬಿ. ಭಾರತೀಶ್, ನಗರಸಭಾ ಅಧ್ಯಕ್ಷೆ ಅನಿತಾ ಪೂವಯ್ಯ, ರಾಜ್ಯ ಜೀವ ವೈವಿಧ್ಯ ಮಂಡಳಿಯ ಅಧ್ಯಕ್ಷ ರವಿ ಕಾಳಪ್ಪ, ಪಕ್ಷದ ಪ್ರಮುಖರಾದ ಶಾಂತೆಯಂಡ ರವಿ ಕುಶಾಲಪ್ಪ, ಅಪ್ಪಚಟ್ಟೋಳಂಡ ಮನು ಮುತ್ತಪ್ಪ, ತಳೂರು ಕಿಶೋರ್ ಕುಮಾರ್, ಮನು ಮಂಜುನಾಥ್, ಉಮೇಶ್ ಸುಬ್ರಮಣಿ, ಜಿ.ಪಂ ಮಾಜಿ ಅಧ್ಯಕ್ಷ ಹರೀಶ್ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.